Covid Pills: (ಜ.10) ಮೂರನೇ ಅಲೆಯಾಗಿ ಮತ್ತೆ ವಕ್ಕರಿಸಿರುವ ಕೋವಿಡ್‌ಗೆ ಸಂಬಂಧಿಸಿ ಒಂದು ಗುಡ್ ನ್ಯೂಸ್ ಹೊರಬಿದ್ದಿದೆ. ಅದರಲ್ಲೂ ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇದು ನಿಟ್ಟುಸಿರು ಬಿಡುವಂತಹ ವಿಷಯ. ಕೋವಿಡ್ ಸೋಂಕು ತಗುಲಿದರೆ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕೆಂಬ ಚಿಂತೆಯಲ್ಲಿದ್ದ ಜನರಿಗಾಗಿ ಒಂದೂವರೆ ಸಾವಿರಕ್ಕೂ ಕಡಿಮೆ ಬೆಲೆಗೆ ಮಾತ್ರೆಗಳು ಲಭ್ಯವಾಗಲಿದೆ. ಭಾರತದ ಪ್ರತಿಷ್ಠಿತ ಔಷಧಿ ತಯಾರಿಕಾ ಕಂಪನಿಗಳಲ್ಲಿ ಒಂದಾದ ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಕೋವಿಡ್‌ಗೆ ಔಷಧವಾಗಿ ಈ ಮಾತ್ರೆಗಳನ್ನು ಪರಿಚಯಿಸುತ್ತಿದೆ.
ಮೋಲ್‌ಫ್ಲು ಹೆಸರಿನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಮಾತ್ರೆಗಳು ಕೋವಿಡ್‌ಗೆ ಈಗ ನೀಡಲಾಗುತ್ತಿರುವ ಎಲ್ಲ ಚಿಕಿತ್ಸೆಗಳಿಗಿಂತ ಕಡಿಮೆ ಬೆಲೆಯದ್ದಾಗಿದೆ. 200 ಎಂಜಿ ತೂಕದ ಒಂದು ಮಾತ್ರೆಗೆ 35 ರೂಪಾಯಿಯಾಗಿದ್ದು, ಕೋವಿಡ್ ರೋಗಿಗಳು 5 ದಿನಗಳಲ್ಲಿ 40 ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಅಂದರೆ, ಒಂದು ಕೋರ್ಸ್‌ಗೆ 1,400 ರೂಪಾಯಿ ವೆಚ್ಚವಾಗಲಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಅಮೆರಿಕ ಮೂಲದ ಮರ್ಕ್ ಶಾರ್ಪ್ ಡೋಹ್ಮೆ ಕಂಪನಿಯ ಸಹಕಾರದೊಂದಿಗೆ ಭಾರತೀಯ ಮೂಲದ ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಈ ಮಾತ್ರೆಗಳನ್ನು ಉತ್ಪಾದಿಸುತ್ತಿದೆ. ಕೆಲವೇ ದಿನಗಳಲ್ಲಿ ದೇಶಾದ್ಯಂತ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ. ಭಾರತ ಮಾತ್ರವಲ್ಲದೇ 100ಕ್ಕೂ ಹೆಚ್ಚು ದೇಶಗಳಿಗೂ ಮೋಲ್‌ಫ್ಲು ಮಾತ್ರೆಗಳನ್ನು ಪೂರೈಸಲು ಎರಡೂ ಕಂಪನಿಗಳು ಜಂಟಿಯಾಗಿ ಸಿದ್ಧತೆ ನಡೆಸುತ್ತಿವೆ.
ತುರ್ತು ಸಂದರ್ಭಗಳಲ್ಲಿ ಮೋಲ್‌ಫ್ಲು ಮಾತ್ರೆಗಳನ್ನು ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಈಗಾಗಲೇ ಅನುಮತಿ ನೀಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯವಿರುವ ಹಾಗೂ ಪರಿಸ್ಥಿತಿ ಹದಗೆಟ್ಟಿರುವ ವಯಸ್ಕರಿಗೆ ಈ ಮಾತ್ರೆಗಳನ್ನು ನೀಡಬಹುದು ಎಂದು ಡಿಸಿಜಿಐ ಹೇಳಿದೆ. ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಮಾತ್ರವಲ್ಲದೇ 12ಕ್ಕೂ ಅಧಿಕ ಕಂಪನಿಗಳು ಈ ಮಾತ್ರೆಗಳನ್ನು ಉತ್ಪಾದಿಸಲು ಆಸಕ್ತಿ ತೋರಿವೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಲಕ್ಷಣವನ್ನು ನೋಡಿಕೊಂಡು ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದ್ದು, ನಿರ್ದಿಷ್ಟ ಚಿಕಿತ್ಸೆ ಎಂಬುದಿಲ್ಲ. ನೆಗಡಿ, ಜ್ವರ, ಕೆಮ್ಮು, ಸುಸ್ತು, ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳಿಗೆ ಅನುಗುಣವಾಗಿ ಬೇರೆಬೇರೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಉತ್ಪಾದನೆಯಾಗುತ್ತಿರುವ ಮೋಲ್‌ಫ್ಲು ಮಾತ್ರೆಗಳು ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಯಾವುದೇ ಲಕ್ಷಣವಿದ್ದರೂ ಇದನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.
ಇಂದಿನಿಂದ ಬೂಸ್ಟರ್ ಡೋಸ್:

ಈಗಾಗಲೇ ಎರಡು ಡೋಸ್ ತೆಗೆದುಕೊಂಡರೂ ಕೋವಿಡ್ ಆತಂಕವಿರುವ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಆಗಿ ಮತ್ತೊಂದು ಡೋಸ್ ನೀಡಲಾಗುತ್ತಿದೆ. ಜನವರಿ 10ರಿಂದ ಇದು ಆರಂಭವಾಗಿದ್ದು. ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ಕೋವಿಡ್ ವಾರಿಯರ್ಸ್ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾದಲ್ಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಕರ್ತವ್ಯದಲ್ಲಿ ನಿರತವಾಗಿರುವವರಿಗೂ ಮೊದಲ ಹಂತದಲ್ಲೇ ಮೂರನೇ ಡೋಸ್ ನೀಡಲಾಗುತ್ತಿದೆ. ಅರ್ಹ ಒಂದು ಕೋಟಿ ಜನರಿಗೆ ಈ ಕುರಿತು ಎಸ್‌ಎಂಎಸ್ ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ. ಈ ಹಿಂದೆ ಎರಡು ಡೋಸ್ ಪಡೆದ ಲಸಿಕೆಯನ್ನೇ ಮೂರನೇ ಡೋಸ್ ಆಗಿಯೂ ನೀಡಲಾಗುತ್ತಿದೆ. ಎರಡು ಹಾಗೂ ಮೂರನೇ ಡೋಸ್ ನಡುವಿನ ಅಂತರವನ್ನು ಒಂಬತ್ತು ತಿಂಗಳು ಅಥವಾ 39 ವಾರಗಳೆಂದು ಕೇಂದ್ರ ಆರೋಗ್ಯ ಇಲಾಖೆ ನಿಗದಿಪಡಿಸಿದೆ.