D.K Shivakumar: (ಜ.26) ಗಣರಾಜ್ಯೋತ್ಸವದಂದು ದೆಹಲಿಯ ರಾಜಪಥ್ ನಲ್ಲಿ ದೇಶದ ಎಲ್ಲ ಭಾಗದ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ರಾಷ್ಟ್ರೀಯತೆ, ಐಕ್ಯತೆ ಹಾಗೂ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಸ್ಮರಿಸಿ, ಪ್ರತಿಕೃತಿಯನ್ನು ಬಿಂಬಿಸಲಾಗುತ್ತದೆ. ಆದರೆ ಈಗ ದಕ್ಷಿಣ ಭಾರತದಲ್ಲಿ ಎಲ್ಲ ವರ್ಗದ ಜನರಿಗೆ ಬಹಳ ನೋವಾಗಿದೆ.
ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ದ ಚಿತ್ರ ನಿರಾಕರಿಸಿದ ಹಿನ್ನಲೆ ಮಾತನಾಡಿದರು. ಸಮಾಜದ ಎಲ್ಲ ವರ್ಗದವರನ್ನು ಒಂದುಗೂಡಿಸಲು ಎಲ್ಲ ಧರ್ಮದ ನಾಯಕರು ಪ್ರಯತ್ನಿಸಿದ್ದಾರೆ. ಅವರಲ್ಲಿ ನಮ್ಮ ನಾರಾಯಣ ಗುರುಗಳೂ ಪ್ರಮುಖರು. ಅವರ ಸ್ಥಬ್ದಚಿತ್ರಕ್ಕೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಅವಕಾಶ ನಿರಾಕರಿಸುವ ಮೂಲಕ ನಾರಾಯಣ ಗುರುಗಳು ಪ್ರತಿಪಾತಿಸಿದ ಮಾನವತಾವಾದಕ್ಕೆ ಅಪಮಾನ ಮಾಡಲಾಗಿದೆ.

ಒಂದೇ ಧರ್ಮ, ಒಂದೇ ದೇವರು, ಮನುಷ್ಯರೆಲ್ಲ ಒಂದೇ ಜಾತಿ. ಮಾನವೀಯತೆ ಎಲ್ಲಕ್ಕಿಂತ ಮಿಗಿಲಾದುದು ಎಂದೂ ನಾರಾಯಣ ಗುರುಗಳು ಹೇಳಿದ್ದರು. ಅಂತಹ ಮಹಾನುಭಾವರನ್ನು ಕಡೆಗಣಿಸಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ವೈಯಕ್ತಿಕವಾಗಿ ನಾನೂ ಉಗ್ರವಾಗಿ ಖಂಡಿಸುತ್ತೇನೆ.
ನೂರಾರು ಭಾಷೆ, ಸಾವಿರಾರು ಜಾತಿಗಳು ಸೇರಿ ಭವ್ಯ ಭಾರತ ರೂಪುಗೊಂಡಿದೆ. ಎಲ್ಲರೂ ಸೇರಿ ಇಂದು ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಎಲ್ಲ ಧರ್ಮಗಳಲ್ಲೂ ಅದರದ್ದೇ ಆದ ಪವಿತ್ರ ಗ್ರಂಥಗಳಿದ್ದರೂ ನಮಗೆ ನಮ್ಮ ಸಂವಿಧಾನವೇ ದೇಶದ ಶ್ರೇಷ್ಠ ಗ್ರಂಥ.
ಹಿಂದುಳಿದ ಸಮುದಾಯದ ಮೇಲಿನ ದೌರ್ಜನ್ಯ:
ಸ್ವಾತಂತ್ರ್ಯಕ್ಕೂ ಮುನ್ನ ದಕ್ಷಿಣ ಭಾರತದಲ್ಲಿ ನಡೆಯುತ್ತಿದ್ದ ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯದ ಮೇಲಿನ ದೌರ್ಜನ್ಯದ ವಿರುದ್ಧ ನಾರಾಯಣ ಗುರುಗಳು ಬಹುದೊಡ್ಡ ಸಾಮಾಜಿಕ ಚಳುವಳಿ ಆರಂಭಿಸಿದರು.
12 ನೇ ಶತಮಾನದಲ್ಲಿ ಬಸವಣ್ಣನವರು ಕರ್ನಾಟಕದಲ್ಲಿ ಮಾಡಿದಂತೆ ನಾರಾಯಣ ಗುರುಗಳು ಕೂಡ ಸಮಾಜ ಸುಧಾರಣೆಗೆ ಕೇರಳದಿಂದ ಹೋರಾಟ ಶುರು ಮಾಡಿದರು. ಅವರು ಯಾವುದೋ ಒಂದು ಜಾತಿ, ಧರ್ಮ ಹಾಗೂ ದೇವರಿಗೆ ಮಾತ್ರ ಸೀಮಿತರಾಗಲಿಲ್ಲ. ಅವರು ಮಾನವಧರ್ಮದ ಪರವಾಗಿ ಹೋರಾಡಿದರು.
ಒಂದು ರಾಜ್ಯ ಸರ್ಕಾರ ತನಗಿರುವ ಅಧಿಕಾರ ವ್ಯಾಪ್ತಿಯಲ್ಲಿ ರಾಜಪಥ್ ನಲ್ಲಿ ಗಣರಾಜ್ಯೋತ್ಸವದಂದು ಆ ಮಹಾತ್ಮರಿಗೆ ಗೌರವ ಸಲ್ಲಿಸಲು ಸ್ತಬ್ಧಚಿತ್ರ ಪ್ರದರ್ಶನಕ್ಕೆ ತೀರ್ಮಾನಿಸಿದರೆ, ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿ ಬೇರೆಯವರ ಹೆಸರು ಸೂಚಿಸಿ, ನಾರಾಯಣ ಗುರುಗಳಿಗೆ ಅಪಮಾನ ಮಾಡಿದೆ.
ಇದು ಕೇರಳ ಸರ್ಕಾರ, ನಮ್ಮ ಸರ್ಕಾರ ಅಥವಾ ನಾರಾಯಣ ಗುರುಗಳ ಅನುಯಾಯಿಗಳಿಗೆ ಮಾತ್ರ ಸೀಮಿತವಾದ ವಿಚಾರವಲ್ಲ. ಇದು ಇಡೀ ಮನುಕುಲ, ಮಾನವೀಯತೆಗೆ ಆಗಿರುವ ಅಪಮಾನ.
ಒಂದು ದೇವರು, ಒಂದು ಧರ್ಮ, ಒಂದು ಜಾತಿ, ಅದು ಮಾನವ ಜಾತಿ ಎನ್ನುವುದರಲ್ಲಿ ತಪ್ಪೇನಿದೆ. ಮನುಷ್ಯತ್ವ, ಬ್ರಾತೃತ್ವ ಎಲ್ಲವನ್ನೂ ದೊಡ್ಡ ಸವಾಲಾಗಿ ಸ್ವೀಕರಿಸುವ ದುಸ್ಥಿತಿ ಬಂದಿದೆ. ಕೇಂದ್ರದ ನಿಲುವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ರಾಜಕೀಯ ಪಕ್ಷಗಳ ಹೊರತಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಇತರೆ ಕಡೆಗಳಲ್ಲಿ ಅನೇಕರು ಕೇಂದ್ರದ ನಿಲುವನ್ನು ಖಂಡಿಸಿ, ತಾವೇ ನಾರಾಯಣ ಗುರುಗಳ ಸ್ತಬ್ಧಚಿತ್ರ ಮೆರವಣಿಗೆ ಮಾಡುತ್ತಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ.
ನಾರಾಯಣ ಗುರುಗಳನ್ನು ಕೇವಲ ಬಿಲ್ಲವ ಸಮಾಜದ ಗುರುಗಳು ಎಂದು ನೋಡಲಾಗದು. ಅವರು ಕೊಟ್ಟ ಮಾರ್ಗದರ್ಶನ ಎಲ್ಲ ವರ್ಗ, ಧರ್ಮದವರಿಗೂ ಅನ್ವಯವಾಗುತ್ತದೆ.ಸಮಾಜ ಸುಧಾರಕರ ಸ್ತಬ್ಧಚಿತ್ರ ನಿರಾಕರಿಸಿರುವುದನ್ನು ಮತ್ತೊಮ್ಮೆ ಖಂಡಿಸುತ್ತೇನೆ. ನಾವೆಲ್ಲರೂ ನಾರಾಯಣ ಗುರುಗಳ ಆಚಾರ, ವಿಚಾರಗಳನ್ನು ಮೈಗೂಡಿಸಿಕೊಳ್ಳುವ ಕೆಲಸ ಮಾಡಬೇಕು.
ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ರವೀಂದ್ರನಾಥ ಠಾಗೋರ್ ಅವರು ಕೂಡ ನಾರಾಯಣ ಗುರುಗಳ ವಿಚಾರಗಳಿಂದ ಪ್ರೇರೇಪಿತರಾಗಿದ್ದರು.
ಸ್ತಬ್ಧಚಿತ್ರ ದಿಲ್ಲಿಯಲ್ಲೇ ಇತ್ತು:
ಈ ಘಟನೆ ನಂತರ ಈ ಸಮುದಾಯಕ್ಕೆ ಸೇರಿದ ಇಬ್ಬರು ರಾಜ್ಯದ ಸಚಿವರು ಸ್ವಯಿಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ನಿರೀಕ್ಷಿಸಿದ್ದೆ. ಆ ಸಮುದಾಯಕ್ಕೇ ಸೇರಿದವರೇ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವರು. ಅವರು ಸಂಪುಟದಲ್ಲಿ ಒತ್ತಡ ಹೇರಿ, ಪ್ರಧಾನಿಗಳ ಮನವೊಲಿಸಿ ಸ್ವಾಭಿಮಾನದ ಸಂಕೇತವಾಗಿರುವ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರದರ್ಶನದಲ್ಲಿ ಉಳಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೆ
ನಿನ್ನೆ ಸಂಜೆವರೆಗೂ ಅವರ ಸ್ತಬ್ಧಚಿತ್ರ ದಿಲ್ಲಿಯಲ್ಲೇ ಇತ್ತು. ಕೇಂದ್ರ ಸರ್ಕಾರ ಅದರ ಪ್ರದರ್ಶನಕ್ಕೆ ಅವಕಾಶ ನೀಡಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆ. ಕೊನೆಗೂ ಇವತ್ತು ಮೆರವಣಿಗೆಯಲ್ಲಿ ಅದಕ್ಕೆ ಅವಕಾಶ ನೀಡದೇ ಹೋದ ಕಾರಣ ಈಗ ಮಾತನಾಡುತ್ತಿದ್ದೇನೆ’ ಎಂದರು.
ಕರಾವಳಿ ಭಾಗದಲ್ಲಿ ಪಕ್ಷಾತೀತವಾಗಿ ಸ್ವಾಭಿಮಾನದ ನಡಿಗೆ ಮಾಡಲಾಗುತ್ತಿದೆ. ಸರಕಾರಕ್ಕೆ ಸೆಡ್ಡು ಹೊಡೆದು ನಾರಾಯಣಗುರುಗಳ ಸ್ತಬ್ಧಚಿತ್ರ ಮೆರವಣಿಗೆ ಮಾಡಲಾಗುತ್ತಿದೆ. ನಾನು ಅದರಲ್ಲಿ ಭಾಗವಹಿಸಿದರೆ ಅದಕ್ಕೆ ರಾಜಕೀಯ ಬಣ್ಣ ಬರುತ್ತದೆ ಎಂಬ ಕಾರಣಕ್ಕೆ ಕಾರ್ಯಕ್ರಮದಿಂದ ಹಿಂದೆ ಸರಿದೆ.
ನನಗೆ ಈ ವಿಚಾರದಲ್ಲಿ ರಾಜಕೀಯ ಮಾಡಲು ಇಷ್ಟವಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ನಾರಾಯಣ ಗುರುಗಳ ಜಯಂತಿ ಆಚರಣೆ ಆರಂಭಿಸಿತು. ನಾವು ಆರಂಭಿಸಿದ ನಂತರ ಕೇರಳ ಸರಕಾರ ಶಿಫಾರಸ್ಸು ಮಾಡಿತ್ತು. ಇದನ್ನು ರಾಜ್ಯ ಬಿಜೆಪಿ ಸರ್ಕಾರ ಬೆಂಬಲಿಸುತ್ತದೆ ಎಂದು ಭಾವಿಸಿದ್ದೆ. ಆದರೆ ಸರಕಾರದ ಪ್ರತಿನಿಧಿಗಳು ಹೆದರಿ ಪ್ರಧಾನಿಗಳನ್ನು ಭೇಟಿ ಮಾಡಲಿಲ್ಲ. ಈ ಮಧ್ಯೆ ಇಬ್ಬರು ಸಚಿವರು ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಬಂತು. ಕಾದು ನೋಡಿದೆ, ಆದರೆ ಅವರು ನೀಡಲಿಲ್ಲ’ ಎಂದರು.
ಇದನ್ನೂ ಓದಿ:Coronavirus: ಹೆಚ್.ಡಿ.ಕೋಟೆಯಲ್ಲಿ ಆಕ್ಸಿಜನ್ ಘಟಕ ಆರಂಭದ ಕುರಿತು ಚರ್ಚೆ: ಎಸ್.ಟಿ.ಸೋಮಶೇಖರ್