ಗದಗ: (ಜ.19) Crime: ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಮೀರ್ ಶಹಪುರ್ ಎಂಬ ಯುವಕನನ್ನು ಹತ್ಯೆ ಮಾಡಿ, ಅವರ ಸ್ನೇಹಿತನ ಮೇಲೆಯೂ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಾಲ್ವರು ಆರೋಪಿಗಳನ್ನು ನರಗುಂದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ಲ್ಲರೂ ಸಂಘಪರಿವಾರದ ಕಾರ್ಯಕರ್ತರು ಎನ್ನಲಾಗಿದ್ದು ನರಗುಂದ ಪಟ್ಟಣದ, ಸಿದ್ದನ ಬಾಬಿ ಓಣಿ ನಿವಾಸಿ ಮಲ್ಲಿಕಾರ್ಜುನ ಅಲಿಯಾಸ್ ಗುಂಡ್ಯ ಮುತ್ತಪ್ಪ ಹಿರೇಮಠ, ಚನ್ನಬಸಪ್ಪ ಅಲಿಯಾಸ್ ಚನ್ನಪ್ಪ ಚಂದ್ರಶೇಖರ ಅಕ್ಕಿ, ವಾಸವಿ ಕಲ್ಯಾಣ ಮಂಟಪ ಬಳಿ ನಿವಾಸಿಯ ಸಕ್ರಪ್ಪ ಹನುಮಂತಪ್ಪ ಕಾಕನೂರು, ಸುಬೇದಾರ್ ಓಣಿಯ ಗುತ್ತಿಗೆದಾರ ಸಂಜು ಮಾರುತಿ ನಲವಡಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನರಗುಂದ ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ?
ಗದಗದ ನರಗುಂದದಲ್ಲಿ ಹೋಟೆಲಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸಮೀರ್ ಶಹಪೂರ್ ಸೋಮವಾರ ರಾತ್ರಿ ಹೋಟೆಲ್ ಮುಚ್ಚಿ ಸಮೀಪದಲ್ಲೇ ಇದ್ದ ಸ್ಟುಡಿಯೋ ನಡೆಸುತ್ತಿದ್ದ ಗೆಳೆಯ ಶಂಶೀರ್ ರೊಂದಿಗೆ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಸಂಘಪರಿವಾರದ ಕಾರ್ಯಕರ್ತರ ಹತ್ತು-ಹದಿನೈದು ಮಂದಿ ತಂಡ ಬೈಕನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಸಮೀರ್ ಮತ್ತು ಶಂಶೀರ್ ಅವರನ್ನು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.