ಬೆಳಗಾವಿ: (ಡಿ.20) Nandini Ghee: ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸುವವರ ಆಸ್ತಿ ಮುಟುಗೋಲು ಹಾಕಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮೈಸೂರಿನಲ್ಲಿ ನಂದಿನಿ ತುಪ್ಪವನ್ನು ನಕಲಿಯಾಗಿ ತಯಾರು ಮಾಡಿ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ನಕಲಿ ತುಪ್ಪ ತಯಾರಕರ ಆಸ್ತಿ ಮುಟುಗೋಲು ಹಾಕಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ರುಚಿ, ಪರಿಶುದ್ಧತೆಯ ಮೂಲಕ ನಂದಿನಿ ತುಪ್ಪ ಸಾಕಷ್ಟು ಪ್ರಖ್ಯಾತಿ ಆಗಿದೆ. ನಿತ್ಯ ನೂರು ಟನ್ ಗೂ ಹೆಚ್ಚು ತುಪ್ಪ ಉತ್ಪಾದನೆ ಮಾಡಲಾಗುತ್ತದೆ. ತಿರುಪತಿ, ಅಯೋಧ್ಯೆಗೆ ನಂದಿನಿ ತುಪ್ಪ ಕಳುಹಿಸಲಾಗುತ್ತಿದೆ. ಸೇನೆಗೂ ಸಹ ನಂದಿನಿ ತುಪ್ಪ ಕಳುಹಿಸಲಾಗುತ್ತಿದೆ. ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿದರೆ ಸಾರ್ವಜನಿಕರು ಕೆಎಂಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
ಇದನ್ನೂ ಓದಿ: Salim Ahmed: ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
ಕಲಬೆರೆಕೆ ತುಪ್ಪದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಸಹ ಕೆಎಂಎಫ್ ಜೊತೆ ಕೈಜೋಡಿಸಬೇಕು. ಮೈಸೂರಿನಲ್ಲಿ ನಕಲಿ ತುಪ್ಪ ತಯಾರಿಸಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.