Cm Ibrahim: (ಜ.27) ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುವ ನಿರ್ಧಾರ ಮಾಡಿರುವ ಕುರಿತು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎ.ಹುಸೇನ್ ಅವರು ಮನವಿ ಮಾಡಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ತಾವು, ಆ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇನ್ನೂ ಮೂರು ವರ್ಷಗಳ ಅವಧಿ ಬಾಕಿ ಇರುವಾಗಲೇ ನಿಮ್ಮ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದರ ಜತೆಗೆ ಪಕ್ಷ ತ್ಯಾಗಕ್ಕೂ ನಿರ್ಧರಿಸುವ ವಿಚಾರ ನಮಗೆಲ್ಲರಿಗೂ ದಿಗ್ಬ್ರಮೆ ಮೂಡಿಸಿದೆ.

ಅಲ್ಪಸಂಖ್ಯಾತ ಸಮುದಾಯದ ಹಿತದೃಷ್ಟಿಯಿಂದ ನಿಮ್ಮ ಈ ನಿರ್ಧಾರ ಅತ್ಯಂತ ಕಳವಳ ಹಾಗೂ ಬೇಸರವನ್ನು ಸೃಷ್ಟಿಸಿದೆ. ರಾಜ್ಯ ಹಾಗೂ ರಾಷ್ಟ್ರದ ಬದಲಾದ ರಾಜಕೀಯ ಸಂದರ್ಭದಲ್ಲಿ ನಿಮ್ಮಂಥ ಹಿರಿಯರು ಮುಂಚೂಣಿಯಲ್ಲಿ ನಿಂತು ಸಮುದಾಯವನ್ನು ಮುನ್ನಡೆಸುವ ಅನಿವಾರ್ಯತೆ ಇದೆ. ಆದರೆ ಸಣ್ಣ ಮುನಿಸಿನ ಕಾರಣಕ್ಕಾಗಿ ಪಕ್ಷ ತ್ಯಾಗದ ದೊಡ್ಡ ನಿರ್ಧಾರ ಬೇಡ ಎಂದು ಮನವಿ ಮಾಡಿದ್ದಾರೆ.
ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶವಿಲ್ಲ
ಅಲ್ಪಸಂಖ್ಯಾತ ಸಮುದಾಯ ಇಂದು ಯಾವ ಸ್ಥಿತಿಯಲ್ಲಿದೆ ಎಂಬುದು ತಮಗೆ ಅರ್ಥವಾಗದ ಸಂಗತಿ ಅಲ್ಲ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಸರಕಾರಿ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸುವ ಸ್ಥಿತಿಯಲ್ಲಿ ನಮ್ಮ ವ್ಯವಸ್ಥೆ ತಲುಪಿದೆ. ಇಂಥ ಸಂದರ್ಭದಲ್ಲಿ ಸದನದ ಒಳಗಿದ್ದು ಸಮುದಾಯದ ಪರ ಧ್ವನಿ ಎತ್ತಬೇಕಾಗಿದ್ದ ನೀವು, ಶಸ್ತ್ರ ತ್ಯಾಗಕ್ಕೆ ಮುಂದಾಗಿರುವುದು ಆತಂಕದ ಸಂಗತಿ.
ಅನ್ಯನ್ಯ ಕಾರಣಗಳಿಂದ ಈ ಹಿಂದ ನಮ್ಮ ಸಮುದಾಯಕ್ಕೆ ಲಭಿಸಿದ್ದ ಪರಿಷತ್ ಸ್ಥಾನ ತಪ್ಪು ಲೆಕ್ಕಾಚಾರ ದಿಂದ ಕೈ ತಪ್ಪಿ ಹೋಗಿದೆ. ಈಗ ನೀವು ರಾಜೀನಾಮೆ ನೀಡಿದರೆ ಅದರ ಲಾಭವಾಗುವುದು ಬಿಜೆಪಿಗೆ ಹೊರತು ಅಲ್ಪಸಂಖ್ಯಾತ ಸಮುದಾಯಕ್ಕೆ ಅಲ್ಲ. ಹೀಗಾಗಿ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಹಾಗೂ ಕಾಂಗ್ರೆಸ್ ತೊರೆಯುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಹೇಳಿದ್ದಾರೆ.