ಬೆಂಗಳೂರು:( ಡಿ.13) Kannada Language: ಕನ್ನಡ ಭಾಷೆಗೆ 2000ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದ್ದರೂ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ನೀಡುತ್ತಿರುವ ಅನುದಾನದಲ್ಲಿ ಕನ್ನಡಭಾಷೆಗೆ ತಾರತಮ್ಯ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರ (Central Govt) ಕಳೆದ ಏಳು ವರ್ಷಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಗಾಗಿ ನೀಡಿದ ಅನುದಾನ ಕೇವಲ 8.39 ಕೋಟಿ. ರೂ. ಮಾತ್ರ ಎಂದು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಡಾ. ಮನು ಬಳಿಗಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸ್ತ್ರೀಯ ಭಾಷಾ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆಗೆ ವರ್ಷಕ್ಕೆ ಕೇವಲ 9 ಕೋಟಿ ರು. ಅನುದಾನ ನೀಡಿದಂತಾಗಿದೆ.

ಕನ್ನಡ ಭಾಷೆಗೆ ತಾರತಮ್ಯ:
ತಮಿಳು ಭಾಷೆಗೆ ಕಳೆದ 7 ವರ್ಷಗಳಲ್ಲಿ 50 ಕೋಟಿ ಅನುದಾನ ಕೊಡಲಾಗಿದೆ. ಸಂಸ್ಕೃತಕ್ಕೆ 1,200 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ. ಏಳು ಕೋಟಿ ಜನರ ಭಾಷೆಯಾಗಿರುವ ಕನ್ನಡದ ಕಡೆಗಣನೆ ಯಾವ ಕನ್ನಡ ಪ್ರೇಮಿಯೂ ಸಹಿಸಿಕೊಳ್ಳಲಾರ ಮತ್ತು ಸಹಿಸಿಕೊಳ್ಳಲೂಬಾರದು ಎಂದು ಹೇಳಿದ್ದಾರೆ.
ಕನ್ನಡ ನಾಡಿನ ಜನರ ಪರವಾಗಿ ಉಗ್ರವಾಗಿ ಖಂಡಿಸುತ್ತೇನೆ. ಎರಡು ಸಾವಿರ ವರ್ಷಕ್ಕೂ ಹೆಚ್ಚು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪರಂಪರೆಯಿರುವ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿ ಎಂದು ಹೇಳಿದರು.
ಕೇಂದ್ರ ಸರ್ಕಾರ ಮೈಸೂರಿನ (Mysuru) ಭಾರತೀಯ ಭಾಷಾ ಸಂಸ್ಥಾನಕ್ಕೆ (ಸಿಐಐಎಲ್) ಹೆಚ್ಚು ಹಣ ಬಿಡುಗಡೆ ಮಾಡಬೇಕು. ಜತೆಗೆ, ಸ್ವಾಯತ್ತತೆ ನೀಡಿ ಶೀಘ್ರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು 2014ರಿಂದ 2022ರವರೆಗೆ ಕೇವಲ 8.39 ಕೋಟಿ ರು.ಅನುದಾನ ಕೊಟ್ಟಿರುವುದನ್ನು ರಾಜ್ಯಸಭಾ ಸದಸ್ಯ ಜಿ.ಎನ್.ಚಂದ್ರಶೇಖರ್ ಸಂಸತ್ ಕಲಾಪದ ಶೂನ್ಯ ವೇಳೆಯಲ್ಲಿ ಕನ್ನಡ ಭಾಷೆಯಲ್ಲೇ ಪ್ರಸಾಪಿಸಿ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.