Rain In Bangalore: ಬೆಂಗಳೂರು: (ನ.22): ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ನಗರದ ಯಲಹಂಕ ಪೊಲೀಸ್ ಠಾಣೆ ಬಳಿಯ ಮುಖ್ಯರಸ್ತೆಗಳು ಮಳೆಯಿಂದ ಜಲಾವೃತವಾಗಿದೆ. ರಸ್ತೆಯಲ್ಲಿ ನುಗ್ಗಿದ ನೀರಿನಿಂದಾಗಿ ಸುಮಾರು 25ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ರಾತ್ರಿ ಸುರಿದ ಮಳೆಗೆ ಬೆಂಗಳೂರು ಚಿಕ್ಕಬಳ್ಳಾಪುರ ಮುಖ್ಯ ರಸ್ತೆ ಜಲಾವೃತವಾಗಿದೆ. ರಸ್ತೆ ಹಿಂಭಾಗದಲ್ಲಿರುವ ಕೆರೆಯ ನೀರು ರಸ್ತೆಗೆ ಬಂದಿದ್ದು ರಸ್ತೆಯಲ್ಲಿರುವ ಹಲವಾರು ವಾಹನಗಳು ಪೆಟ್ರೋಲ್ ಬಂಕ್ ಅಂಗಡಿಗಳು ಶೋರೂಮ್ ಸೇರಿದಂತೆ ಅನೇಕ ಮಳಿಗೆಗಳು ಜಲಾವೃತವಾಗಿದೆ. ಇದನ್ನೂ ಓದಿ: 2nd PUC:ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ
ಇಂದು ಬೆಳಗ್ಗೆಯಿಂದಲೇ ನೀರಿನ ಹರಿವು ಜಾಸ್ತಿಯಾಗಿದ್ದು, ಅಪಾರ್ಟ್ಮೆಂಟ್ ಸುತ್ತಮುತ್ತ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.
ಅಪಾರ್ಟ್ಮೆಂಟ್ ಹತ್ತಿರವಿರುವ ರಾಜ ಕಾಲುವೆಯ ಕೊಡಿ ಹೊಡೆದು, ಕೆರೆಯ ನೀರು ಸಮೀಪವಿರುವ ಅಪಾರ್ಟ್ಮೆಂಟ್ ಗಳಿಗೆ ನುಗ್ಗಿದೆ.

ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಗಳಿಗೆ ಎರಡನೇ ಬಾರಿ ಮಳೆಯ ನೀರು ನುಗ್ಗಿದ್ದು ಅಪಾರ್ಟ್ಮೆಂಟ್ನ 8 ಬ್ಲಾಕ್ ಗಳಿಗೆ ನೀರು ನುಗ್ಗಿದೆ. ಅಪಾರ್ಟ್ಮೆಂಟ್ ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದು ನೀರಿನ ಜೊತೆಯಲ್ಲಿ ಹಾವು ಚೇಳುಗಳು ಮನೆಗೆ ನುಗ್ಗಿದೆ. ಇದನ್ನೂ ಓದಿ: Cm Bommai Meeting:ಅಕಾಲಿಕ ಮಳೆಯ ಕುರಿತು ಅಧಿಕಾರಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ
ನಗರದ ಕೋಗಿಲು ಕ್ರಾಸ್ ಬಳಿ ಮಳೆಯಿಂದ ಜಲಾವೃತವಾಗಿದ್ದು 3 ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ಏರ್ಪೋರ್ಟ್ ಯಲಹಂಕ ರಸ್ತೆ ಜಾಮ್ ಆಗಿದೆ. ದ್ವಿಚಕ್ರ ವಾಹನ ಸೇರಿದಂತೆ ಕಾರುಗಳು ಹಲವು ವಾಹನಗಳಿಗೆ ಹಾನಿಯಾಗಿದೆ.
ಬೆಂಗಳೂರಿನ ಅಲ್ಲಾಳಸಂದ್ರದ ಕೆಲವು ಪ್ರದೇಶಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತು ನೀರುಪಾಲಾಗಿವೆ. ಅಕ್ಕಿ, ಬೇಳೆ, ಟಿವಿ, ಫ್ರಿಡ್ಜ್ ಸೇರಿ ಹಲವು ವಸ್ತುಗಳು ನೀರುಪಾಲಾಗಿವೆ. ಮಳೆ ಅವಾಂತರದಿಂದ ನಿವಾಸಿಗಳು ರಾತ್ರಿಯಿಡಿ ನಡುರಸ್ತೆಯಲ್ಲಿ ಕಳೆದಿದ್ದಾರೆ.