ಬೆಂಗಳೂರು: (ಜ.21): Congress Party: ಮಾಜಿ ಎಂಎಲ್ಸಿ ಕಾಂತರಾಜು ಅವರು ಕಾಂಗ್ರೆಸ್ ಗೆ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ಮಾತನಾಡಿ, ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಆಯಾ ಜಿಲ್ಲಾ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನಿಸುತ್ತಿದ್ದೇವೆ. ಯಾರೇ ಕಾಂಗ್ರೆಸ್ ಸೇರಬೇಕಾದರೂ ಬೆಷರತ್ ಬರಬೇಕು. ಜತೆಗೆ ಪಕ್ಷದ ನಾಯಕತ್ವ ಹಾಗೂ ಸಿದ್ಧಾಂತ ಒಪ್ಪಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರುಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆಯಾ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಧಿಕಾರ ಕೊಟ್ಟಿದ್ದೇವೆ. ಸ್ಥಳೀಯ ಶಾಸಕರು ಹಾಗೂ ಮಾಜಿ ಶಾಸಕರಿಗೂ ಕೂಡ ಆಯಾ ಭಾಗದಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುವ ಅವಕಾಶ ನೀಡಲಾಗಿದೆ ಎಂದರು.
ರಾಜ್ಯಮಟ್ಟದ ಸೇರ್ಪಡೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಂಡಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಕಾಂತರಾಜು ಅವರು ತುಮಕೂರಿನಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು. ಜಿಲ್ಲಾ ಕಾಂಗ್ರೆಸ್ ಹಾಗೂ ಮುಖಂಡರು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ದೊಡ್ಡ ಸಮಾರಂಭ ಮಾಡುವ ಇಚ್ಛೆ ಇತ್ತು. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮಾಡುತ್ತಿದ್ದೇವೆ.

ಕಾಂತರಾಜು ಅವರು ಪಕ್ಷಕ್ಕೆ ದೊಡ್ಡ ಆಸ್ತಿ:
ರಾಜ್ಯದ ಎಲ್ಲ ಮುಖಂಡರು ಕಾಂತರಾಜು ಅವರ ಅರ್ಜಿಯನ್ನು ಒಪ್ಪಿದ್ದು, ಬಹಳ ಸಂತೋಷದಿಂದ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತಿದ್ದೇವೆ. ಪಕ್ಷಕ್ಕೆ ಸೇರಿದ ನಂತರ ಹೊಸಬರು, ಹಳಬರೆಂಬುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಂತರಾಜು ಅವರಿಗೆ ವ್ಯಾಪಕ ಜನ ಬೆಂಬಲವಿದ್ದು, ಈ ಹಿಂದೆ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಸಹಕಾರ ನೀಡಿದ್ದು, ಅದನ್ನು ಸ್ಮರಿಸುತ್ತಾ, ಭವಿಷ್ಯದಲ್ಲಿ ಅವರು ಪಕ್ಷಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ ಎಂದು ಭಾವಿಸಿ ಪಕ್ಷಕ್ಕೆ ಸ್ವಾಗತಿಸುತ್ತಿದ್ದೇವೆ.
ಪಕ್ಷದ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಇಂದು ಹಾಗೂ ನಾಳೆ ದೆಹಲಿಯಿಂದ ತರಬೇತಿ ಸಭೆ ಇದೆ. ಆನ್ಲೈನ್ ಹಾಗೂ ಆಫ್ ಲೈನ್ ನಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 12 ವರ್ಷಗಳ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರು ಈ ಅವಕಾಶ ಮಾಡಿಕೊಟ್ಟಿದ್ದು, ಎಲ್ಲರೂ ಈ ಅವಕಾಶ ಬಳಸಿಕೊಳ್ಳಬೇಕಿದೆ
ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಬಹಳ ಮುಖ್ಯವಾಗಿದ್ದು, ಭವಿಷ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ, ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ವಿಚಾರವಾಗಿ ಪಕ್ಷದ ಸ್ಥಳೀಯ ಸದಸ್ಯರ ಅಭಿಪ್ರಾಯ ಪಡೆಯಲು ಈ ನೋಂದಣಿಯ ದತ್ತಾಂಶಗಳನ್ನು ಬಳಸಿಕೊಳ್ಳಲಾಗುವುದು. ಒಂದು ಸ್ಥಾನಕ್ಕೆ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದರೆ ಅಂತಹ ಸಮಯದಲ್ಲಿ ಹೈಕಮಾಂಡ್ ಆಪ್ ಮೂಲಕ ಸ್ಥಳೀಯ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಪ್ರತಿ ಬೂತ್ ನಲ್ಲಿ 200, 300 ಸದಸ್ಯರನ್ನು ನೋಂದಣಿ ಮಾಡಬಹುದಾಗಿದೆ. ಈ ಅಭಿಯಾನದ ಕಾಲಾವಧಿ ವಿಸ್ತರಣೆಯಾಗುವುದಿಲ್ಲ. ಎಲ್ಲ ನಾಯಕರು ತಮ್ಮ ಬೂತ್ ಗಳಲ್ಲಿ ಮನೆ, ಮನೆಗಳಿಗೆ ಹೋಗಿ ನೋಂದಣಿ ಮಾಡಿಸಬೇಕಿದೆ.
ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು:
ಇಂದು ತುಮಕೂರಿನ ಎಲ್ಲ ನಾಯಕರು ಇಲ್ಲಿಗೆ ಆಗಮಿಸಿದ್ದು, ಎಲ್ಲರೂ ಒಟ್ಟಾಗಿ ಈ ಜವಾಬ್ದಾರಿ ತೆಗೆದುಕೊಳ್ಳಬೇಕು. ಕೇವಲ ನಾನು, ಸಿದ್ದರಾಮಯ್ಯ ಅವರು, ಪರಮೇಶ್ವರ್ ಅವರೇ ಪಕ್ಷ ಕಟ್ಟುತ್ತೇವೆ ಎಂಬುದು ಸುಳ್ಳು. ಪ್ರತಿಯೊಬ್ಬ ಕಾರ್ಯಕರ್ತರು ಜವಾಬ್ದಾರಿ ಹೊರಬೇಕು. ನಾವು ಯಾರಿಗೂ ಟಿಕೆಟ್ ನೀಡುವ ಭರವಸೆಯನ್ನು ಈಗಲೇ ನೀಡಿಲ್ಲ. ಈ ವಿಚಾರದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನಕ್ಕೆ ಬರುತ್ತೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ, ನಮ್ಮ ಗುರಿ ತಲುಪುವಂತೆ ಮಾಡಬೇಕು ಎಂದು ಹೇಳಿದರು.
ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಎಂಎಲ್ಸಿ ಕಾಂತರಾಜು ಅವರು ಮಾತನಾಡಿ,ಇಂದು ನಾನು ಕಾಂಗ್ರೆಸ್ ಪಕ್ಷ ಸೇರಲು ಪಕ್ಷದ ಸಿದ್ಧಾಂತ ಕಾರಣ. ಪಕ್ಷದ ನಾಯಕತ್ವ ಒಪ್ಪಿ ಸೇರಿದ್ದೇನೆ. ಎಲ್ಲ ಮುಖಂಡರು ನನ್ನನ್ನು ಸೇರ್ಪಡೆ ಮಾಡಿಕೊಳ್ಳುತ್ತಿರುವುದು ನನ್ನ ಶಕ್ತಿ ಹೆಚ್ಚಿಸಿದ್ದು, ಜತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. ನಿಮ್ಮ ನಂಬಿಕೆಗೆ ಎಲ್ಲಿಯೂ ಕಪ್ಪು ಚುಕ್ಕೆಯಾಗದಂತೆ ಪಕ್ಷ ಸಂಘಟಿಸುತ್ತೇನೆ.
ದೇಶದಲ್ಲಿ ಏನಾದರೂ ಪ್ರಗತಿ ಮಾಡಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ರಾಜ್ಯ ಹಾಗೂ ದೇಶದಲ್ಲಿ ಸಮಾಜದ ಎಲ್ಲ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಏಕೈಕ ಪಕ್ಷ ಕಾಂಗ್ರೆಸ್. ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಿ, ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಲು ನಿಮ್ಮೆಲ್ಲರ ಜತೆ ನಾನು ಶ್ರಮಿಸುತ್ತೇನೆ ಎಂದರು.