‘ಹೋರಾಟಕ್ಕೆ ಎಲ್ಲ ಪಕ್ಷದ ಶಾಸಕರಿಗೆ ಆಹ್ವಾನ ಕಳುಹಿಸುತ್ತೇನೆ’
D K Shivakumar: (ಡಿ. 30) ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದಿರುವುದು ಕಾಂಗ್ರೆಸ್ ಪಕ್ಷವಲ್ಲ. ಇಡೀ ರಾಜ್ಯದ ಜನ ಗೆದ್ದಿದ್ದಾರೆ. ಅವರು ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಇಲ್ಲಿ ನಾನು ಗೆದ್ದಿದ್ದೇನೆ ಎಂದು ಹೇಳುವುದಿಲ್ಲ.
ಯಾವುದೇ ಚುನಾವಣೆ ನಡೆಯುವಾಗ ಆಡಳಿತ ಪಕ್ಷಕ್ಕೆ ಅನುಕೂಲ ಹೆಚ್ಚಾಗಿರುತ್ತದೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ಜನ ವಿಧಾನ ಪರಿಷತ್, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೂಲಕ ಸಂದೇಶ ನೀಡುತ್ತಿದ್ದಾರೆ.

ಮೇಕೆದಾಟು ಯೋಜನೆ ದೇವೇಗೌಡರ ಕಾಲದಲ್ಲಿ ಆಗಿದ್ದು, ಕಾಂಗ್ರೆಸ್ ಹೈಜಾಕ್ ಮಾಡುತ್ತಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಇದು ದೇವೇಗೌಡರ ಯೋಜನೆಯಾದರೂ ಸಂತೋಷ, ಕುಮಾರಸ್ವಾಮಿ ಅವರ ಯೋಜನೆಯಾದರೂ ಸಂತೋಷ, ಬಿಜೆಪಿಯವರ ಯೋಜನೆಯಾದರೂ ಸಂತೋಷ. ಇದು ಎಲ್ಲರ ಯೋಜನೆ.
ಇದನ್ನೂ ಓದಿ: Mekedatu Project: ವಾಣಿಜ್ಯ ಮಂಡಳಿಗೆ ಆಹ್ವಾನಿಸಿದರೆ,ಇಡೀ ಚಿತ್ರರಂಗಕ್ಕೆ ಆಹ್ವಾನಿಸಿದಂತೆ: ಡಿ ಕೆ ಶಿವಕುಮಾರ್
ಮೈಸೂರಿನಿಂದ ಹೋರಾಟ ಮಾಡುತ್ತೇನೆ ಎಂದಿದ್ದರು. ಅವರು ಮಾಡಲಿ. ಯಾರು ಬೇಡ ಎನ್ನುವುದಿಲ್ಲ, ನಮ್ಮ ತಕರಾರಿಲ್ಲ. ಅವರು ಹೋರಾಟ ಮಾಡಿರುವುದಾಗಿ ಹೇಳಿದ್ದಾರೆ. ಜನ ಯಾರು ಯಾವ ಹೋರಾಟ ಮಾಡಿದ್ದಾರೆ ಎಂದು ನೋಡಿದ್ದಾರೆ. ಜನ ದಡ್ಡರಲ್ಲ. ನಾವು ಯಾರ ಜತೆಗೂ ಸ್ಪರ್ಧೆಗೆ ಬೀಳುವ ಅವಶ್ಯಕತೆ ಇಲ್ಲ.
ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋರಾಟ ಮಾಡುವುದು ನಮ್ಮ ಉದ್ದೇಶ. ಈ ಹೋರಾಟಕ್ಕೆ ಆಗಮಿಸುವಂತೆ ಎಲ್ಲ ಪಕ್ಷದ ಶಾಸಕರಿಗೆ ಆಹ್ವಾನ ಕಳುಹಿಸುತ್ತೇನೆ. ಎಲ್ಲ ಸಂಘ, ಸಂಸ್ಥೆಗಳು, ಮಾಜಿ ಶಾಸಕರಿಗೂ ಕಳುಹಿಸುತ್ತೇನೆ. ಎಲ್ಲರೂ ಬಂದು ಹೆಜ್ಜೆ ಹಾಕಲಿ. ನಾವು ಯಾರನ್ನೂ ಮೆಚ್ಚಿಸುವುದು ಬೇಡ, ನಮ್ಮ ಆತ್ಮಸಾಕ್ಷಿಯನ್ನು ನಾವು ಸಂತೋಷಪಡಿಸಿದರೆ ಸಾಕು’ ಎಂದರು.