ಕೋಲಾರ: ಬಿಟ್ಟೂ ಬಿಡದೇ ಸುರಿಯುತ್ತಿರುವ ರೌದ್ರ ಮಳೆಯ ನಡುವೆ ಕೋಲಾರ ಎಪಿಎಂಸಿಯಲ್ಲಿ ಟೊಮ್ಯಾಟೊ ಆವಕ ತೀವ್ರ ಕುಸಿತ ಕಂಡಿದ್ದು, ಪರಿಣಾಮ ಟೊಮ್ಯಾಟೊ ದರ ಗಗನಕ್ಕೇರಿದೆ.
ಒಂದು ತಿಂಗಳಿಂದ ತೇವಾಂಶ ಹೆಚ್ಚಾಗಿ ಟೊಮ್ಯಾಟೊ ಇನ್ನಿತರ ತರಕಾರಿಗಳಿಗೆ ರೋಗಬಾಧೆ ಹೆಚ್ಚಾಗಿ ಬೆಳೆ ನಷ್ಟವಾಗಿದೆ.
ಇಳುವರಿಯಕಲ್ಲೂ ತೀವ್ರ ಕುಸಿತ ಕಂಡುಬಂದಿದೆ. ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಳೆ ಹಾನಿಗೀಡಾಗಿದೆ. ಜಿಟಿಜಿಟಿ ಮಳೆಗೆ ಇಳುವರಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೋಲಾರ ಎಪಿಎಂಸಿಗೆ ತರಕಾರಿಗಳ ಆವಕ ತೀರಾ ಕಡಿಮೆ ಆಗಿದೆ.
ಇದನ್ನೂ ಓದಿ: karnataka rain- ರಾಜ್ಯದಲ್ಲಿ ಮಳೆಯ ರುದ್ರನರ್ತನ: ಇನ್ನೂ ಎಷ್ಟು ದಿನ ಈ ಮಳೆಯ ಅಬ್ಬರ?
ಶುಕ್ರವಾರ ಕೋಲಾರದಲ್ಲಿ ಗುಣಮಟ್ಟದ ಟೊಮ್ಯಾಟೊ 15 ಕೆಜಿ ಬಾಕ್ಸ್ ಒಂದರ ಬೆಲೆ 1500 ರೂಪಾಯಿ ದಾಟಿದ್ದರೆ ಕೇವಲ ಒಂದೇ ಒಂದು ಲಾಟ್ ಪ್ರತಿ ಬಾಕ್ಸ್ಗೆ 2000 ರೂಪಾಯಿಗೆ ಹರಾಜಾಗಿ ದಾಖಲೆ ಬರೆದಿದೆ. ಇನ್ನು ಚಿಲ್ಲರೆ ಅಂಗಡಿಗಳಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 140 ರೂಪಾಯಿ ದಾಟಿದೆ.
10,000-12,000 ಕ್ವಿಂಟಾಲ್ ಟೊಮ್ಯಾಟೊ ಆವಕವಾಗುತ್ತಿದ್ದ ಮಾರುಕಟ್ಟೆಯಲ್ಲಿ ಶುಕ್ರವಾರ ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಅಂದರೆ 4664 ಕ್ವಿಂಟಾಲ್ನಷ್ಟು ಆವಕವಾಗಿತ್ತು. ಗುಣಮಟ್ಟದ ಟೊಮ್ಯಾಟೊ ಬಾಕ್ಸ್ 1,500 ರೂಪಾಯಿಗೆ ಮೇಲ್ಪಟ್ಟು ಹರಾಜಾದರೆ, ಕೆಆರ್ಎಸ್ ಮಂಡಿಯಲ್ಲಿ 20 ಬಾಕ್ಸ್ ಇದ್ದ ಒಂದು ಲಾಟ್ 2000 ರೂ.ಗೆ ಹರಾಜು ಕಂಡಿದೆ.