ಬೆಳಗಾವಿ: (ಡಿ.14): Winter Session :ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸತತ 3 ವರ್ಷಗಳು ಪ್ರವಾಹ, ಅತಿವೃಷ್ಟಿ ಹಾಗೂ ಕೆಲವು ಜಿಲ್ಲೆಗಳು ಬರ ಪರಿಸ್ಥಿತಿಯನ್ನು ಕಂಡಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೂರು ಬಾರಿ ಪ್ರವಾಹ ಬಂದಿದೆ ಎಂದರು.
ಬೆಳಗಾವಿಯಲ್ಲಿ ನೆಡೆಯುತ್ತಿರುವ ಅಧಿವೇಶನದಲ್ಲಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ತೌಕ್ತೆ ಚಂಡಮಾರುತ, ಜುಲೈ- ಆಗಸ್ಟ್ ನಲ್ಲಿ ಪ್ರವಾಹ ಹಾಗೂ ಅಕ್ಟೋಬರ್ – ನವೆಂಬರ್ ನಲ್ಲಿ ಅತಿವೃಷ್ಟಿ ಆಗಿದೆ. ಕಳೆದ 60 ವರ್ಷಗಳಲ್ಲೇ ಈ ವರ್ಷದ ನವೆಂಬರ್ ತಿಂಗಳಲ್ಲಿ ಆದಷ್ಟು ಮಳೆಯಾಗಿರಲಿಲ್ಲ.
2.5 ಲಕ್ಷ ಕೋಟಿ ನಷ್ಟ

ರಾಜ್ಯದ 31 ಜಿಲ್ಲೆಗಳಲ್ಲಿ 23 ಜಿಲ್ಲೆಗಳು ಅತಿವೃಷ್ಟಿಗೆ ಸಿಲುಕಿವೆ.ರಾಜ್ಯಾದ್ಯಂತ ರೈತರು 78 ಲಕ್ಷದ 83 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡಿದ್ದರು. ಇದರಲ್ಲಿ ಶೇ. 75 ರಷ್ಟು ಬೆಳೆ ಹಾನಿಯಾಗಿದೆ. ಭತ್ತ, ರಾಗಿ, ಶೇಂಗಾ, ಮೆಕ್ಕೆಜೋಳ, ಕಾಫಿ, ಮೆಣಸು, ಅಡಿಕೆ ಮುಂತಾದ ಹಣ್ಣು, ತರಕಾರಿ, ಹೂವು ಬೆಳೆದ ರೈತರು ಬೆಳೆ ಕಳೆದುಕೊಂಡು ಕಷ್ಟದಲ್ಲಿದ್ದಾರೆ.
ಒಟ್ಟು ಈ ವರ್ಷ 12.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಪ್ರವಾಹ, ಅತಿವೃಷ್ಟಿಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ರೂ. 2.5 ಲಕ್ಷ ಕೋಟಿ ನಷ್ಟವಾಗಿದೆ. ರಾಜ್ಯದ ರೈತರ ಕಷ್ಟವನ್ನು ನೆನೆದು ಸಂಕಟವಾಗುತ್ತಿದೆ.ಅಕ್ಟೋಬರ್ – ನವೆಂಬರ್ ನಲ್ಲಿ ವಾಡಿಕೆಯಂತೆ 166 ಮಿ.ಮೀ ಮಳೆ ಆಗಬೇಕಿತ್ತು, ಆದರೆ ಈ ವರ್ಷ 307 ಮಿ.ಮೀ ಮಳೆಯಾಗಿದೆ.
ಈ ತಿಂಗಳುಗಳಲ್ಲಿ ಕೈಸೇರಬೇಕಿದ್ದ ಮುಂಗಾರು ಬೆಳೆಯ ಫಸಲು ಸಂಪೂರ್ಣ ನಷ್ಟವಾಗಿದೆ.ನಾನು ಹೋದ ಕಡೆಗಳಲೆಲ್ಲಾ ಜನ ಬೆಳೆ ಪರಿಹಾರದ ಹಣ ಸಿಗೋಕೆ ನೀವೇ ಏನಾದ್ರೂ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ನಾಡಿನ ರೈತರ ಕಷ್ಟ ಹೇಳತೀರದಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಈ ವರ್ಷ ರಾಜ್ಯಕ್ಕೆ ನಯಾಪೈಸೆ ಪರಿಹಾರದ ಹಣ ಸಿಕ್ಕಿಲ್ಲ.
ಯು.ಪಿ.ಎ ಸರ್ಕಾರ ಇದ್ದಾಗ ರಾಜ್ಯದಿಂದ ಸಂಗ್ರಹವಾಗುತ್ತಿದ್ದ ತೆರಿಗೆ ಎಷ್ಟಿತ್ತು? ಕೇಂದ್ರದ ಬಜೆಟ್ ಗಾತ್ರ ಆಗ ಎಷ್ಟಿತ್ತು? ಈಗ ಎಷ್ಟಿದೆ? ಇವುಗಳ ವ್ಯತ್ಯಾಸವನ್ನೇ ಪರಿಗಣಿಸದೆ ಮೋದಿಯವರು ಪ್ರಧಾನಿಯಾದ ಮೇಲೆ ಹೆಚ್ಚು ಪರಿಹಾರದ ಹಣ ನೀಡಿದ್ದಾರೆ ಎನ್ನುವುದು ಬಿಜೆಪಿಯವರ ಆರ್ಥಿಕ ಜ್ಞಾನದ ಕೊರತೆಯನ್ನು ತೋರಿಸುತ್ತದೆ ಎಂದರು.