ACB Ride in Karnataka: ಬೆಂಗಳೂರು: (ನ .24) : ಕರ್ನಾಟಕದಾದ್ಯಂತ ಇಂದು ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಬೇಟೆಗೆ ಮುಂದಾಗಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಕರ್ನಾಟಕದ ಅನೇಕ ಅಧಿಕಾರಿಗಳ ಕಚೇರಿ ಹಾಗೂ ನಿವಾಸದ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಕಾಲ ಕೆಎಎಸ್ ಅಧಿಕಾರಿ ನಾಗರಾಜ್, ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಸಿಯೋಥೆರಫಿಸ್ಟ್ ರಾಜಶೇಖರ, ಬಿಬಿಎಂಪಿ ಸಿಬ್ಬಂದಿ ಮಾಯಣ್ಣ, ಬಿಬಿಎಂಪಿ ಸಿಬ್ಬಂದಿ ಬಾಗಲಗುಂಟೆಯ ಗಿರಿ ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಎಸಿಬಿ ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 60 ಕಡೆ ಎಸಿಬಿ ದಾಳಿ ನಡೆಸಿದ್ದಾರೆ.
400ರಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ತಂಡವಾಗಿ ಬಂದು ದಾಳಿ ನಡೆಸಿದ್ದಾರೆ15 ಅಧಿಕಾರಿಗಳ ಮೇಲೆ ನಿರಂತರ ದೂರು ಬಂದ ಹಿನ್ನೆಲೆ, 8 ಜನ ಎಸಿಬಿ, 100 ಎಸ್‌ಪಿ, 300 ಜನ ಸಿಬ್ಬಂದಿ ಸೇರಿ ಒಟ್ಟು 408 ಜನರಿಂದ ದಾಳಿ ನಡೆಯಲಿದೆ.
ಎಸಿಬಿ ದಾಳಿಯಲ್ಲಿ ಸಿಲುಕಿರುವ ಅಧಿಕಾರಿಗಳ ಪಟ್ಟಿ:
1.ಕೆ.ಎಸ್ ಲಿಂಗೇಗೌಡ, ಎಕ್ಸಿಕ್ಯೂಟಿವ್ ಇಂಜಿನಿಯರ್ ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರು
2. ಶ್ರೀನಿವಾಸ್ ಕೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಎಲ್.ಬಿ.ಸಿ ಮಂಡ್ಯ
3. ಲಕ್ಷ್ಮಿಕಾಂತಯ್ಯ, ರೆವಿನ್ಯೂ ಇನ್ಸ್‌ಪೆಕ್ಟರ್ ದೊಡ್ಡಬಳ್ಳಾಪುರ.
4. ವಾಸುದೇವ್, ಪ್ರಾಜೆಕ್ಟ್ ಮ್ಯಾನೇಜರ್ ನಿರ್ಮಿತಿ ಕೇಂದ್ರ ಬೆಂಗಳೂರು.
5. ಬಿ.ಕೃಷ್ಣಾರೆಡ್ಡಿ, ಜನರಲ್ ಮ್ಯಾನೇಜರ್, ನಂದಿನಿ ಡೈರಿ ಬೆಂಗಳೂರು.
6. ಟಿ.ಎಸ್.ರುದ್ರೇಶಪ್ಪ, ಜಾಯಿಂಟ್ ಡೈರೆಕ್ಟರ್, ಅಗ್ರಿಕಲ್ಚರ್ ಡಿಪಾರ್ಟ್‌ಮೆಂಟ್ ಗದಗ
7. ಎ.ಕೆ.ಮಸ್ತಿ, ಕೋ ಆಪರೇಟಿವ್ ಡೆವಲಪ್ಮೆಂಟ್ ಆಫೀಸರ್, ಸವದತ್ತಿ ಡೆಪ್ಯೂಟೇಷನ್, ಬೈಲಹೊಂಗಲ
8. ಸದಾಶಿವ ಮರಲಿಂಗಣ್ಣನವರ್, ಸೀನಿಯರ್ ಮೋಟಾರ್ ಇನ್ಸ್‌ಪೆಕ್ಟರ್ ಗೋಕಾಕ್
9. ನಾತಾಜೀ ಹೀರಾಜಿ ಪಾಟೀಲ್, ಗ್ರೂಪ್ ಸಿ ಬೆಳಗಾಂ ಹೆಸ್ಕಾಂ
10. ಕೆ.ಎಸ್.ಶಿವಾನಂದ್, ರಿಟೈರ್ಡ್ ಸಬ್ ರಿಜಿಸ್ಟರ್, ಬಳ್ಳಾರಿ
11. ರಾಜಶೇಖರ್, ಫಿಜಿಯೋಥೆರಪಿಸ್ಟ್, ಯಲಹಂಕ ಸರ್ಕಾರಿ ಆಸ್ಪತ್ರೆ
12. ಮಾಯಣ್ಣ.ಎಂ, ಎಫ್.ಡಿ.ಸಿ ಬಿಬಿಎಂಪಿ ಬೆಂಗಳೂರು ರೋಡ್ಸ್ &ಇನ್ಫ್ರಾಸ್ಟ್ರಕ್ಚರ್
13. ಎಲ್.ಸಿ.ನಾಗರಾಜ್, ಸಕಾಲ, ಅಡ್ಮಿನಿಸ್ಟ್ರೇಷನ್ ಆಫಿಸರ್, ಬೆಂಗಳೂರು
14. ಜಿ.ವಿ.ಗಿರಿ, ಡಿ ಗ್ರೂಪ್ ಸಿಬ್ಬಂದಿ ಬಿಬಿಎಂಪಿ ಯಶವಂತಪುರ
15. ಎಸ್.ಎಂ.ಬಿರಾದಾರ್, ಜಾಯಿಂಟ್ ಎಂಜಿನಿಯರ್ ಲೋಕೋಪಯೋಗಿ ಇಲಾಖೆ, ಜೇವರ್ಗಿ.
ಮಂಗಳೂರು ಸ್ಮಾರ್ಟ್ ಸಿಟಿ ಇ ಇ ಅಧಿಕಾರಿ ಮನೆಗೆ ದಾಳಿ:ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮಂಗಳೂರು: ಕಂಪನಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇಗೌಡ ಅವರ ಮನೆ ಮೇಲೆ ಎಸಿಬಿ, ದಾಳಿ ನಡೆಸಿದ್ದು ದಾಖಲೆಗಳ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದೊಡ್ಡಬಳ್ಳಾಪುರದ ರೆವಿನ್ಯೂ ಇನ್ಸ್‌ಪೆಕ್ಟರ್ ಮನೆಗೆ ದಾಳಿ:
ಡೊಡ್ಡಬಳ್ಳಾಪುರ: ರೆವಿನ್ಯೂ ಇನ್ಸ್‌ಪೆಕ್ಟರ್ ಲಕ್ಷ್ಮೀನರಸಿಂಹಯ್ಯ ಎಂಬುವರ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ತೇರಿನ ಬೀದಿಯಲ್ಲಿನ ಮನೆ ಮೇಲೆ ದಾಳಿ ಮಾಡಿದ್ದು, ಬೆಳಗಿನಿಂದ ಅಧಿಕಾರಿಗಳು ಮನೆಯಲ್ಲಿ ದಾಖಲಾತಿಗಳ ಪರಿಶೀಲನೆ ಮಾಡುತ್ತಿದ್ದಾರೆ
ಗದಗ ಜಂಟಿ ಕೃಷಿ ನಿರ್ದೇಶಕ ಎಸ್.ಟಿ. ರುದ್ರೇಶಪ್ಪ ಮನೆ ಮೇಲೆ ದಾಳಿ:

ಗದಗ : ಗದಗ ಜಂಟಿ ಕೃಷಿ ನಿರ್ದೇಶಕ ಎಸ್.ಟಿ. ರುದ್ರೇಶಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿ ನೆಡೆಸಿದು, ಅಪಾರ ಪ್ರಮಾಣದ ಚಿನ್ನಾಭರಣ, ನಗದು ಹಾಗೂ ಆಸ್ತಿ ಕಂಡು ಸ್ವತಃ ಅಧಿಕಾರಗಳೇ ಸುಸ್ತಾಗಿದ್ದಾರೆ. 7 ಕೆಜಿ ಚಿನ್ನದ ಬಿಸ್ಕತ್, 1 1/2ಕೆಜಿ ಚಿನ್ನಭಾರಣ ಮತ್ತು 3 ಕೆಜಿ ಮೌಲ್ಯದ ಬೆಳ್ಳಿ ಸಾಮಾನು ಸೇರಿದಂತೆ 5 ಕೋಟಿ ರೂ.ಮೌಲ್ಯದ ಚಿನ್ನಾಭರಣ ಹಾಗೂ 15 ಲಕ್ಷ ರೂ. ನಗದು ಪತ್ತೆಯಾಗಿದೆ.
ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಅಧಿಕಾರಿ ಆಗಿರುವ ರುದ್ರೇಶಪ್ಪ ಮನೆಯ ಮೇಲೆ 40 ಅಧಿಕಾರಿಗಳ ತಂಡ ಶಿವಮೊಗ್ಗ ಹಾಗೂ ಗದಗದ ಮನೆ ಮತ್ತು ಕಚೇರಿ ಸೇರಿದಂತೆ 5 ಕಡೆ ದಾಳಿ ಮಾಡಲಾಗಿದೆ.
ದಾಳಿಯ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ನಗದು ಅಲ್ಲದೇ 3 ಕೋಟಿ ರೂ. ಮೌಲ್ಯದ ಮನೆ ಆಸ್ತಿ ಕಂಡು ಸ್ವತಃ ಅಧಿಕಾರಿಗಳೇ ದಂಗಾಗಿದ್ದಾರೆ.
ಕಲಬುರ್ಗಿಯ ಬಿಡಬ್ಲೂ ಜೆಇ ಶಾಂತಗೌಡ ನಿವಾಸಕ್ಕೆ ದಾಳಿ

ಕಲಬುರ್ಗಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪ ಹಿನ್ನೆಲೆಯಲ್ಲಿ ಜೆಇ ಶಾಂತಗೌಡ ನಿವಾಸಕ್ಕೂ ಎಸಿಬಿ ಅಧಿಕಾರಿಗಳು ದಾಳಿ ನೆಡೆಸಿದ್ದು, ಅಪಾರ ಸಂಪತ್ತನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಪೈಪ್, ಬಕೇಟ್ ನಲ್ಲಿ ಕಂತೆ ಕಂತೆ ನೋಟ್ ಪತ್ತೆ ಹಚ್ಚಿದ್ದಾರೆ.
ಕಲಬುರ್ಗಿಯ ಪಿಡಬ್ಲೂ ಜೆಇ ಶಾಂತಗೌಡ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಅವರ ಕಲಬುರ್ಗಿ ನಗರದ ಗುಬ್ಬಿ ಕಾಲೋನಿಯ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.ದಾಳಿಯ ವೇಳೆಯಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ, ಪಾಸ್ತಿಯನ್ನು ಎಸಿಬಿ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ.
ಮನೆಯಲ್ಲಿರುವ ಬೀರುವಿನಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ. ಪ್ಲಂಬರ್ ಕರೆಸಿ, ಪೈಪ್ ಕತ್ತರಿಸಿದ್ದು, ಪೈಪ್ ನಲ್ಲಿಯೂ ಕಂತೆ ಕಂತೆ 25 ಲಕ್ಷಕ್ಕೂ ಅಧಿಕ ಹಣವನ್ನು ಪತ್ತೆಹಚ್ಚಿದ್ದಾರೆ. ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಸಿಕ್ಕಂತ ಹಣವನ್ನು ಬಕೆಟ್ ನಲ್ಲಿ ತುಂಬಿಕೊಂಡು ಲೆಕ್ಕ ಮಾಡುವ ಕಾರ್ಯದಲ್ಲಿ ಎಸಿಬಿ ಅಧಿಕಾರಿಗಳು ಬ್ಯೂಸಿಯಾಗಿದ್ದಾರೆ. ಬೆಂಗಳೂರಿನಲ್ಲೂ ಆಸ್ತಿ ಇರುವ ಮಾಹಿತಿ ಸಿಕ್ಕಿದ್ದು, ಎರಡು ಕಾರ್, ಎರಡು ಬೈಕ್ ಸೇರಿ ವಾಹನಗಳು ಸಹ ಪತ್ತೆಯಾಗಿದೆ.
ನಿವೃತ್ತ ಸಬ್ ರಿಜಿಸ್ಟಾರ್ ಕೆ. ಎಸ್. ಶಿವಾನಂದ್ ಮನೆ ಮೇಲೆ ಎಸಿಬಿ ದಾಳಿ
ಮಂಡ್ಯ: ನಿವೃತ್ತ ಸಬ್ ರಿಜಿಸ್ಟಾರ್ ಕೆ. ಎಸ್. ಶಿವಾನಂದ್ ಮನೆ ಮೇಲೆ ಬಳ್ಳಾರಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸಿ ಜುಲೈ 30 ರಂದು ನಿವೃತ್ತರಾಗಿದ್ದರು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊತ್ತನಹಳ್ಳಿ ಹಾಗೂ ಬೆಂಗಳೂರಿನ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಫಿಸಿಯೋಥೆರಪಿಸ್ಟ್ ಕ್ಲಿನಿಕ್ ಮೇಲೆ ಎಸಿಬಿ ದಾಳಿ :
ಯಲಹಂಕ : ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಜಶೇಕರ್ ಅವರ ಕ್ಲಿನಿಕ್ ಮತ್ತು ನಿವಾಸದ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ರಾಜಶೇಕರ್, ಕೊರೊನಾ ಸಮಯದಲ್ಲಿ 3 ಬಿಡಿಎ ಸೈಟ್ , 2 ರೆವೆನ್ಯೂ ಸೈಟ್, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 5 ಎಕರೆ ಜಮೀನು ಖರೀದಿಸಿದ್ದ. ಈ ಹಿನ್ನೆಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆ. ಆರ್. ಪೇಟೆಯ ಶ್ರೀನಿವಾಸ್ ಇಇ ಮನೆ ಮೇಲೆ ಎಸಿಬಿ ದಾಳಿ
ಮಂಡ್ಯ: ಹೇಮಾವತಿ ಜಲಾಶಯ ಯೋಜನೆಯ 3 ನೇ ವಿಭಾಗದ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ ಇಇ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅನಾವಶ್ಯಕ ಕಾಮಗಾರಿ ನಡೆಸಿ ಸುಮಾರು 20 ಕೋಟಿ ರೂ ಅವ್ಯವಹಾರದ ಆರೋಪ ಹಿನ್ನಲೆ ದಾಳಿ ನೆಡೆಸಿದ್ದಾರೆ. ಹೇಮಾವತಿ ನದಿಯಲ್ಲಿ ಪ್ರವಾಹ ಇಲ್ಲದಿದ್ದರೂ ಪ್ರವಾಹ ಉಂಟಾಗಿದೆ ಎಂದು ಯಾವುದೇ ಟೆಂಡರ್ ಕರೆಯದೆ ನೂರಾರು ಕೋಟಿ ಹಣ ತಿಂದಿದ್ದಾರೆ.
ನಾಲೆಯ ಆಧುನೀಕರಣ ಕಾಮಗಾರಿ ನಡೆಸಲಾಗಿತ್ತು. ಕಳಪೆ ಕಾಮಗಾರಿ ನಡೆಸಿ ಹಣ ವಂಚಿಸಿರುವ ಬಗೆಗೂ ದೂರುಗಳು ಕೇಳಿ ಬಂದಿದ್ದವು. ಸದ್ಯ ಮೈಸೂರಿನ ಬೋಗಾದಿಯಲ್ಲಿರುವ ನಿವಾಸ ಹಾಗೂ ನಂಜನ ಗೂಡಿನ ಹದಿನಾರು ಗ್ರಾಮದ ಫಾರ್ಮ್ ಹೌಸ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲೂ ಎಸಿಬಿ ದಾಳಿ:
ಬೆಳಗಾವಿ: ಬೆಳಗಾವಿಯ ಆರ್‌ಟಿಒ ಮೋಟಾರು ವೆಹಿಕಲ್ ಇನ್ಸ್‌ಪೆಕ್ಟರ್ ಸದಾಶಿವ ಮರಲಿಂಗಣ್ಣನವರ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಕೆ.ಮಾಸ್ತಿ, ಬೆಳಗಾವಿ ಹೆಸ್ಕಾಂ ವಿಭಾಗದ ಗ್ರೂಪ್ ಸಿ ನೌಕರ ನಾತಾಜಿ ಮನೆ ಮೇಲೆ ದಾಳಿ ಮಾಡಿದ್ದಾರೆ. ಮೂವರು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಮನೆ ಸೇರಿ ಒಟ್ಟು 6 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹೆಸ್ಕಾಂ ಡಿಪಾರ್ಟ್ಮೆಂಟ್ ನಲ್ಲಿ ಲೈನ್ ಮೆಕ್ಯಾನಿಕ್ ಗ್ರೇಡ್ ಕೆಲಸ ಮಾಡುತ್ತಿರುವ ನಾತಾಜಿ ಪಾಟೀಲ್ ಮನೆ ಕಚೇರಿ ಮೇಲೆ ಎಸಿಬಿ ಎಸ್‌ಪಿ ಬಿಎಸ್ ನೇಮಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ ನಾತಾಜಿ ಪಾಟೀಲ್ ಮನೆಯಲ್ಲಿ ಡಾಲರ್ ನೋಟುಗಳು ಪತ್ತೆಯಾಗಿವೆ. ಬೆಳಗಾವಿಯ ವೈಭವನಗರದ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ಮಾಡುವಾಗ ಅಪಾರ ಪ್ರಮಾಣದ ಆಸ್ತಿ ದಾಖಲೆ, ಹಣ ಪತ್ತೆಯಾಗಿದೆ.
ನಾತಾಜಿ ಪಾಟೀಲ್ ಮನೆಯಲ್ಲಿ ಬೆಳ್ಳಿ ವಸ್ತು, ಚಿನ್ನದ ಒಡವೆಗಳ ಜತೆ ಪ್ಲಾಟಿನಂ ಆಭರಣಗಳು ಪತ್ತೆಯಾಗಿವೆ. ಹಾಗೂ ಹೆಸ್ಕಾಂ ಇಲಾಖೆಯ ಕೆಲವು ಕಡತಗಳು, ಜಮೀನು ಪತ್ರಗಳು ಸಹ ಪತ್ತೆಯಾಗಿವೆ. ನಾತಾಜಿ ಪಾಟೀಲ್ ವೈಭವ ನಗರದಲ್ಲಿರುವ ತನ್ನ 3 ಅಂತಸ್ತಿನ ಮನೆಗೆ ಲಿಫ್ಟ್ ಅಳವಡಿಸಿದ್ದು ಅಧಿಕಾರಿಗೂ ಪ್ರತಿ ಮನೆಯ ಕೋಣೆಯನ್ನು ಪರೀಶಿಲನೆ ಮಾಡುತ್ತಿದ್ದಾರೆ.

ಬಿಬಿಎಂಪಿ ಪ್ರಥಮ ದರ್ಜೆ ಗುಮಾಸ್ತ ಮಾಯಣ್ಣನ ಮನೆ ಮೇಲೆ ದಾಳಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಪ್ರಥಮ ದರ್ಜೆ ಗುಮಾಸ್ತನಾಗಿರುವ ಎಂ.ಮಾಯಣ್ಣ ಕಳೆದ ಏಳು ವರ್ಷಗಳಿಂದ ಒಂದೇ ವಿಭಾಗದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಮಾಯಣ್ಣ ಹಲವು ಬಾರಿ ವರ್ಗಾವಣೆ ಮಾಡಿದ್ದರೂ ಪ್ರಭಾವ ಬಳಸಿ ವರ್ಗಾವಣೆ ರದ್ದುಪಡಿಸಿಕೊಂಡು ಪಾಲಿಕೆಯಲ್ಲೇ ಉಳಿದಿದ್ದಾರೆ.
ನಕಲಿ ಬಿಲ್ ಸೃಷ್ಟಿಸಿ ಸರಕಾರ ಹಾಗೂ ಪಾಲಿಕೆಗೆ ಕೋಟ್ಯಾಂತರ ರೂ. ನಷ್ಟ ಮಾಡಿರುವ ಆರೋಪ ಇವರ ಮೇಲಿತ್ತು. . ಮಾಜಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷರೂ ಆಗಿರುವ ಮಾಯಣ್ಣ ನಕಲಿ ಸಹಿ, ಬಿಲ್, ದಾಖಲೆಗಳನ್ನು ಸೃಷ್ಟಿಸಿ ಸರಕಾರ ಹಾಗೂ ಪಾಲಿಕೆಗೆ ನೂರಾರು ಕೋಟಿ ರೂ. ವಂಚನೆ ಮಾಡಿದ್ದಾರೆ. ಡಿವೈಎಸ್ ಪಿ ರವಿಕುಮಾರ್ ನೇತೃತ್ವದಲ್ಲಿ ಮಾಯಣ್ಣ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.
ಎಸಿಬಿ ಸೇರಿದಂತೆ ಇತರೆ ದಾಳಿಗಳ ಬಗ್ಗೆ ಮೊದಲೇ ಮಾಯಣ್ಣನಿಗೆ ಮಾಹಿತಿ ಇತ್ತು. ಹೀಗಾಗಿ ಕಳೆದ ಹಲವು ವರ್ಷಗಳಿಂದ ಅಲರ್ಟ್ ಆಗಿದ್ದ. ತಮ್ಮ ಆಪ್ತರ ಹೆಸರಿನಲ್ಲಿ ಆಸ್ತಿ ನೋಂದಣಿ ಮಾಡಿಸಿದ್ದ. ಪತ್ನಿ ಹೆಸರಲ್ಲಿ, ಅತ್ತೆ-ಮಾವನ ಹೆಸರಲ್ಲಿ, ಸಂಪೂರ್ಣ ಆಸ್ತಿ ಆಪ್ತರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದ.
ಮಾಯಣ್ಣ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ. ದಾಳಿ ವೇಳೆ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ. ದಾಖಲೆಯಿಲ್ಲದ ಹಣ, ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ. ಅರ್ಧ ಕೆಜಿ ಚಿನ್ನಾಭರಣ ಮತ್ತು ಸುಮಾರು ಒಂದೂವರೆ ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಮಾಯಣ್ಣ ಆಪ್ತರ ಮನೆ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಾಯಣ್ಣಗೆ ಸಂಬಂಧಿಸಿದ ಕಚೇರಿಗಳಲ್ಲಿ ಶೋಧ ಕಾರ್ಯ ಶುರುವಾಗಿದ್ದು ಚಾಮರಾಜಪೇಟೆಯಲ್ಲಿರುವ ಮಾಯಣ್ಣನ ಎರಡು ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಹಾಗೂ ಪ್ರಸಿದ್ಧ ದೇವಸ್ಥಾನಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದ ಎಂದು ಜೋಸೆಫ್ ಕೊಟ್ಡ ದೂರಿನಲ್ಲಿ ಉಲ್ಲೇಖಿಸಲಾಗಿದೆ
ಸಂಜೆ ವೇಳೆಗೆ ಇನ್ನೂ ದೊಡ್ಡ ಮಟ್ಟದಲ್ಲಿ ದಾಖಲೆಗಳು, ಚಿನ್ನ ಹಾಗೂ ಸಂಪತ್ತು ಪತ್ತೆಯಾಗುವ ಸಾಧ್ಯೆತೆಯಿದೆ ಎಂದು ಮೂಲಗಳು ತಿಳಿಸಿವೆ. ಸಂಜೆ ವೇಳೆ ಎಷ್ಟು ತಿಮಿಂಗಿಲಗಳು ಬಲೆ ಬೀಳಬಹದು ಎಂದು ಕಾದುನೋಡಬೇಕಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿ ಎಸಿಬಿ ಡಿವೈಎಸ್‌ಪಿ ಪ್ರಮೋದ್ ನೇತೃತ್ವದಲ್ಲಿ ಸಕಾಲ ಆಡಳಿತಾಧಿಕಾರಿ L.C.ನಾಗರಾಜ್ ಮನೆ ಮೇಲೆ ರೇಡ್ ನಡೆದಿದೆ. L.C.ನಾಗರಾಜ್ ಆಪ್ತ ನಂದೀಶ್ ಮನೆಯಲ್ಲೂ ತಲಾಷ್ ನಡೆಯುತ್ತಿದೆ. 1 ಡಿವೈಎಸ್ಪಿ, 2 ಇನ್ಸ್‌ಪೆಕ್ಟರ್, ಸೇರಿದಂತೆ 8 ಸಿಬ್ಬಂದಿ ತಂಡ ಎರಡು ಜೀಪ್‌ನಲ್ಲಿ ಬಂದಿದ್ದು ಚಿನ್ನಾಭರಣ, ಹಣ ಅಸ್ತಿ ವಿವರ ಪಡೆಯುತ್ತಿದ್ದಾರೆ.