ರಾಯಚೂರು: (ಜ.27): Ambedkar Photo:ರಾಯಚೂರು ಜಿಲ್ಲಾ ನ್ಯಾಯಾಲಯದ ಗಣರಾಜ್ಯೋತ್ಸವ ಸಂದರ್ಭ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿವೆ. ನನಗೆ ಯಾರ ಬಗ್ಗೆಯೂ ರಾಗ ದ್ವೇಷಗಳಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಮಹಾತ್ಮ ಗಾಂಧೀಜಿ ಅವರ ಪೋಟೋ ಮಾತ್ರ ಇಟ್ಟುಕೊಂಡು ಬಂದಿದ್ದೇವೆ.
ಅಂಬೇಡ್ಕರ್ ಪೋಟೋ ಇಡುವ ಬಗ್ಗೆ ಹೈ ಕೋರ್ಟ್ SOPಯಲ್ಲಿ ಉಲ್ಲೇಖ ಇಲ್ಲದ ಕಾರಣ ನಾನು ತೆಗೆಯುವಂತೆ ಕೇಳಿ ಕೊಂಡಿದ್ದೇನೆ ಎಂದು ನ್ಯಾಯಾಧೀಶರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿಯೂ ದೊಡ್ಡ ಚರ್ಚೆಗೆ ವೇದಿಕೆಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಪತ್ರ:
ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ-ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯದೀಶ ಮಲ್ಲಿಕಾರ್ಜುನ್ ಗೌಡ, ಇವರು ವೃತ್ತಿ ಗೌರವಕ್ಕೆ ಅವಮಾನ ಮಾಡಿದಲ್ಲದೆ ಸಂವಿಧಾನಕ್ಕೆ ಮತ್ತು ಭಾರತ ರತ್ನ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ ಸಾಮಾಜಿಕ ಜಾಲತಾಣದಲ್ಲಿ ಬರೆಯಲಾಗಿದೆ
ನ್ಯಾಯಾಲಯದ ಸರ್ಕ್ಯೂಲರ್ ಪ್ರಕಾರ ಅಂಬೇಡ್ಕರ್ ಭಾವಚಿತ್ರ ಇಡುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ನನ್ನ ಗಮನಕ್ಕೆ ತರದೆ ಭಾವಚಿತ್ರ ತಂದು ಇಡಲಾಗಿತ್ತು. ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಇಡುವುದಕ್ಕೆ ಮಾತ್ರ ಅವಕಾಶ ಇದೆ. ಹಾಗಾಗಿ ನಾನು ಪೋಟೋ ತೆರವು ಮಾಡುವಂತೆ ಹೇಳಿದೆ ಎನ್ನುವುದು ನ್ಯಾಯಾಧೀಶರ ಸಮರ್ಥನೆ.
ರಾಜ್ಯದ ಹಲವು ಕಡೆ ಪ್ರತಿಭಟನೆಗೆ ಇಳಿದಿರುವ ದಲಿತಪರ ಸಂಘಟನೆಗಳು ಇದು ಅಕ್ಷಮ್ಯ ಅಪರಾಧ, ತಕ್ಷಣ ನ್ಯಾಯಾಧೀಶರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ನ್ಯಾಯಾಧೀಶರು ಸಂವಿಧಾನವನ್ನು, ಶಿಷ್ಟಾಚಾರವನ್ನು ಪಾಲನೆ ಮಾಡಿ ಇತರರಿಗೆ ಮಾದರಿಯಾಗಬೇಕು. ಆದರೆ ಇಂಥ ಹೆಜ್ಜೆ ಇಟ್ಟು ಸಂವಿಧಾನನ ಶಿಲ್ಪಿಗೆ ಅಪಮಾನ ಮಾಡಲಾಗಿದೆ ಎಂದು ದಲಿತ ಸಂಘಟನೆಗಳು ಆಕ್ರೋಶ ಹೊರಹಾಕಿವೆ.
ಜಿಲ್ಲಾ ನ್ಯಾಯಾಲಯದಲ್ಲಿ ಅಂಬೇಡ್ಕರ್ ಪೋಟೋ ತೆಗೆದು ಧ್ವಜಾರೋಹಣ ಮಾಡಿದ್ದಕ್ಕೆ ನ್ಯಾಯಾಧೀಶರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆದಿದೆ. ವಿವಿಧ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ನ್ಯಾಯಾಧೀಶರ ಭಾವಚಿತ್ರ ತುಳಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ.