ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಈ ಬಗ್ಗೆ ದೇಶದಾದ್ಯಂತ ಪರ ವಿರೋದ ಚರ್ಚೆಗಳು ಇನ್ನೂ ನಡೆಯುತ್ತಲೇ ಇವೆ. ಹಲವಾರು ರೈತ ಸಂಘಟನೆಗಳೂ ಪ್ರತಿಪಕ್ಷ ನಾಯಕರೂ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದೇ ರೀತಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷರಾಗಿರುವ ಶಾಂತಲಾ ದಾಮ್ಲೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Farm bill: ಕೃಷಿ ಬಿಲ್ ವಾಪಸಾತಿಗೆ ಬಾಲಿವುಡ್ ಸೆಲೆಬ್ರಿಟೀಸ್ ಹೇಳಿದ್ದೇನು?
ಕೃಷಿ ಕಾನೂನು ವಾಪಸಾತಿ ಬಗ್ಗೆ ಮಾತನಾಡಿದ ಅವರು “ಕೊನೆಗೂ, 2020ರ ಮೂರೂ ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆಯುತ್ತಿದ್ದಾರೆ. ಲಕ್ಷಾಂತರ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಕೊರೆಯುವ ಚಳಿ, ಮಳೆ, ಬಿಸಿಲುಗಳಿಗೆ ಹೆದರದೇ ನಡೆಸಿದ ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದೆ” ಎಂದಿದ್ದಾರೆ.
ಮುಂದುವರೆದು “ಈ ಹೋರಾಟದಲ್ಲಿ ಆಗಿಹೋದ 700 ಜನರ ಪ್ರಾಣಬಲಿ, ಅನೇಕ ಕೊಲೆಗಳು, ಹೋರಾಟಗಾರರನ್ನು ದೇಶದ್ರೋಹಿಗಳೆಂದು ಜರಿದು ನೀರು, ಟಾಯ್ಲೆಟ್ ಗಳ ಸೌಲಭ್ಯಗಳನ್ನೂ ಕೊಡದೆ, ಪೊಲೀಸ್ ದೌರ್ಜನ್ಯ ಮಾಡಿಸಿದ ಕೆಲವು ರಾಜ್ಯ ಸರ್ಕಾರಗಳ ಕ್ರೂರ ವರ್ತನೆ, ಇವೆಲ್ಲ ಪಾಪಗಳಿಗೆ ಪ್ರಧಾನಮಂತ್ರಿಗಳೇ ನೇರ ಹೊಣೆ. ನರೇಂದ್ರಮೋದಿಯವರು ಕಾಯ್ದೆಗಳನ್ನು ಹಿಂಪಡೆಯುವುದರ ಜೊತೆಗೆ ರೈತರ, ದೇಶದ ಜನರ ಕ್ಷಮಾಪಣೆಯನ್ನೂ ಕೇಳಬೇಕು” ಎಂದು ಒತ್ತಾಯಿಸಿದರು.

ಅಲ್ಲದೇ “ನರೇಂದ್ರಮೋದಿಯವರೇ, ನಿಮಗೆ ಇತ್ತೀಚಿನ ಚುನಾವಣೆಗಳಲ್ಲಿ ನಿಮ್ಮ ಪಕ್ಷದ ಸೋಲು ಮತ್ತು ಮುಂಬರುವ 5 ರಾಜ್ಯಗಳ ಚುನಾವಣೆ ಹೊರತಾದ ನಿಜವಾದ ಕಾಳಜಿ ಇದ್ದಲ್ಲಿ ಮೂರು ಕಾಯ್ದೆಗಳನ್ನು ಸಂಸತ್ ಅಧಿವೇಶನಕ್ಕೆ ಕಾಯದೆ ಸುಗ್ರೀವಾಜ್ಞೆ ಮೂಲಕ ತಕ್ಷಣ ಹಿಂಪಡೆಯಿರಿ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮತ್ತು ಇನ್ನಿತರ ನಿಜಕ್ಕೂ ರೈತಪರವಾದ ಹೊಸ ಕಾಯ್ದೆಗಳನ್ನು ತುರ್ತಾಗಿ ತನ್ನಿ” ಎಂದು ಅವರು ಆಗ್ರಹಿಸಿದರು.