Mekedatu: (ಜ.6) ರಾಜ್ಯದಲ್ಲಿ ಮೇಕೆದಾಟು ಆಣೆಕಟ್ಟು ನಿರ್ಮಾಣ ವಿಚಾರ ಬಾರಿ ಚರ್ಚೆಯಾಗುತ್ತಿದೆ. ಮೇಕೆದಾಟು ಆಣೆಕಟ್ಟು ನಿರ್ಮಾಣ ಮಾಡಲೇ ಬೇಕು ಎಂದು ಆಗ್ರಹಿಸಿ ಮಾಜಿ ಜಲ ಸಂಪನ್ಮೂಲ ಸಚಿವ, ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ಪಾದಯಾತ್ರೆಯನ್ನೇ ಹಮ್ಮಿಕೊಂಡಿದ್ದಾರೆ. ಈ ಪಾದಯಾತ್ರೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗ್ತಿದ್ದು, ಡಿಕೆಶಿ ಈ ನಡೆಯ ಹಿಂದೆ ಸಾಕಷ್ಟು ಲೆಕ್ಕಾಚಾರಗಳಿದೆ ಎಂದು ಹೇಳಲಾಗುತ್ತಿದೆ.
ಡಿ.ಕೆ ಶಿವಕುಮಾರ್ 2023 ರಲ್ಲಿ ಶತಾಯ ಗತಾಯ ಸಿಎಂ ಆಗಬೇಕು ಅಂತಾ ಹೊರಟಿರುವ ನಾಯಕ. ಇದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡ್ತಿರುವ ಡಿಕೆಶಿ ಒಂದು ದೊಡ್ಡ ಬ್ರೇಕ್ ಗಾಗಿ ಪರಿತಪಿಸುತ್ತಿದ್ದಾರೆ. ಈ ಬ್ರೇಕ್ ಪಡೆಯಲೆಂದು ಈಗ ಮೇಕೆದಾಟು ಹೆಸರಿನಲ್ಲಿ ಬೃಹತ್ ಪಾದಯಾತ್ರೆಯನ್ನು ನಡೆಸಲು ಪ್ಲ್ಯಾನ್ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ.

ಭಾರಿ ಜನಪ್ರೀಯತೆಗಳಿಸುವ ಲೆಕ್ಕಚಾರಲ್ಲಿರುವ ಡಿ.ಕೆ ಶಿವಕುಮಾರ್ ಅದಕ್ಕಾಗಿ ಸಿದ್ದರಾಮಯ್ಯ ಅವರ ದಾರಿಯನ್ನೆ ಫಾಲೋ ಮಾಡ್ತಿದ್ದಾರೆ. ವಿಧಾನಸಭೆಯಲ್ಲಿ ರೆಡ್ಡಿ ಬ್ರದರ್ಸ್ ಗೆ ಸವಾಲು ಹಾಕಿ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ, ಆ ಬಳಿಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಅದೇ ರೀತಿ ಡಿ.ಕೆ ಶಿವಕುಮಾರ್ ಮೈಸೂರು ಕರ್ನಾಟಕ ಭಾಗದಲ್ಲಿ ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆ ನಡೆಸುವ ಮೂಲಕ ಜನಪ್ರೀಯತೆ ಗಳಿಸಲು ಪ್ರಯತ್ನ ಆರಂಭಿಸಿದ್ದಾರೆ.
ಇದನ್ನೊಂದು ರಾಜಕೀಯ ಪಕ್ಷದ ಪಾದಯಾತ್ರೆಗೆ ಸೀಮಿತ ಮಾಡದ ಡಿಕೆಶಿ ಹಲವು ಮಠಗಳ ಮಠಾಧೀಶರು, ಸಿನಿಮಾ ನಟರು ಸೇರಿದಂತೆ ಬೇರೆ ಬೇರೆ ವಲಯದ ಪ್ರಮುಖರನ್ನು ಯಾತ್ರೆಯಲ್ಲಿ ಭಾಗಿಯಾಗಲು ಮನವಿ ಮಾಡಿದ್ದಾರೆ. ಮೇಕೆದಾಟು ಯೋಜನೆಯನ್ನು ಕಾವೇರಿ ನದಿ ನೀರು ಹಂಚಿಕೆ ವಿವಾದದಂತೆ ಭಾವನಾತ್ಮಕ ವಿಚಾರವಾಗಿ ಬದಲಾಯಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಈ ಮೂಲಕ ಜನಪ್ರಿಯತೆ ಜೊತೆಗೆ ದಕ್ಷಿಣದಲ್ಲಿ ಹೆಚ್ಚು ಸ್ಥಾನ ಪಡೆಯುವ ಪ್ಲ್ಯಾನ್ ಕೂಡ ಮಾಡಿದ್ದಾರೆ. ಹೀಗಾಗಿ, ಈ ಪಾದಯಾತ್ರೆ ಡಿಕೆಶಿ ರಾಜಕೀಯ ಒಳಸುಳಿಗಳ ಬಗ್ಗೆ ಚರ್ಚೆಯಾಗ್ತಿದೆ. ಅಷ್ಟಕ್ಕೂ ಪಾದಯಾತ್ರೆ ಹಿಂದಿರುವ ರಾಜಕೀಯ ಲೆಕ್ಕಾಚಾರ ಏನು ಅಂತಾ ನೋಡುವುದಾದ್ರೆ.?
- ಮೇಕೆದಾಟು ಪಾದಯಾತ್ರೆ ಡಿಕೆಶಿ ಮೂಲಕ ವರ್ಚಸ್ಸು ವೃದ್ದಿಸಿಕೊಳ್ಳುವುದು
- ಬೃಹತ್ ಪ್ರಮಾಣದಲ್ಲಿ ಜನರನ್ನು ಒಗ್ಗೂಡಿಸಿ ನಾಯಕತ್ವ ಪ್ರದರ್ಶಿಸುವುದು
- ಕಾಂಗ್ರೆಸ್ ನೊಳಗೆ ಬಲಿಷ್ಠ ನಾಯಕನಾಗಿ ಹೊರ ಹೊಮ್ಮುವುದು ಮತ್ತು ಭವಿಷ್ಯದ ಸಿಎಂ ಅಭ್ಯರ್ಥಿ ಎಂದು ಪರೋಕ್ಷ ಸಂದೇಶ ಸಾರುವುದು
ಕೆಪಿಸಿಸಿ ಅಧ್ಯಕ್ಷರಾದ ಬಳಿಕವೂ ಶಿವಕುಮಾರ್ ಬಹಳಷ್ಟು ಶಾಸಕರು ಇನ್ನು ಅವರನ್ನು ನಂಬುವ ಹಂತದಲ್ಲಿಲ್ಲ, ಸಿದ್ದರಾಮಯ್ಯ ಮೇಲೆ ವಿಶ್ವಾಸ ಇಟ್ಟಿರುವ ಭಾಗಶಃ ನಾಯಕರು ಸಿದ್ದರಾಮಯ್ಯ ಮುಂದಿನ ಸಿಎಂ ಆಗ್ಲಿ ಅಂತಾ ಅಲ್ಲೊಮ್ಮೆ ಇಲ್ಲೊಮ್ಮೆ ಹೇಳಿ ವಿವಾದ ಹುಟ್ಟಿಸಿತ್ತಿರುತ್ತಾರೆ. ಈ ಎಲ್ಲ ಶಾಸಕರ ವಿಶ್ವಾಸ ಗಳಿಸಲು ಪಾದಯಾತ್ರೆ ಮೂಲಕ ಪ್ರಯತ್ನ ಮಾಡುವುದು.
ಜಲ ಸಂಪನ್ಮೂಲ ಸಚಿವರಾಗಿದ್ದಾಗ ಈ ಯೋಜನೆಗೆ ಜೀವ ತುಂಬಿದ್ದರು, ಅದನ್ನು ಅನುಷ್ಠಾನ ಮಾಡಿಸುವ ಮೂಲಕ ಕ್ರೇಡಿಟ್ ಪಡೆದುಕೊಳ್ಳುವುದು, ಬೃಹತ್ ಯಾತ್ರೆಯ ಮೂಲಕ ಹೈಕಮಾಂಡ್ ನಾಯಕರ ಗಮನ ಸೆಳೆಯುವುದು, ಚುನಾವಣೆ ದೃಷ್ಟಿಯಿಂದ ಈ ಭಾಗದಲ್ಲಿ ಪ್ರಬಲವಾಗಿರುವ ಜೆಡಿಎಸ್‌ಗೆ ಠಕ್ಕರ್ ಕೊಡುವುದು.
ಒಕ್ಕಲಿಗರ ನಾಯಕನಾಗುವ ಮೂಲಕ ಒಕ್ಕಲಿಗರ ಮತಗಳನ್ನು ತನ್ನತ್ತ ಸೆಳೆಯುವ ಪ್ರಯತ್ನವೂ ಹೌದು ಎನ್ನಲಾಗುತ್ತಿದೆ. ಮೇಲ್ನೋಟಕ್ಕೆ ಇದೊಂದು ಕುಡಿಯು ನೀರಿನ ಯೋಜನೆ, ಅದಕ್ಕಾಗಿ ಪಾದಯಾತ್ರೆ ಅನಿಸಿದರೂ ಇದರ ಹಿಂದೆ ಭಾರಿ ರಾಜಕೀಯ ಲೆಕ್ಕಾಚಾರ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Mekedatu: ತಾಕತ್ತು ಇದ್ದರೆ ನಮ್ಮನ್ನು ಬಂಧಿಸಲಿ: ಡಿ.ಕೆ ಶಿವಕುಮಾರ್