ಕಲಬುರ್ಗಿ: (ಫೆ.5) Hijab: ಕರಾವಳಿಯಲ್ಲಿ ಹಿಜಾಬ್ ಧರಿಸುವ ಕುರಿತು ವಿದ್ಯಾರ್ಥಿಗಳು ಮಾಡುತ್ತಿರುವ ಹೋರಾಟಕ್ಕೆ ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಫಾತಿಮಾ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾನು ವಿಧಾನಸೌಧದಲ್ಲಿ ಜಿಹಾಬ್ ಧರಿಸಿ ಕೂರುತ್ತೇನೆ, ಧೈರ್ಯವಿದ್ದರೆ ಯಾರಾದರೂ ತಡೆಯಲಿ. ರಾಜ್ಯದಲ್ಲಿ ಯಾವ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಈ ರೀತಿಯ ವಿಚಾರಗಳನ್ನು ಬಿಜೆಪಿ ಸರ್ಕಾರ ಮುಂದೆ ತರುತ್ತಿದೆ. ಸಾಧ್ಯವಾದರೆ ಉಡುಪಿಗೆ ಹೋಗಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳನ್ನು ಗೇಟ್ ಹೊರಗಡೆ ನಿಲ್ಲಿಸಿದ ಪ್ರಾಂಶುಪಾಲರನ್ನು ಕೂಡಲೇ ಅಮಾನತು ಮಾಡಬೇಕು. ದೆಹಲಿಯಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರ ಹಾಗೂ ಕರಾವಳಿಯಲ್ಲಿ ಹಿಜಾಬ್ ವಿರುದ್ಧ ಬಜರಂಗದಳದವರು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಬಿಜೆಪಿ ನಡೆಸುತ್ತಿರುವ ಕುತಂತ್ರ ಎಂದು ಜಯನಗರ ಶಾಸಕಿ ಸೌಮ್ಯ ರೆಡ್ಡಿ ಹೇಳಿದ್ದಾರೆ.

ಮೈಸೂರು ಮಹಾರಾಜರ ಕಾಲದಿಂದಲೂ ಹಿಜಾಬ್ ದರಿಸುವುದು ಜಾರಿಯಲ್ಲಿದೆ. ಹೆಣ್ಣುಮಕ್ಕಳು ತೆರಳುವ ಗಾಡಿಗಳಿಗೂ ಪರದೆ ಹಾಕಿರುವ ಇತಿಹಾಸವಿದೆ. ಸಿಎಂ ಬೊಮ್ಮಾಯಿ ಕೂಡ ಹಿಜಾಬ್ ಹಾಕಿಕೊಂಡಿದ್ದಾರೆ. ಇನ್ನು ಆ ಪ್ರಾಂಶುಪಾಲರು ಪಾಠ ಮಾಡುವವರು ಅವರಿಗೆ ಬುದ್ಧಿ ಇದೆಯಾ? ಎಂದು ಎಂದು ಸಿ.ಎಂ ಇಬ್ರಾಹಿಂ ಅವರು ಹೇಳಿದ್ದಾರೆ.
ಮುಖ್ಯಮಂತ್ರಿಗೆ ತನ್ವೀರ್ ಸೇಠ್ ಪತ್ರ:
ಉಡುಪಿ ಕಾಲೇಜಿನಲ್ಲಿ ಆದೇಶ ವಿವಾದದ ಸುಳಿಯಲ್ಲಿ ಸಿಲುಕಿದೆ. ಅಲ್ಪಸಂಖ್ಯಾತ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡುವುದನ್ನು ನಿಷೇಧಿಸಿದ್ದಾರೆ. ಇಸ್ಲಾಂನಲ್ಲಿ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದು, ಸಿಖ್ ಧರ್ಮದಲ್ಲಿ ಪೇಟ ಧರಿಸುವುದು, ಕ್ರೈಸ್ತರಲ್ಲಿ ಸನ್ಯಾಸಿ ದೀಕ್ಷೆ ಪಡೆದ ಹೆಣ್ಣುಮಕ್ಕಳು ಸ್ಕಾರ್ಫ್ ಧರಿಸುವುದು ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಪದ್ಧತಿ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಇಲ್ಲಿಯವರೆಗೂ ಯಾವುದೇ ನಿಷೇಧವಾಗಲಿ ಮಾಡಿಲ್ಲ. ಆದರೆ ಅನೇಕ ಸಂಘಟನೆಗಳು ಇದನ್ನು ದೊಡ್ಡದಾಗಿ ವೈಭವೀಕರಿಸಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ನಾನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವನಾಗಿದ್ದಾಗ ಹೆಣ್ಣುಮಕ್ಕಳಿಗೆ ಸ್ಕರ್ಟ್ ಮತ್ತು ಶರ್ಟ್ ಸಮವಸ್ತ್ರ ಬದಲಾಯಿಸಿ ಚೂಡಿದಾರ್ ಧರಿಸುವುದು ಕಡ್ಡಾಯಗೊಳಿಸಿದೆ. ಇದು ಹೆಣ್ಣು ಮಕ್ಕಳಿಗೆ ಶಾಲೆಯಲ್ಲಿ ಆಗುತ್ತಿದ್ದ ಲೈಂಗಿಕ ಕಿರುಕುಳವನ್ನು ತಡೆಯಲು ಸಹಕಾರಿಯಾಗಿತ್ತು ಎಂದು ತಿಳಿಸಿದ್ದಾರೆ.
ಹೆಣ್ಣು ಮಕ್ಕಳಲ್ಲಿ ಉಂಟಾಗುವ ವಯೋಸಹಜ ದೈಹಿಕ ಕ್ರಿಯೆಯನ್ನು ಮರೆಮಾಚಲು ಹಿಜಾಬ್ ಅನುಕೂಲವಾಗಿದೆ. ಪ್ರತಿಯೊಂದು ಧರ್ಮಗಳಲ್ಲೂ ವಯಸ್ಸಿಗನುಗುಣವಾಗಿ ವಸ್ತ್ರಗಳನ್ನು ಧರಿಸುವುದು ಸಾಮಾನ್ಯ. ರಾಜ್ಯ ಸರ್ಕಾರ ಪ್ರಸ್ತುತ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ರಕ್ಷಣೆಗಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಉಡುಪಿ ಕಾಲೇಜಿನ ಪ್ರಾಂಶುಪಾಲರ ನಡಿಗೆ ಮಕ್ಕಳಲ್ಲಿ ಜಾತಿ ಭೇದ ಭಾವನೆ ಹುಟ್ಟುತ್ತಿದೆ. ಪರಿಸ್ಥಿತಿ ಕೈಮೀರುವ ಮುನ್ನ ಪ್ರಾಂಶುಪಾಲರಿಗೆ ಸೂಕ್ತ ಆದೇಶವನ್ನು ನೀಡಿ ಎಂದು ಪತ್ರದ ಮೂಲಕ ಶಾಸಕ ತನ್ವೀರ್ ಸೇಠ್ ಮನವಿ ಮಾಡಿದ್ದಾರೆ