Mekedatu Project: (ಡಿ.30) ಇದು ನನ್ನ ವೃತ್ತಿ, ಮನೆ, ಸಂಸ್ಥೆ ಎಂದು ಇಲ್ಲಿಗೆ ಆಗಮಿಸಿದ್ದೇನೆ. ಇಲ್ಲಿರುವ ಅನೇಕರು ನನ್ನ ಜತೆ ಕೆಲಸ ಮಾಡಿ, ಪರಿಚಯ ಇರುರುವವರು. ನಾವೆಲ್ಲರೂ ಗಾಂಧಿನಗರದಲ್ಲಿ ಡಬ್ಬ ಹೊತ್ತಿ ಕೆಲಸ ಮಾಡಿದ್ದೆವು. ಅದು ಒಂದು ಕಾಲ. ನನ್ನ ಹಳೇ ಸ್ನೇಹಿತರನ್ನು ಮತ್ತೆ ಭೇಟಿ ಮಾಡಿರುವುದು ಸಂತೋಷ ತಂದಿದೆ.
ಕಳೆದ 2 ವರ್ಷದಿಂದ ತಾವು ಪಟ್ಟ ಶ್ರಮ, ಬ್ಯಾಂಕ್, ಸರ್ಕಾರದವರ ಸಹಕಾರ ಇಲ್ಲದೇ, ವಾಣಿಜ್ಯ ಮಂಡಳಿ, ಸಹಾಯಕ ನಿರ್ದೇಶಕರು, ಮೇಕಪ್ ಮ್ಯಾನ್, ಲೈಟಿಂಗ್ ಕಾರ್ಮಿಕರು, ಚಿತ್ರಮಂದಿರ ಮಾಲೀಕರು, ತಂತ್ರಜ್ಞರವರೆಗೂ ಎಲ್ಲರಿಗೂ ತೊಂದರೆಯಿತು. ನಾನು ಎರಡು-ಮೂರು ಬಾರಿ ವಿರೋಧ ಪಕ್ಷದ ಅಧ್ಯಕ್ಷನಾಗಿ ಧ್ವನಿ ಎತ್ತಿದೆ. ಸರ್ಕಾರಕ್ಕೆ ನಿಮ್ಮ ಪ್ರಾಮುಖ್ಯತೆ ಗೊತ್ತಿಲ್ಲ.

ನಿರ್ಮಾಪಕರು ಒಂದು ಸಿನಿಮಾ ತೆಗೆಯಲು ಸಾವಿರಾರು ಜನರಿಗೆ ಉದ್ಯೋಗ, ಚಿತ್ರಮಂದಿರ ಮಾಲೀಕರು ಅನೇಕರಿಗೆ ಉದ್ಯೋಗ ಸೃಷ್ಟಿಸುತ್ತಿದ್ದಾರೆ. ಆದರೆ ಅವರನ್ನು ಯಾವ ಸರ್ಕಾರವೂ ಪರಿಗಣಿಸಿಲ್ಲ. ನನ್ನ ಚಿತ್ರಮಂದಿರಗಳು ಮತ್ತೆ ಆರಂಭವಾಗುತ್ತಿವೆ. ಸಾ.ರಾ ಗೋವಿಂದು ಅವರು ಮತ್ತೆ ಸದಸ್ಯತ್ವ ತೆಗೆದುಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ. ನಮ್ಮ ಹಳೇ ಕಾಲ ಹೋಗಿದೆ. ಹೊಸ ಕಾಲಕ್ಕೆ ನಾನು ಹೊಂದಿಕೊಳ್ಳಬೇಕಿದೆ.
ಒಳ್ಳೆಯ ವಿಚಾರಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯವರು ಎಲ್ಲ ಕಲಾವಿದರು, ನಿರ್ಮಾಪಕರು, ವಿತರಕರು ಈ ಭಾಷೆ, ನೆಲ, ಜಲ ವಿಚಾರ ಬಂದಾಗ ಸಂಪೂರ್ಣ ಸಹಕಾರ ನೀಡಿ ಬೆಂಬಲವಾಗಿ ನಿಂತಿದ್ದೀರಿ. ಮಹದಾಯಿ, ಕೃಷ್ಣೆ, ಕಾವೇರಿ ಹೋರಾಟದಲ್ಲಿ ಭಾಗವಹಿಸಿದ್ದೀರಿ. ನಿಮ್ಮ ಸ್ವಾಭಿಮಾನವನ್ನು ಗೌರವದಿಂದ ಉಳಿಸಿಕೊಂಡಿದ್ದೀರಿ.
ಪಾದಯಾತ್ರೆಗೆ ಹೆಸರು ನೋಂದಣಿ ಮಾಡಿಕೊಳ್ಳಿ
ಮೇಕೆದಾಟಿನಲ್ಲಿ ಜ.9 ರಿಂದ ಆರಂಭವಾಗಿ ಜ. 19 ರವರೆಗೂ 10 ದಿನಗಳ ಕಾಲ ಪಾದಯಾತ್ರೆ ಆರಂಭವಾಗಲಿದ್ದು, ಕೆಂಗೇರಿವರೆಗೂ ತಲುಪಲು 5 ದಿನ ಆಗುತ್ತದೆ. ನಂತರ ನಗರದೊಳಗೆ ಐದು ದಿನ ನಡೆಯಲಿದೆ. ನಿಮ್ಮಲ್ಲಿ ಯಾರೆಲ್ಲಾ ಬರುತ್ತೀರಿ ಎಂದರೆ, ನಿಮಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು. ಇದರಲ್ಲಿ ಭಾಗವಹಿಸಲು ನಿಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು.ವಾಣಿಜ್ಯ ಮಂಡಳಿಗೆ ಮುಂಚಿತವಾಗಿ ಬಂದು ಆಹ್ವಾನಿಸುತ್ತಿದ್ದೇನೆ.
ಜನರ ಮೇಲೆ ಪ್ರೀತಿ, ವಿಶ್ವಾಸ ಇದ್ದವರು ಬರಲಿ. ಯಾರಿಗೂ ಬರಲೇಬೇಕು ಎಂದು ಬಲವಂತ ಮಾಡುವುದಿಲ್ಲ. ನಾನು ಈ ರಂಗಕ್ಕೆ ಹೊಸಬನಲ್ಲ. ನನ್ನದೇ ಆದ ಶ್ರಮ ಇದೆ. ಅದರ ಫಲ ಇದೆ. ರಾಜ್ಯದ ಹಿತಕ್ಕಾಗಿ ಈ ಹೋರಾಟ ಮಾಡುತ್ತಿದ್ದು, ತಾವೆಲ್ಲ ಭಾಗವಹಿಸಬೇಕು.
ಇದನ್ನೂ ಓದಿ: Pan India:ಕನ್ನಡ ಚಿತ್ರರಂಗಕ್ಕೆ ಸಂಕಷ್ಟ ತಂದೊಡ್ಡಿದೆ ಪ್ಯಾನ್ ಇಂಡಿಯಾ ಸಿನಿಮಾ
ವಾಣಿಜ್ಯ ಮಂಡಳಿಗೆ ಬಂದು ಆಹ್ವಾನಿಸಿದರೆ, ಇಡೀ ಚಿತ್ರರಂಗಕ್ಕೆ ಆಹ್ವಾನಿಸಿದಂತೆ. ಎಲ್ಲರಿಗೂ ಇದೇ ಮೂಲ ಬೇರು. ಚಿತ್ರರಂಗಕ್ಕೆ ಇದು ನ್ಯಾಯಾಲಯ ಇದ್ದಂತೆ. ನಾವು ಈ ಹೋರಾಟದಲ್ಲಿ ಭಾಗವಹಿಸುವಂತೆ ಸುದೀಪ್, ಶಿವಣ್ಣ, ದರ್ಶನ್, ಯಶ್ ಸೇರಿದಂತೆ ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತೇವೆ.
ಯಾರಿಗೂ ಬಲವಂತ ಮಾಡುವುದಿಲ್ಲ. ಅವರು ಈ ಹಿಂದೆ ಸಾಕಷ್ಟು ಹೋರಾಟ ಮಾಡಿದ್ದಾರೆ. ನಮ್ಮ ನೀರು ನಮ್ಮ ಹಕ್ಕು, ಅವರ ನೀರು, ಅವರ ಹಕ್ಕು. ಈ ಹೋರಾಟಕ್ಕೆ ಬೆಂಬಲ ನೀಡುವುದು ಅವರ ಧರ್ಮ. ಇದು ಪಕ್ಷಾತೀತ ಹಾಗೂ ಜಾತ್ಯಾತೀತ ಹೋರಾಟ.