D K Shivakumar: (ಡಿ.22) : ಮತಾಂತರ ನಿಷೇಧ ಕಾಯ್ದೆ ಕುರಿತು ಮಂಡನೆಯಾಗಿರುವ ವಿಧೇಯಕದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ. ಮದುವೆಗೆ ಬೇಕಿರುವುದು ಪ್ರೀತಿ ನಂಬಿಕೆ ಹೊರತು ಜಾತಿ ಮತ್ತು ಧರ್ಮ ಎನ್ನುವ ಲೆಕ್ಕಾಚಾರಗಳಲ್ಲ.
ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಉದ್ದೇಶ ಮತಾಂತರ ನಿಷೇಧ ಕಾಯ್ದೆ ಪ್ರಕಾರ ಮದುವೆಯಾಗಲು ಹೆಣ್ಣು ಮತ್ತು ಗಂಡಿನ ಸಂಬಂಧಿಯಲ್ಲ ಬದಲಿಗೆ ಸರ್ಕಾರದ ಸಮ್ಮತಿ ಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತಾಂತರ ನಿಷೇಧ ಕಾಯ್ದೆ ಒಂದು ಕಪ್ಪುಚುಕ್ಕೆ ಇದ್ದಂತೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಈ ಕಾಯ್ದೆಯು ಮೀರಿಹೋಗಿದೆ.

ನಿರುದ್ಯೋಗ, ಬೆಲೆ ಏರಿಕೆ ಆಗಿದೆ
ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾ ಸಂಸ್ಥೆಗಳು ಬಲವಂತದ ಮತಾಂತರ ಮಾಡುತ್ತಿವೆ ಎನ್ನುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಸಚಿವರ ಮಕ್ಕಳು ಅಂತಹ ಸಂಸ್ಥೆಗಳಲ್ಲೇ ಓದುತ್ತಿಲ್ಲವೇ?ಪರಿಶಿಷ್ಟ ಸಮಾಜದ ವಿದ್ಯಾರ್ಥಿಗಳನ್ನು ಮತಾಂತರ ಮಾಡುತ್ತಿರುವುದು ಕಂಡುಬಂದರೆ ಸರ್ಕಾರದ ಅನುದಾನ ನಿಲ್ಲಿಸುವುದಾಗಿ ಕಾಯ್ದೆಯಲ್ಲಿ ಹೇಳಲಾಗಿದೆ.
ಇಂಥ ಸಂಸ್ಥೆಗಳು ನಡೆಯುತ್ತಿರುವುದೇ ಸರ್ಕಾರದ ಅನುದಾನದಲ್ಲಿ ತಕ್ಷಣವೇ ಅನುದಾನ ನಿಲ್ಲಿಸಿದರೆ ಮಕ್ಕಳ ಕತೆ ಏನು ಎಂದು ಸರ್ಕಾರ ಯೋಚನೆ ಮಾಡಿದೆಯೇ?ರಾಜ್ಯದ ಜನತೆ ಅನುಭವಿಸುತ್ತಿರುವ ಸಮಸ್ಯೆಗಳು ಹಾಗೇ ಉಳಿದಿವೆ. ಕೋವಿಡ್ ಪರಿಹಾರ, ನಿರುದ್ಯೋಗ, ಬೆಲೆ ಏರಿಕೆ ಮೊದಲಾದವುಗಳಿಂದ ಜನ ಕಂಗೆಟ್ಟಿದ್ದಾರೆ. ವಿಧಾನಸಭೆಯಲ್ಲಿ ಅಂತಹ ಪ್ರಮುಖ ವಿಷಯಗಳು ಇತ್ಯರ್ಥವಾಗಬೇಕು. ಚುನಾವಣೆಗಳ ನಿರಂತರ ಹಿನ್ನಡೆಯಿಂದ ಕಂಗೆಟ್ಟಿರುವ ಬಿಜೆಪಿಯು ತನ್ನ ಅಜೆಂಡಾವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದೆ ಎಂದು ಹೇಳಿದರು.