ಬಾಗಲಕೋಟೆ:(ಫೆ.5) Ibrahim Sutar: ಕನ್ನಡದ ಕಬೀರ ಎಂದೇ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 76 ವರ್ಷದ ಇಬ್ರಾಹಿಂ ಸುತಾರ್ ಅವರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಇಂದು ಬೆಳಗ್ಗೆ 6.30ಕ್ಕೆ ನಿಧನರಾದರು.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಕಳೆದ ಮೂರ್ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಲಘು ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರು ಇಬ್ರಾಹಿಂ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಬ್ರಾಹಿಂ ಸುತಾರ್ ಅವರು ಕೊನೆಯುಸಿರೆಳೆದಿದ್ದಾರೆ. ಸುತಾರ್ ಅವರಿಗೆ ಪತ್ನಿ ಹಾಗೂ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಭಾವೈಕ್ಯ ಜನಪದ ಸಂಗೀತ ಮೇಳ ಸ್ಥಾಪನೆ:
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದ ಬಡ ಕುಟುಂಬದಲ್ಲಿ 10-5-1940 ರಲ್ಲಿ ಜನಿಸಿದರು. 1970 ರಲ್ಲಿ ಭಾವೈಕ್ಯ ಜನಪದ ಸಂಗೀತ ಮೇಳ ಸ್ಥಾಪಿಸಿ, ಕಳೆದ 44 ವರ್ಷಗಳಿಂದ ನಾಡಿಗೆ ಸಾಹಿತ್ಯ ವಚನ, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮುಖಾಂತರ ಭಾವೈಕ್ಯತೆಯ ಸಂದೇಶವನ್ನು ಸಾರುತ್ತ ಬಂದಿದ್ದರು.
ಹಿಂದೂ-ಮುಸ್ಲಿಂ ಭಾವೈಕ್ಯತೆಯ ಶ್ರೇಷ್ಠ ಪ್ರವಚನಕಾರ ಹಾಗೂ ಸೂಫಿ ಸಂತರಾಗಿದ್ದ ಇಬ್ರಾಹಿಂ ಸುತಾರ್ ಅವರಿಗೆ 1995ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿತು.
ಸಾಹಿತ್ಯದ ಜೊತೆ ಜನಪರ ಸೇವೆ:
ಭಾವೈಕ್ಯ ಭಕ್ತಿ ರಸಮಂಜರಿ, ಗೀತಾ ಸಂವಾದ ತರಂಗಿಣಿ, ಆಧ್ಯಾತ್ಮ ಸಂವಾದ ತರಂಗಿಣಿ, ಪ್ರಶ್ನೋತ್ತರಗಳ ಜೊತೆ ಪದ್ಯಗಳನ್ನು ಹಾಡುವ ಸಂವಾದ ರೂಪದ ಭಜನೆ ಹೀಗೆ ನಾನಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದರು.
ಭಜನಾ ಸಂಘದ ವತಿಯಿಂದ ಜನಪರ ಕಾರ್ಯಕ್ರಮಗಳನ್ನು ಕೂಡ ಮಾಡುತ್ತಿದ್ದರು. ಯೋಗಾಸನ ಶಿಬಿರಗಳು, ಸಾಕ್ಷರತಾ ಶಿಬಿರ, ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ, ಬೋರ್ವೆಲ್ ವ್ಯವಸ್ಥೆ, ಶಾಲಾ ಕೊಠಡಿಗಳ ನಿರ್ಮಾಣ ಮಾಡಿದ್ದರು.

ಶ್ರವಣಕ್ಕೊಂದು ಸಮಾಜ ಸೇವೆ:
ಇಬ್ರಾಹಿಂ ಸುತಾರ್ ಅವರು ಶ್ರವಣಕ್ಕೊಂದು ಸಮಾಜ ಸೇವೆ ಎಂಬ ಹೊಸ ಪರಿಕಲ್ಪನೆಯನ್ನು ತಂದಿದ್ದರು. ಸರ್ದಾರ 1988 ರಲ್ಲಿ ಶೇಗುಣಸಿ – ತೇರದಾಳ ಮಧ್ಯೆ 9 ಕಿಲೋಮೀಟರ್ ಶ್ರಮದಾನದಿಂದ ರಸ್ತೆ ನಿರ್ಮಾಣ ಮಾಡಿದ್ದರು, 2002ರಲ್ಲಿ ಢವಲೇಶ್ವರಿಯಲ್ಲಿ ಶ್ರೀ ವಿವೇಕಾನಂದ ಪ್ರಾಥಮಿಕ ಶಾಲೆಯ ನಿರ್ಮಾಣ ಮಾಡಿದರು. 2005ರಲ್ಲಿ ಬೀಳಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಕಲ್ಯಾಣ ಮಂಟಪ ಹಾಗೂ 2011 ರಲ್ಲಿ ಅರಳಿಮಟ್ಟಿಯಲ್ಲಿ ಶ್ರೀ ಬಸವೇಶ್ವರ ಯಾತ್ರಿ ನಿವಾಸ ನಿರ್ಮಾಣ ಮಾಡಿದರು.

ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಾದ ಮಹಾರಾಷ್ಟ್ರ ಆಂಧ್ರಪ್ರದೇಶ, ದೆಹಲಿ ಒರಿಸ್ಸಾ ರಾಜಸ್ಥಾನ ಗೋವಾದಲ್ಲಿ ಭಾವೈಕ್ಯ ಜಾನಪದ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಸುತಾರ ನಿಧನಕ್ಕೆ ಗಣ್ಯರ ಸಂತಾಪ
ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ, ಸರ್ವಧರ್ಮ ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಅವರು ಇಂದು ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ.
ಸರ್ವಧರ್ಮ ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಅವರು ಇಂದು ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ.
— Basavaraj S Bommai (@BSBommai) February 5, 2022
ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/6t9rEdyyr1