Journalist’s Murdered: (ಜ.10) ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವೆಂದು ಮಾಧ್ಯಮ ಕ್ಷೇತ್ರವನ್ನು ಕರೆಯಲಾಗುತ್ತದೆ. ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡುವಂತಹ ವಾತಾವರಣವಿದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ, ಆಡಳಿತದ ಕುರಿತು ಜನರಿಗೆ ಸತ್ಯ ತಿಳಿಯದೇ ಪ್ರಜಾಪ್ರಭುತ್ವದ ಮೂಲ ಆಶಯವೇ ವಿಫಲವಾಗುತ್ತದೆ. ಸುಳ್ಳುಗಳನ್ನೇ ಸತ್ಯವೆಂದು ನಂಬಿದ ಜನರು ಚುನಾವಣೆಗಳಲ್ಲಿ ಕೆಟ್ಟ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಾಗುತ್ತದೆ. ಮಾಧ್ಯಮಗಳ ಮಹತ್ವದ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲೇ, ಮಾಧ್ಯಮ ವರದಿಗಾರರ ಜೀವಕ್ಕೆ ಅಪಾಯಕಾರಿಯಾಗಿರುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ.
ವರದಿಗಾರಿಕೆಯಿಂದ ಹತ್ಯೆ:
ಅಮೆರಿಕಾದ ನ್ಯೂಯಾರ್ಕ್ ಮೂಲದ `ಕಮಿಟಿ ಟು ಪ್ರೊಜೆಕ್ಟ್ ಜರ್ನಲಿಸ್ಟ್ಸ್’ ಸಂಸ್ಥೆಯು ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಪತ್ರಕರ್ತರ ಬಂಧನ, ಹಲ್ಲೆ, ಕಿರುಕುಳ ಹಾಗೂ ಹತ್ಯೆಗೆ ಸಂಬಂಧಿಸಿದ ಅಂಕಿಅಂಶಗಳು ವರದಿಯಲ್ಲಿದೆ. ಅದರ ಪ್ರಕಾರ 2021ರಲ್ಲಿ ಜಗತ್ತಿನಾದ್ಯಂತ 19 ಪತ್ರಕರ್ತರು ತಮ್ಮ ವರದಿಗಾರಿಕೆ ಕಾರಣಕ್ಕೆ ಹತ್ಯೆಯಾಗಿದ್ದಾರೆ. ಈ ಪೈಕಿ ಅತಿಹೆಚ್ಚು ಪತ್ರಕರ್ತರು ಭಾರತದವರು. ಒಟ್ಟು 5 ಭಾರತೀಯ ಪತ್ರಕರ್ತರು 2011ರಲ್ಲಿ ವರದಿಗಾರಿಕೆ ಕಾರಣಕ್ಕೆ ಬಲಿಯಾಗಿದ್ದಾರೆ.

ಲಿಕ್ಕರ್ ಮಾಫಿಯಾ ವಿರುದ್ಧ ವರದಿ ಮಾಡಿದ್ದಕ್ಕೆ ಉತ್ತರ ಪ್ರದೇಶದ ಸುಲಭ್ ಶ್ರೀವಾತ್ಸವ, ಭ್ರಷ್ಟಾಚಾರದ ವಿರುದ್ಧ ವರದಿ ಮಾಡಿದ್ದಕ್ಕೆ ಬಿಹಾರದ ಮನೀಷ್ ಸಿಂಗ್, ಮಟ್ಕಾ ಹಾಗೂ ತಂಬಾಕು ಮಾಫಿಯಾವನ್ನು ಬಯಲಿಗೆಳಿದ್ದಕ್ಕೆ ಆಂಧ್ರಪ್ರದೇಶದ ಚೆನ್ನಕೇಶವಲು, ನಕಲಿ ಆಸ್ಪತ್ರೆಗಳನ್ನು ಬಯಲು ಮಾಡಿದ್ದಕ್ಕೆ ಬಿಹಾರದ ಅವಿನಾಶ್ ಝಾರವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ರೈತರ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ರಮಣ್ ಕಶ್ಯಪ್ ಎಂಬ ಪತ್ರಕರ್ತರು ಕೇಂದ್ರ ಸಚಿವ ಅಜಯ್ ಮಿಶ್ರಾರ ಮಗ ಕಾರು ಹತ್ತಿಸಿದ್ದರಿಂದ ಕೊನೆಯುಸಿರೆಳೆದಿದ್ದಾರೆ.
ಸಾವಿರದ ಗಡಿ ತಲುಪಿತ್ತು ಹತ್ಯೆ
1992ರಿಂದ ಈವರೆಗೆ ಒಟ್ಟು 914 ಪತ್ರಕರ್ತರು ಜಗತ್ತಿನಾದ್ಯಂತ ವರದಿಗಾರಿಕೆ ಕಾರಣಕ್ಕೆ ಕೊಲೆಯಾಗಿರುವುದು ದೃಢಪಟ್ಟಿದೆ. ಈ ಪೈಕಿ 57 ಹತ್ಯೆಗಳು ಭಾರತದಲ್ಲಿ ನಡೆದಿವೆ. ಸೆಪ್ಟೆಂಬರ್ 5, 2017ರಂದು ಬೆಂಗಳೂರಿನಲ್ಲಿ ಗೌರಿ ಲಂಕೇಶ್‌ರವರನ್ನು ಹತ್ಯೆ ಮಾಡಿದ್ದು ಕೂಡ ಇದರಲ್ಲಿ ಒಂದು. ಗೌರಿ ಲಂಕೇಶ್ ಕೊಲೆ ಪ್ರಕರಣದ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಅಂತಿಮ ಹಂತದ ವಿಚಾರಣೆ ಹಾಗೂ ಶಿಕ್ಷೆ ಘೋಷಣೆಯಾಗುವುದು ಬಾಕಿಯಿದೆ. ಬಹುತೇಕ ವರದಿಗಾರರ ಹತ್ಯೆ ಪ್ರಕರಣಗಳು ವ್ಯವಸ್ಥಿತವಾಗಿ ನಡೆದಿರುವುದರಿಂದ ಸೂಕ್ತ ಸಾಕ್ಷಿ ಸಂಗ್ರಹಿಸಲು ಸಾಧ್ಯವಾಗದೇ ತನಿಖೆಯಲ್ಲಿ ವಿಳಂಬವಾಗುತ್ತಿದೆ. ಅನೇಕ ಪ್ರಕರಣಗಳಲ್ಲಿ ವರದಿಗಾರರ ಮೃತದೇಹವು ಹಲವು ದಿನಗಳ ನಂತರ ಪತ್ತೆಯಾಗಿದೆ.

`ಕಮಿಟಿ ಟು ಪ್ರೊಜೆಕ್ಟ್ ಜರ್ನಲಿಸ್ಟ್ಸ್’ ಸಂಸ್ಥೆಯು ಅಧ್ಯಯನ ವರದಿಯ ಪ್ರಕಾರ ಜಗತ್ತಿನಾದ್ಯಂತ 293 ಪತ್ರಕರ್ತರನ್ನು 2021ರಲ್ಲಿ ಬಂಧಿಸಲಾಗಿದೆ. 2020ರಲ್ಲಿ 280 ಪತ್ರಕರ್ತರನ್ನು ಬಂಧಿಸಲಾಗಿತ್ತು. 2021ರಲ್ಲಿ ಬೇರೆಲ್ಲ ದೇಶಗಳಿಗಿಂತ ಚೀನಾದಲ್ಲಿ ಅತಿಹೆಚ್ಚು, ಅಂದರೆ 50 ಪತ್ರಕರ್ತರ ಬಂಧನವಾಗಿದೆ. ನಂತರದ ಸ್ಥಾನಗಳಲ್ಲಿರುವ ಮ್ಯಾನ್ಮಾರ್‌ನಲ್ಲಿ 26, ಈಜಿಪ್ಟ್‌ನಲ್ಲಿ 25, ವಿಯೇಟ್ನಾಂನಲ್ಲಿ 23 ಪತ್ರಕರ್ತರ ಬಂಧನವಾಗಿದೆ. ಖಾಸಗಿ ಸ್ಥಳಕ್ಕೆ ಅನುಮತಿಯಿಲ್ಲದೇ ಪ್ರವೇಶ, ವೈಯಕ್ತಿಯ ಮಾಹಿತಿ ಬಹಿರಂಗ, ತಪ್ಪು ಮಾಹಿತಿ ಪ್ರಕಟಿಸಿದ ಆರೋಪ ಹೊರಿಸಿ ಪತ್ರಕರ್ತರನ್ನು ಬಂಧಿಸಲಾಗಿದೆ.
ತನಿಖೆಯಲ್ಲಿ ಪೊಲೀಸರ ನಿರ್ಲಕ್ಷ್ಯ, ಆರೋಪಿಗಳಿಗೆ ರಾಜಕಾರಣಿಗಳಿಂದ ರಕ್ಷಣೆ, ಸಾಕ್ಷಿ ಹೇಳುವವರಿಗೆ ಸೂಕ್ತ ರಕ್ಷಣೆ ಇಲ್ಲದಿರುವುದು, ವಿಚಾರಣೆಯಲ್ಲಿ ವಿಳಂಬ -ಮುಂತಾದ ಅನೇಕ ಕಾರಣಗಳಿಂದಾಗಿ ಭಾರತದಲ್ಲಿ ವರದಿಗಾರರ ಹತ್ಯೆ ಪ್ರಕರಣಗಳ ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಪತ್ರಕರ್ತರ ರಕ್ಷಣೆಗಾಗಿ ಪ್ರತ್ಯೇಕ ಕಾಯಿದೆ ಇಲ್ಲದಿರುವುದು ಕೂಡ ಅಪರಾಧ ಎಸಗುವವರಿಗೆ ವರವಾಗಿದೆ ಎಂದು ವಿಶ್ಲೇಷಿಸಲಾಗಿದೆ.