ಮಂಗಳೂರು: (ನ.24) Gang Rape ನಗರದ ಹೊರವಲಯದ ಪರಾರಿ ಹೆಂಚಿನ ಫ್ಯಾಕ್ಟರಿಯಲ್ಲಿ ಬಾಲಕಿ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರರಾಜ್ಯದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಇಂದು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಮೂವರು ಮತ್ತು ಝಾರ್ಖಂಡ್ ಮೂಲದ ಓರ್ವನನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳು 21 ವರ್ಷದವರಾಗಿದ್ದು, ಓರ್ವ 33 ವರ್ಷದ ವ್ಯಕ್ತಿಯಾಗಿದ್ದಾನೆ. ಜಾರ್ಖಂಡ್ ರಾಜ್ಯದ ಸಿಂಡೇಗಾ ಜಿಲ್ಲೆಯ 8 ವರ್ಷ ಪ್ರಾಯದ ಬಾಲಕಿಯನ್ನು ನವೆಂಬರ್ 21ರಂದು ಟೈಲ್ಸ್ ಫ್ಯಾಕ್ಟರಿಯಲ್ಲಿ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು.
ಬಳಿಕ ಫ್ಯಾಕ್ಟರಿ ಒಳಗಡೆ ಇದ್ದ ಚರಂಡಿಗೆ ದುರುಳರು ಬಾಲಕಿಯ ಮೃತದೇಹವನ್ನು ಎಸೆದಿದ್ದರು. ಮೂವರು ಆರೋಪಿಗಳು ಟೈಲ್ಸ್ ಫ್ಯಾಕ್ಟರಿ ಸಿಬ್ಬಂದಿಯಾಗಿದ್ದು, ಓರ್ವ ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿದ್ದಾನೆ.
ಈ ಆರೋಪಿಗಳ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಫೋಕ್ಸೋ ಕಾಯ್ದೆ ಮತ್ತು ಐಪಿಸಿ 302 ಅಡಿ ಪ್ರಕರಣ ದಾಖಲಾಗಿದೆ. ನಾಲ್ಕು ಜನ ಆರೋಪಿಗಳ ಪೈಕಿ ಮೂವರು ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢವಾಗಿದೆ. ಇಬ್ಬರು ಆರೋಪಿಗಳು ಈ ಹಿಂದೆಯೂ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ತಂದೆ ಮತ್ತು ತಾಯಿ ಕುಡಿತದ ಚಟಕ್ಕೆ ಬಿದ್ದಿದ್ದು, ಇದನ್ನೇ ಬಳಸಿ ದೌರ್ಜನ್ಯ ಎಸಗಿದ್ದಾರೆ.
1960ನೇ ಇಸವಿಯಲ್ಲಿ ಮಂಗಳೂರು ಹೊರವಲಯದ ಪರಾರಿ ಬಳಿ ಆರಂಭವಾಗಿದ್ದ ರಾಜ್ ಟೈಲ್ಸ್ ಫ್ಯಾಕ್ಟರಿಯನ್ನು ಸದ್ಯ ಕೇರಳ ಮತ್ತು ಮಂಗಳೂರು ಮೂಲದವರಿಂದ ಲೀಸ್ ಪಡೆದು ಫ್ಯಾಕ್ಟರಿ ಕಾರ್ಯನಿರ್ವಹಣೆ ಮಾಡಲಾಗುತ್ತಿದ್ದುಈ ಫ್ಯಾಕ್ಟರಿಯಲ್ಲಿ ಒಟ್ಟು 35 ಕಾರ್ಮಿಕರಿದ್ದು, ಆರು ಜನ ಮಕ್ಕಳಿದ್ದಾರೆ. ಮಧ್ಯಪ್ರದೇಶ, ಬಿಹಾರ್, ಉತ್ತರಪ್ರದೇಶ, ಜಾರ್ಖಂಡ್ ರಾಜ್ಯದ ಕಾರ್ಮಿಕರು ಇಲ್ಲಿದ್ದಾರೆ.

ಏನಿದು ಪ್ರಕರಣ?
ಫ್ಯಾಕ್ಟರಿ ಇರುವ ಪ್ರದೇಶದಲ್ಲೇ ಬಿಡಾರಗಳಲ್ಲಿ ವಾಸಿಸುತ್ತಿದ್ದ ಈ ಕಾರ್ಮಿಕರಲ್ಲಿ ನಾಲ್ವರು ಕಾಮುಕರು ಕ್ಯಾಂಪ್‌ನಲ್ಲಿದ್ದ ಜಾರ್ಖಂಡ್ ಮೂಲದ ಕಾರ್ಮಿಕ ದಂಪತಿಯ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದಾರೆ. ಬಾಲಕಿಯನ್ನು ಕೊಲೆ ಮಾಡಿ ಟೈಲ್ಸ್ ಫ್ಯಾಕ್ಟರಿಯ ಡ್ರೈನೇಜ್‌ನಲ್ಲಿ ಹಾಕಿದ್ದಾರೆ.
ತನ್ನ ಸಹೋದರ, ಸಹೋದರಿಯರ ಜೊತೆ ಆಟ ಆಡುತ್ತಿದ್ದ 8 ವರ್ಷದ ಬಾಲಕಿಯನ್ನು ಕಾಮುಕರು ಬಾಯಿಯನ್ನು ಮುಚ್ಚಿ ಎತ್ತಿಕೊಂಡು ರೂಮಿನೊಳಗೆ ಕರೆದೊಗಿದ್ದಾರೆ. ಬಳಿಕ ಸಾಮೂಹಿಕ ಅತ್ಯಚಾರ ಎಸೆಗಿ, ರಕ್ತ ಸ್ರಾವದಿಂದ ಮತ್ತು ನೋವಿನಿಂದ ಬಳಲಿ ಕಿರುಚುತ್ತಿದ್ದ ಬಾಲಕಿಯನ್ನು ಕತ್ತುಹಿಸುಕಿ ಸಾಯಿಸಿದ್ದರು. ಸುತ್ತಮುತ್ತ ಯಾರು ಇಲ್ಲದಿರುವುದನ್ನು ಖಚಿತಪಡಿಸಿ ಮೃತ ಬಾಲಕಿಯನ್ನು ಫ್ಯಾಕ್ಟರಿ ಒಳಗಿರುವ ಚರಂಡಿಯೊಳಗೆ ಹಾಕಿದ್ದರು. ಮಗು ನಾಪತ್ತೆಯಾಗಿದೆ ಎಂದು ಗೊತ್ತಾದಾಗ ಇತರರ ಜೊತೆ ಸೇರಿ ಹುಡುಕುವ ಹಾಗೆ ನಟಿಸಿದರು.
ಇದನ್ನೂ ಓದಿ: D K Shivakumar: ಫಸಲ್ ಭೀಮಾದಿಂದ ರೈತರಿಗೆ ಅನ್ಯಾಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಚಾಕಲೇಟ್ ಕೊಟ್ಟು ದೌರ್ಜನ್ಯ
ಬಾಲಕಿಗೆ ಈ ಹಿಂದೆಯೂ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಆಗ ಚಾಕಲೇಟ್, ಶೇಂಗಾ ನೀಡಿ ಬಾಲಕಿಯ ಬಳಿ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದರು. ನಾಲ್ವರು ಆರೋಪಿಗಳಲ್ಲಿ ಇಬ್ಬರು ಈ ಹಿಂದೆ ಕೂಡಾ ದೌರ್ಜನ್ಯ ಎಸಗಿದ್ದು, ಈ ಬಾರಿ ನಾಲ್ವರು ದೌರ್ಜನ್ಯ ಎಸಗಿದ್ದಾರೆ. 3 ಆರೋಪಿಗಳು ಅತ್ಯಾಚಾರ ನಡೆಸುವಾಗ ನಾಲ್ಕನೇ ಆರೋಪಿ ಯಾರೂ ಬಾರದ ಹಾಗೆ ನೋಡಿಕೊಳ್ಳುತ್ತಿದ್ದ ಎಂದು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
ಮಂಗಳೂರು ನಗರ ಮತ್ತು ಜಿಲ್ಲೆಯ ಫ್ಯಾಕ್ಟರಿಗಳಿಗೆ ಪೊಲೀಸ್ ಇಲಾಖೆ ಸೂಚನೆ ನೀಡಲು ತಿರ್ಮಾನಿಸಿದೆ. ಕಾರ್ಮಿಕರ ಒಟ್ಟು ಮಾಹಿತಿ, ಹೊರ ರಾಜ್ಯದವರ ಸಂಖ್ಯೆ ಮತ್ತು ಫ್ಯಾಕ್ಟರಿ ಯಲ್ಲಿರುವ ಮಕ್ಕಳು, ಹೆಣ್ಣು ಮಕ್ಕಳ ಸಂಖ್ಯೆಯನ್ನು ನೀಡುವಂತೆ ಸೂಚನೆ ನೀಡಲಾಗಿದೆ ಮತ್ತು ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದ್ದಾರೆ.