ಬೆಂಗಳೂರು: (ಜ.17) Strike:ಕೋವಿಡ್ ವೇಳೆ ಕೆಲಸ ಮಾಡಿದ ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಾಧಿಕಾರಿಗಳಿಗೆ ರಾಜ್ಯ ಸರ್ಕಾರ ಭತ್ಯೆ ನೀಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಕೈಗೆ ಕಪ್ಪು ಪಟ್ಟಿ ಧರಿಸಿ ಶುಶ್ರೂಷಕರು ಧರಣಿ ನಡೆಸಿದರು.
ನಗರದಲ್ಲಿಂದು ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಜಿಲ್ಲೆ ಕೇಂದ್ರದ ಆಸ್ಪತ್ರೆಗಳಲ್ಲಿನ ಶುಶ್ರೂಷಕರು, ಕಪ್ಪು ಪಟ್ಟಿ ಧರಿಸಿ, ಇಡೀ ದಿನ ಕಾರ್ಯನಿರ್ವಹಿಸಿ ಗಮನ ಸೆಳೆದರು.

ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಾಧಿಕಾರಿಗಳು ತಮ್ಮ ಜೀವದ ಹಂಗನ್ನು ತೊರೆದು ಹಗಲಿರುಳು ಪಿಪಿಇ ಕಿಟ್ ಧರಿಸಿ ಕೊರೋನಾ ರೋಗಿಗಳ ಆರೈಕೆಯನ್ನು ಮಾಡಿದ್ದಾರೆ. ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕೊರೋನಾ ಸೇನಾನಿಗಳಿಗೆ ಕೋವಿಡ್ ಅಪಾಯ ಭತ್ಯೆ, ಪ್ರೋತ್ಸಾಹ ಭತ್ಯೆ ನೀಡುತ್ತಿರುವುದನ್ನು ಹೇಳಿತ್ತು.
ರಾಜ್ಯ ಸರ್ಕಾರದ ವಿರುದ್ಧ ಶುಶ್ರೂಷಾಧಿಕಾರಿಗಳ ಅಸಮಧಾನ
ಆದರೆ ಅದು ಕಡತಗಳಲ್ಲೆ ಇದೆ ಹೊರತು ಶುಶ್ರೂಷಾಧಿಕಾರಿಗಳ ಕೈ ಸೇರಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶುಶ್ರೂಷಾಧಿಕಾರಿಗಳಿಗೆ ಕೋವಿಡ್ ಅಪಾಯ ಭತ್ಯೆ ನೀಡಿ ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಾಧಿಕಾರಿಗಳಿಗೆ ನೀಡದೆ ಇರುವುದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ, ಸರ್ಕಾರದ ತಾರತಮ್ಯ ಧೋರಣೆಯನ್ನು ಖಂಡಿಸಿ ಇಂದಿನಿಂದ ಏಳು ದಿನಗಳ ಕಾಲ ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಪ್ಪು ಪಟ್ಟಿ ಧರಿಸಿ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಲಿದ್ದು, ಸರ್ಕಾರವು ಕೂಡಲೇ ಕೋವಿಡ್ ಅಪಾಯ ಭತ್ಯೆಯನ್ನು ಮಂಜೂರು ಮಾಡಬೇಕೆಂದು ಧರಣಿ ನಿರತ ಶುಶ್ರೂಷಕರು ಆಗ್ರಹಿಸಿದರು.
ಇದನ್ನೂ ಓದಿ:Coronavirus:ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸೋಂಕಿನ ಪ್ರಮಾಣ ಕಡಿಮೆ: ಡಾ. ಕೆ.ಸುಧಾಕರ್