Omicran Virus: (ಡಿ.3) ಕೊರೋನಾದ ರೂಪಾಂತರಿ ವೈರಸ್ ಒಮಿಕ್ರೋನ್ ಜಗತ್ತನ್ನು ತಲ್ಲಣಗೊಳಿಸಿದೆ. ಇದನ್ನು ಮೊದಲ ಬಾರಿಗೆ ಆಫ್ರಿಕಾದ ಬೋಸ್ವಾನ ದೇಶದಲ್ಲಿ ಪತ್ತೆ ಹಚ್ಚಲಾಯಿತು. ಆದರೆ ಈ ವೈರಸ್ ಬಗ್ಗೆ ನ.24ರಂದು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಿದರು.

ವೈರಸ್ ಗೆ ತುತ್ತಾದ ದೇಶಗಳು:
ಈಗಾಗಲೇ ಈ ವೈರಸ್ ಭಾರತ ಸೇರಿದಂತೆ ಆಸ್ಟ್ರೇಲಿಯಾ, ಇಟಲಿ,ಜರ್ಮನಿ, ಸ್ಪೈನ್, ಹಾಂಗ್ಕಾಂಗ್ ಮೊದಲಾದ ದೇಶಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. ಈ ವೈರಸ್ ಬಹಳ ಎಚ್ಚರಿಕೆಯಿಂದ ಇರಬೇಕಾದದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆ ನ.೨೬ರಂದು ಹೇಳಿದೆ.
5ನೇ ರೂಪಂತರಿ ವೈರಸ್
ಆಲ್ಫಾ,ಬೀಟಾ, ಗಾಮಾ, ಡೆಲ್ವಾ ಬಳಿಕದ ಐದನೇ ರೂಪಾಂತರಿ ವೈರಸ್ ಒಮಿಕ್ರೋನ್ ಆಗಿದೆ. ಡೆಲ್ವಾ ರೂಪಾಂತರಿ ಅತ್ಯಂತ ಅಪಾಯಕಾರಿ ಪರಿಣಾಮ ಬೀರಿದ್ದು ಈ ಸಾಲಿಗೆ ಒಮಿಕ್ರೋನ್ ಸೇರ್ಪಡೆ ಆಗುವ ಬಗ್ಗೆ ವಿಜ್ಞಾನಿಗಳು ಆತಂಕ ಹೊಂದಿದ್ದಾರೆ.

ವೇಗವಾಗಿ ಹರಡುತ್ತದೆ ಈ ವೈರಸ್
ಒಮಿಕ್ರೋನ್ ಎಷ್ಟು ವೇಗವಾಗಿ ಹರಡಬಲ್ಲದು ಎನ್ನುವ ಬಗ್ಗೆ ವಿಜ್ಞಾನಿಗಳಿಗೆ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ. ಆದರೆ ದಕ್ಷಿಣ ಅಫ್ರಿಕಾದಲ್ಲಿ ಇದು ಡೆಲ್ವಾ ರೂಪಾಂತರಿ ವೈರಸ್ ಗಿಂತ ವೇಗವಾಗಿ ಹರಡಿದ್ದನ್ನು ಪತ್ತೆ ಹಚ್ಚಲಾಗಿದೆ. ಆದರೆ ಇದು ಹೆಚ್ಚು ಅಪಾಯಕಾರಿಯೇ ಎನ್ನುವ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಇದರ ಪತ್ತೆಗೆ ಒಂದೆರಡು ವಾರ ತಗುಲಬಹುದು ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.
ಲಸಿಕೆ ಪಡೆದವರು ಸೇಫ್?
ಲಸಿಕೆ ಈ ರೂಪಾಂತರಿ ವೈರಸ್ ಮೇಲೆ ಪರಿಣಾಮ ಬೀರುತ್ತದೆಯೇ ಎನ್ನುವ ಬಗ್ಗೆ ಇನ್ನೂ ಅಂದಾಜು ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕೆ ಜೊತೆಗೆ ಲಸಿಕೆ ಪಡೆದವರಿಗೆ ಇದರ ಪರಿಣಾಮ ಕಡಿಮೆ ಇರುತ್ತದೆ ಎಂದು ಅಂದಾಜು ಮಾಡಲಾಗಿದೆ.

ಶ್ರೀಮಂತರು, ರಾಜಕಾರಣಿಗಳು ಕಾರಣ!
ಮುನ್ನೆಚ್ಚರಕೆ ಕ್ರಮವಾಗಿ ಇಂಗ್ಲೆಂಡ್ ಸರಕಾರ ಆಫ್ರಿಕಾ ದೇಶಗಳಿಂದ ತಮ್ಮ ದೇಶಕ್ಕೆ ಪ್ರವಾಸ ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ. ಇದೇ ನಿಯಮವನ್ನು ಅಮೆರಿಕಾವೂ ಜಾರಿಗೆ ತಂದಿದೆ.
ಆದರೆ ಆಫ್ರಿಕಾ ದೇಶದ ಪ್ರವಾಸ ನಿರ್ಬಂಧದಿಂದ ಅಂಥ ಪರಿಣಾಮ ಉಂಟಾಗದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ದೇಶದ ಪ್ರಜೆಗಳು ಬೇರೆ ದೇಶದ ಮಾರ್ಗದಿಂದ ಬರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಶ್ರೀಮಂತರು, ರಾಜಕಾರಣಿಗಳು ನಿಯಮ ಉಲ್ಲಂಘನೆ ಮಾಡಿ ಪ್ರಯಾಣ ಮಾಡುವುದೂ ಕಳೆದ ೨ ವರ್ಷಗಳಿಂದ ವೈರಸ್ ಹರಡಲು ಕಾರಣವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವಿಮಾನ ಪ್ರಯಾಣ ನಿರ್ಭಂದ
ಲಾಕ್ ಡೌನ್, ವಿಮಾನ ಪ್ರಯಾಣ ನಿರ್ಬಂಧದಿಂದ ಸಾಮಾನ್ಯ ಜನರಿಗೆ ಕಳೆದ ೨-೩ ವರ್ಷದಿಂದ ಸಾಕಷ್ಟು ತೊಂದರೆ ಆಗಿದೆ. ಈ ರೀತಿಯ ನಿಯಮದ ಬದಲು ರೂಪಾಂತರಿ ವೈರಸ್ ಎದುರಿಸಲು ವೈದ್ಯಕೀಯ ಸೌಲಭ್ಯದ ಹೆಚ್ಚಳ, ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.