ಮಡಿಕೇರಿ: (ಡಿ.13) General Thimayya Museum: ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಹೊಸದಾಗಿ ಸೇರ್ಪಡೆ ಆಗಿರುವ ‘ಐಎನ್‍ಎಸ್ ಶಿವಾಲಿಕ್’ ಮಾದರಿಯ ಯುದ್ಧ ನೌಕೆಯನ್ನು ಭಾರತೀಯ ನೌಕಪಡೆಯ ಪೂರ್ವ ವಿಭಾಗದ ವೈಸ್ ಅಡ್ಮಿರಲ್ ಭಿಸ್ವಜಿತ್ ದಾಸ್ ಗುಪ್ತ ಅವರು ಸೋಮವಾರ ಲೋಕಾರ್ಪಣೆ ಮಾಡಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿದ ಬಳಿಕ, ಐಎನ್‍ಎಸ್ ಶಿವಾಲಿಕ್ ಮಾದರಿಯು ಯುದ್ದ ನೌಕೆಯನ್ನು ಉದ್ಘಾಟಿಸಿದರು.
ಯುವ ಜನರು ನೌಕಾಪಡೆಗೆ ಸೇರ್ಪಡೆಯಾಗಬೇಕು
ವೈಸ್ ಅಡ್ಮಿರಲ್ ಭಿಸ್ವಜಿತ್ ದಾಸ್ ಗುಪ್ತ ಮಾತನಾಡಿ, ಯುವ ಜನರು ನೌಕಾಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುವಂತಾಗಬೇಕು ಎಂದು ಕರೆ ನೀಡಿದರು. ಭಾರತೀಯ ನೌಕಾದಳವು ಅತ್ಯುತ್ತಮ ಮಾದರಿ ನೌಕಾ ಸೇನೆ ಹೊಂದಿದೆ.
ಭಾರತೀಯ ನೌಕಾಪಡೆಗೆ ತನ್ನದೇ ಆದ ಸ್ಥಾನವಿದ್ದು, ನೌಕಾಪಡೆಗೆ ಹೆಚ್ಚಿನ ಯುವಜನರು ಸೇರ್ಪಡೆಯಾಗಬೇಕು ಎಂದರು.
ಕೊಡಗಿನ ಜನರು ಸೇನಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸೇನಾ ಕ್ಷೇತ್ರವೆಂದರೆ ಹೆಚ್ಚಿನ ಗೌರವ ಭಾವನೆ ಹೊಂದಿದ್ದಾರೆ ಎಂದು ವೈಸ್ ಅಡ್ಮಿರಲ್ ದಾಸ್ ಗುಪ್ತ ಅವರು ಶ್ಲಾಘಿಸಿದರು.
ಭಾರತೀಯ ನೌಕಾಪಡೆಯಿಂದ ಭವಿಷ್ಯದಲ್ಲಿ 41 ಯುದ್ದ ಹಡಗು ನಿರ್ಮಾಣವಾಗಲಿದ್ದು, ಇದರಲ್ಲಿ 31 ಯುದ್ಧ ಹಡಗುಗಳನ್ನು ಭಾರತದಲ್ಲಿಯೇ ನಿರ್ಮಾಣ ಮಾಡಲು ಮುಂದಾಗಲಾಗಿದೆ. ಮುಂಬಯಿ, ಕೊಲ್ಕತ್ತ, ಗೋವಾ, ವಿಶಾಖಪಟ್ಟಣ ಇಲ್ಲಿ ನಿರ್ಮಾಣವಾಗಲಿದೆ. ಹಾಗೆಯೇ ಕೊಚ್ಚಿನ್‍ನಲ್ಲಿ ಖಾಸಗಿಯಾಗಿ ಯುದ್ಧ ಹಡಗು ನಿರ್ಮಾಣವಾಗಲಿದೆ. ರಾಷ್ಟ್ರದ ಭದ್ರತೆಗೆ ನೌಕಾಪಡೆ ಹೆಚ್ಚಿನ ಒತ್ತು ನೀಡಿದೆ ಎಂದು ಭಿಸ್ವಜಿತ್ ದಾಸ್ ಗುಪ್ತ ಅವರು ತಿಳಿಸಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಮ್ ಅಧ್ಯಕ್ಷರಾದ ಕರ್ನಲ್(ನಿವೃತ್ತ) ಕೆ.ಸಿ.ಸುಬ್ಬಯ್ಯ ಅವರು ಮಾತನಾಡಿ ಜನರಲ್ ತಿಮ್ಮಯ್ಯ ಮ್ಯೂಸಿಯಂ ಅಭಿವೃದ್ಧಿಗೆ ಭಾರತೀಯ ಸೇನಾ ವಿಭಾಗದ ವಾಯುಪಡೆ, ನೌಕಾಪಡೆ, ಭೂಸೇನಾಪಡೆ ಹೀಗೆ ಎಲ್ಲರೂ ಕೈಜೋಡಿಸಿದ್ದಾರೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಿಯರ್ ಅಡ್ಮಿರಲ್ ಉತ್ತಯ್ಯ ಅವರು ನೌಕಾಪಡೆಯ ಸಬ್‍ಮೇರಿಯನ್ ಉದ್ಘಾಟಿಸಿದರು. ಲೆ.ಜನರಲ್ ಪಿ.ಸಿ.ತಿಮ್ಮಯ್ಯ(ನಿವೃತ್ತ) ಅವರು ರಿಯರ್ ಅಡ್ಮಿರಲ್ ಉತ್ತಯ್ಯ ಅವರಿಗೆ ಉಡಿಕತ್ತಿ ನೀಡಿ ಗೌರವಿಸಿದರು. ಲೆ.ಜನರಲ್(ನಿವೃತ್ತ) ಕೆ.ಪಿ.ನಂಜಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಇತರರು ಇದ್ದರು.
ಇದನ್ನೂ ಓದಿ:Puneeth Rajkumar: ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ರಾಜಕುಮಾರ್ ಹೆಸರು ಶಿಫಾರಸ್ಸು : ಸಿಎಂ ಬೊಮ್ಮಾಯಿ
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸ್ವಾಗತಿಸಿದರು. ಸಿ.ಟಿ.ಪಂಚಮ್ ಅವರು ನಾಡಗೀತೆ ಹಾಡಿದರು. ಮೇಜರ್(ನಿವೃತ್ತ) ಬಿದ್ದಂಡ ನಂಜಪ್ಪ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ಅವರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ತಿಮ್ಮಯ್ಯ ಅವರ ಜೀವನ, ಸೇನಾ ಕ್ಷೇತ್ರದಲ್ಲಿನ ಸಾಧನೆಯನ್ನು ವೈಸ್ ಅಡ್ಮಿರಲ್ ಅವರು ವೀಕ್ಷಿಸಿದರು.