ಬೆಳ್ತಂಗಡಿ: ನ.25: Harish Poonja: ಶಾಸಕರು ಹೊತ್ತಿದ್ದ ದೇವರ ಪಲ್ಲಕ್ಕಿ ಅಪವಿತ್ರವಾಯಿತೆಂದು ಪಲ್ಲಕ್ಕಿಯನ್ನು ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಶುದ್ಧಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೊಕಿನಲ್ಲಿ ನಡೆದಿದೆ. ಸದ್ಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬೆಳ್ತಂಗಡಿ ತಾಲೋಕಿನ ಬಿಜೆಪಿ ಶಾಸಕ ಹರೀಶ್ ಪೂಂಜಾ ಶ್ರೀ ವೆಂಕಟರಮಣ ಸ್ವಾಮಿಯ ಪಲ್ಲಕ್ಕಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದ್ದರು. ನ. 19ರಂದು ಕಾರ್ತಿಕ ಹುಣ್ಣಿಮೆ ದಿನದಂದು ಬೆಳ್ತಂಗಡಿಯ ಲಾಯಿಲ ಗ್ರಾಮದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದ ಪ್ರಯುಕ್ತ ದೇವರ ಪಲ್ಲಕ್ಕಿ ಮೆರವಣಿಗೆ ನಡೆದಿದೆ.
ಇದೇ ಸಮಯದಲ್ಲಿ ಬೆಳ್ತಂಗಡಿಯ ಮುಖ್ಯ ಪೇಟೆಯಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅಲ್ಲಿ ನೆರೆದಿದ್ದ ಜನರ ಒತ್ತಾಯದ ಮೇರೆಗೆ ಮಣಿದು ದೇವರ ಪಲ್ಲಕ್ಕಿಗೆ ಹೆಗಲು ನೀಡಿದ್ದರು. ಶಾಸಕ ಹರೀಶ್ ಪೂಂಜಾ ಮೆರವಣಿಗೆಯ ವಿಡಿಯೋವನ್ನು ಜಿಎಸ್‌ಬಿ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಒಂದು ಜಿಎಸ್‌ಬಿ ಸಮುದಾಯದ ಸಂಪ್ರದಾಯಸ್ಥ ಜನರಲ್ಲಿ ಅಸಮಾಧಾನ ಉಂಟಾಗಿದೆ
ಜನಿವಾರ ಹಾಕಿದವರು ಹೊರಬೇಕು:

ಯಾವುದೇ ಧರ್ಮದ ಪಲ್ಲಕ್ಕಿ ಅಥವಾ ಇನ್ನಿತರ ಪೂಜಾ ಕೈಂಕರ್ಯಗಳನ್ನು ಮಾಡಲು ನಿಯಮಗಳಿವೆ. ಹಾಗೆಯೇ ಜಿಎಸ್‌ಬಿ ಸಮುದಾಯದಲ್ಲಿ ಪಲ್ಲಕ್ಕಿ ಹೊರುವವರು ಜನಿವಾರ ಹಾಕಿದವರು ಮಾತ್ರ ಹೊರಬೇಕು. ಪಲ್ಲಕ್ಕಿ ಹೊರುವವನು ಶುಚೀರ್ಭೂತನಾಗಿರಬೇಕು ಅಂದರೆ ದೇವರ ಪಲ್ಲಕ್ಕಿ ಹೊರುವವರು ಸ್ನಾನ ಮಾಡಿ ಶುಚಿಯಾಗಿ ಇರಬೇಕು ಹಾಗೂ ಇನ್ನಿತರ ನಿಯಮಗಳು ಇದೆ.
ಶಾಸಕ ಹರೀಶ್ ಪೂಂಜಾ ಅವರು ಅನ್ಯಜಾತಿಯವರಾಗಿದ್ದು, ಶುಚಿತ್ವವಿಲ್ಲದೇ ಪಲ್ಲಕ್ಕಿ ಹೊತ್ತಿರುವುದರಿಂದ ಪಲ್ಲಕ್ಕಿ ಅಶುದ್ಧವಾಗಿದೆ ಎಂದು ಜಿಎಸ್‌ಬಿ ಸಮುದಾಯ ಮುಖಂಡರು ಹಾಗೂ ಸಮುದಾಯದ ಸಂಪ್ರದಾಯಸ್ಥ ಜನರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸಾದ ಸ್ವಿಕರಿಸಿದ್ದ ಶಾಸಕರು:
ಅಂದು ಸಂಜೆಯ ವೇಳೆಗೆ ಬೆಳ್ತಂಗಡಿಯ ಶ್ರೀ ವೆಂಕಟರಮಣ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಪ್ರಸಾದ ಸ್ವೀಕರಿಸಿದ್ದರು. ಬಳಿಕ ದೇವರ ಪಲ್ಲಕ್ಕಿ ಮೆರವಣಿಗೆ ಆರಂಭವಾಗಿತ್ತು. ಕೆಲ ಹೊತ್ತಿನ ಬಳಿಕ ಪಲ್ಲಕ್ಕಿ ಬೆಳ್ತಂಗಡಿ ಪೇಟೆಯ ಬಳಿ ಸಾಗುತ್ತಿದ್ದಂತೆಯೇ ಹರೀಶ್ ಪೂಂಜಾ ಕೂಡಾ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಜಿಎಸ್‌ಬಿ ಸಮುದಾಯಕ್ಕೆ ಸೇರಿದ ಯುವಕರಿಬ್ಬರು ಶಾಸಕ ಹರೀಶ್ ಪೂಂಜಾಗೆ ಪಲ್ಲಕ್ಕಿ ಹೊರುವಂತೆ ಕೇಳಿಕೊಂಡಿದ್ದರು.
ಯುವಕರ ಒತ್ತಾಯಕ್ಕೆ ಶಾಸಕರು ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದರು. ಪಲ್ಲಕ್ಕಿ ಉತ್ಸವದ ಸಂಪ್ರದಾಯ ಮುರಿದ ಹಿನ್ನಲೆಯಲ್ಲಿ ಯುವಕರಿಬ್ಬರನ್ನು ಜಿಎಸ್‌ಬಿ ಸಮುದಾಯದ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಯುವಕರಿಗೆ ಸಮುದಾಯದ ಸ್ವಾಮೀಜಿ ಬುದ್ಧಿವಾದ ಹೇಳಿ ಪಲ್ಲಕ್ಕಿಗೆ ಪ್ರಾಥಮಿಕ ಪರಿಹಾರ ಕಾರ್ಯವನ್ನು ಸೂಚಿಸಿದ್ದಾರೆ. ಪಲ್ಲಕ್ಕಿಯ ಶುದ್ಧೀಕರಣ ಪ್ರಕ್ರಿಯೆ ನಡೆದಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್

ಶಾಸಕ ಹರೀಶ್ ಪೂಂಜಾ ಅವರು ಪಲ್ಲಕ್ಕಿ ಹೊತ್ತು ಸಾಗುವ ದೃಶ್ಯವನ್ನು ನೋಡಿ ತೀವ್ರ ಚರ್ಚೆಗೆ ಕಾರಣವಾಗಿದೆ. ಶಾಸಕ ಹರೀಶ್ ಕಾಂಗ್ರೆಸ್ ಶಾಸಕರಿದ್ದರೆ ಪಲ್ಲಕ್ಕಿ ಅಪವಿತ್ರವಾಯಿತು ಎಂದು ಗಲಭೇ ಮಾಡುತ್ತಿದ್ದರೂ ದಿನವಿಡೀ ಮದುವೆ, ಗೃಹಪ್ರವೇಶ, ಶವಸಂಸ್ಕಾರ ಅಂತಾ ತಿರುಗುವ ಶಾಸಕ ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ದೇವರ ಪಲ್ಲಕ್ಕಿಯನ್ನು ಹೊತ್ತಿದ್ದು ಮೈಲಿಗೆಯಾಗಲಿಲ್ಲವೇ? ಪಲ್ಲಕ್ಕಿ ಹೊರುವವರು ಮನೆಯಿಂದ ಸ್ನಾನ ಮಾಡಿ ನೇರ ದೇಗುಲಕ್ಕೆ ತೆರಳಿ ಪಲ್ಲಕ್ಕಿಯನ್ನು ಹೊರಬೇಕಾದ ಸಂಪ್ರದಾಯವನ್ನು ಮುರಿದದ್ದು ಧರ್ಮ ವಿರೋಧ ಅಲ್ವೇ ಎಂಬ ಆಕ್ರೋಶ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.
ಇದನ್ನೂ ಓದಿ: ಗಗನಕ್ಕೇರಿದ ತರಕಾರಿ ಬೆಲೆ – ಗ್ರಾಹಕರ ಜೇಬಿಗೆ ಕತ್ತರಿ
ದಲಿತರಿಗೂ ಪಲ್ಲಕ್ಕಿ ಹೊರಲು ಅವಕಾಶ ನೀಡಿ:
ಬೆಳ್ತಂಗಡಿಯ ದಲಿತ ಸಂಘಟನೆಗಳ ಮುಖಂಡರೂ ಚರ್ಚೆಗೆ ಕಾಲಿಟ್ಟಿದೂ, ಶಾಸಕ ಪಲ್ಲಕ್ಕಿ ಹೊತ್ತ ವಿಚಾರವಾಗಿ ಮೌನ ಮುರಿದಿದ್ದಾರೆ. ಈ ವೇಳೆ ದಲಿತರಿಗೂ ಪಲ್ಲಕ್ಕಿ ಹೊರುವ ಅವಕಾಶ ನೀಡಬೇಕು. ಶಾಸಕರಿಗೆ ಪಲ್ಲಕ್ಕಿಯನ್ನು ಹೊರಲು ಅವಕಾಶ ನೀಡಿದ ಸಮುದಾಯದ ಮುಖಂಡರು ಬೇರೆಯವರಿಗೆ ಯಾಕೆ ನೀಡುವುದಿಲ್ಲ ದಲಿತರಿಗೂ ಪಲ್ಲಕ್ಕಿ ಹೊರುವ ಅವಕಾಶ ನೀಡಬೇಕೆಂದು ಆಗ್ರಹ ಮಾಡಿದ್ದಾರೆ
ಈ ವಿಚಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಜಿಎಸ್‌ಬಿ ಸಮುದಾಯದ ಮುಖಂಡರು ಹೇಳಿದ್ದಾರೆ. ಗೊಂದಲ ಆಗಿರುವುದು ನಿಜ, ಆದರೆ ಅದನ್ನು ಅಂದೇ ಪರಿಹಾರ ಮಾಡಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.