ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಈ ಬಗ್ಗೆ ರೈತ ನಾಯಕ ರಾಕೇಶ್ ಟಿಕಾಯತ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Farm bill- ದೇಶದ ಅನ್ನದಾತ ಹಾಗೂ ಕಾಂಗ್ರೆಸ್ ಹೋರಾಟಕ್ಕೆ ಸಿಕ್ಕ ಗೆಲುವು: ಡಿಕೆಶಿ
ಈ ಬಗ್ಗೆ ಮಾತನಾಡಿದ ಅವರು “ಕೇವಲ ಪ್ರಧಾನಿಗಳ ಘೋಷಣೆಯಿಂದ ನಮಗೆ ನಂಬಿಕೆ ಬರುವುದಿಲ್ಲ. ನಾವು ಈಗ ಹೋರಾಟ ಹಿಂಪಡೆಯುವುದಿಲ್ಲ. ಅಧಿಕೃತವಾಗಿ ಕೃಷಿ ಕಾಯ್ದೆ ರದ್ದಾಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ” ಎಂದಿದ್ದಾರೆ.

“ಸಂಸತ್ ನಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರೆಯಲಿದೆ. ಅಧಿಕೃತವಾಗಿ ೩ ಕೃಷಿ ಕಾಯ್ದೆಗಳು ರದ್ದಾಗುವವರೆಗೂ ಪ್ರತಿಭಟನೆ ಮುಂದುವರೆಯಲಿದೆ. ಎಮ್ ಎಸ್ ಪಿ ಕಾಯ್ದೆ ರದ್ದಾಗಿದೆ ಎಂದು ಪಿಎಂ ಹೇಳಿಲ್ಲ. ಹಾಗಾಗಿ ಎಲ್ಲಾ ಸಮಸ್ಯೆ ಪರಿಹಾರವಾಗುವವರೆಗೂ ಈ ಹೋರಾಟ ನಡೆಯಲಿದೆ” ಎಂದು ರೈತ ನಾಯಕ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಘೋಷಣೆ ನೀಡುವ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳಿಗೆ ಹೋರಾಟ ಹಿಂಪಡೆಯುವಂತೆ ಮನವಿ ಮಾಡಿದ್ದರು.