Pan India: (ಡಿ.30) :ಬೇರೆ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾಗಳ ರಿಲೀಸ್ ಕನ್ನಡ ಚಿತ್ರರಂಗಕ್ಕೆ ದೊಡ್ಡ ಸಮಸ್ಯೆ ಆಗಿ ಕಾಡತೊಡಗಿದೆ. ಒಂದು ಕಡೆ ಒಂದೇ ದಿನ 3-4 ಸಿನೆಮಾಗಳು ಬಿಡುಗಡೆಯಾಗುತ್ತಿವೆ. ಇನ್ನೊಂದು ಕಡೆ ಬೇರೆ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾಗಳು ಬಿಡುಗಡೆ ಆಗುವ ಕಾರಣ ಕನ್ನಡ ಚಿತ್ರಗಳು ರಿಲೀಸ್ ಆಗಲು ಥಿಯೇಟರ್ ಸಿಗದೇ ಸಮಸ್ಯೆ ಉಂಟಾಗುತ್ತಿದೆ.

ಚಿತ್ರ ರಿಲೀಸ್ ಮಾಡಲು ಥಿಯೇಟರ್ ಇಲ್ಲ
ಡಿಸೆಂಬರ್ 17ರಂದು ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿತ್ತು. ಈ ವೇಳೆ ಕನ್ನಡ ಚಿತ್ರ ಆನ ಥಿಯೇಟರ್ ಸಿಗದೇ ತೊಂದರೆ ಅನುಭವಿಸಿತ್ತು. ಈಗ ರಾಜಮೌಳಿ ನಿರ್ದೇಶನದ ಚಿತ್ರ ಆರ್ ಆರ್ ಆರ್ ಜನವರಿ 7 ರಂದು ಬಿಡುಗಡೆಯಾಗಲಿದೆ. ತೆಲುಗಿನ ಪುಷ್ಪ ಸಿನಿಮಾದಂತೆ ಆರ್ ಆರ್ ಆರ್ ಸಿನಿಮಾಗೂ ಕರ್ನಾಟಕದಲ್ಲಿ ಬಹುತೇಕ ಥಿಯೇಟರ್ ಗಳು ಬುಕ್ ಆಗೋದು ಗ್ಯಾರಂಟಿ ಆಗಿದೆ. ಇದರಿಂದ ಕನ್ನಡದ ಸಣ್ಣ ಪುಟ್ಟ ಸಿನಿಮಾಗಳು ಎತ್ತಂಗಡಿಯಾಗಲಿವೆ.
ಇದರ ಜೊತೆಗೆ ಜನವರಿ 7 ರ ಆಸುಪಾಸಿನಲ್ಲಿ ಚಿತ್ರಬಿಡುಗಡೆ ಮಾಡಲು ಕನ್ನಡ ನಿರ್ಮಾಪಕರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.ಅಂತೆಯೇ ಡಿಸೆಂಬರ್ 31ರಂದು ‘ಲವ್ ಯೂ ರಚ್ಚು’ ಅಲ್ಲದೇ, ಪ್ರಜ್ವಲ್ ದೇವರಾಜ್ ನಟನೆಯ “ಅರ್ಜುನ್ ಗೌಡ”, ಯೋಗಿ ನಟನೆಯ “ಒಂಬತ್ತನೇ ದಿಕ್ಕು”, ದಿಗಂತ್ ನಟನೆಯ “ಹುಟ್ಟುಹಬ್ಬದ ಶುಭಾಶಯಗಳು” ಚಿತ್ರಗಳು ತೆರೆಗೆ ಬರುತ್ತಿವೆ. ಇದರಿಂದ ಈ ಚಿತ್ರಗಳ ನಡುವೆ ಥಿಯೇಟರ್, ಕಲೆಕ್ಷನ್ ಸಂಬಂಧ ಪೈಪೋಟಿ ನಡೆಯುವುದು ಖಚಿತವಾಗಿದೆ.

ಸಾಲು ಸಾಲು ಕನ್ನಡ ಚಿತ್ರಗಳು ತೆರೆಗೆ
ಈಗಾಗಲೇ ಕೊರೋನಾ ಹಾವಳಿಯಿಂದ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ. ಮುಂದಿನ ದಿನಗಳಲ್ಲಿ ಕೊರೋನಾ ಹೆಚ್ಚಾದರೆ ಶೇ.50ರಷ್ಟು ಪ್ರೇಕ್ಷಕರ ಉಪಸ್ಥಿತಿಗೆ ಸರಕಾರ ನೀತಿ ರೂಪಿಸುವ ಭಯ ಚಿತ್ರ ನಿರ್ಮಾಪಕರನ್ನು ಕಾಡಿದೆ. ಈ ನಡುವೆ ಪರಭಾಷೆಯ ಚಿತ್ರಗಳ ನಡುವೆ ಥಿಯೇಟರ್ ಸಿಗದೇ ಹೈರಾಣ ಆಗುವ ಸ್ಥಿತಿ ಸ್ಯಾಂಡಲ್ ವುಡ್ ನಿರ್ಮಾಪಕರದ್ದಾಗಿದೆ.
ಇದನ್ನೂ ಓದಿ: Gajanana and Gang: ಫೆ.4ರಂದು ಬೆಳ್ಳಿತೆರೆಗೆ ಎಂಟ್ರಿ ಕೊಡ್ತಾರೆ ‘ಗಜಾನನ ಅಂಡ್ ಗ್ಯಾಂಗ್’ ಹುಡ್ಗರು…!
ರಾಜ ಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರ 1920ರ ದಶಕದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು, ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದೆ. ಈ ಚಿತ್ರದಲ್ಲಿ ಸೀತಾರಾಮರಾಜು ಪಾತ್ರದಲ್ಲಿ ಚರಣ್, ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ನೋಡುಗರಲ್ಲಿ ಕುತೂಹಲ ಉಂಟು ಮಾಡಿದೆ.