ದೆಹಲಿ: (ನ.18): Gurudwara: ಮುಸ್ಲೀಮರಿಗೆ ನಮಾಜ್ ಮಾಡಲು -ದೆಹಲಿ ಗಡಿಯಲ್ಲಿರುವ 5 ಸಿಖ್ ಗುರುದ್ವಾರಗಳ ಮೇಲ್ವಿಚಾರಣ ಸಮಿತಿಯು ತಮ್ಮ ಗುರುದ್ವಾರಗಳನ್ನು ಮುಸ್ಲಿಮರು ನಮಾಜ್ ಮಾಡಲು ಬಳಸಬಹುದು ಎಂದು ಅನುಮನಿ ನೀಡಿದೆ. ಗುರುಗ್ರಾಮ್ ಆಡಳಿತವು ಮುಸ್ಲಿಮರಿಗೆ ನಮಾಜ್ ಮಾಡಲು ಗೊತ್ತುಪಡಿಸಿದ 37 ಸ್ಥಳಗಳ ಪೈಕಿ 8 ರಲ್ಲಿ ಸ್ಥಳೀಯರ ವಿರೋಧದಿಂದ ಅನುಮತಿ ವಾಪಸ್ ಪಡೆದಿದೆ.
ನಮಾಜ್ ಮಾಡಲು ಅಡ್ಡಿ ಪಡಿಸಿದ್ದರು:
ಕೆಲವು ಹಿಂದುತ್ವವಾದಿ ಸಂಘಟನೆಗಳು ನಮಾಜ್ ಮಾಡಲು ಅಡ್ಡಿಪಡಿಸಿದ್ದವು. ಮುಸ್ಲಿಮರು ನಮಾಜ್ ಮಾಡುವ ಜಾಗದಲ್ಲಿಯೇ ಸಂಘಟನೆಗಳು ಗೋವರ್ಧನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಅಲ್ಲಿ ಹಿಂದೂ ವಿರೋಧಿಗಳಿಗೆ ಗುಂಡು ಹೊಡೆಯಿರಿ ಎಂದು ಘೋಷಣೆಗಳನ್ನು ಕೂಗಲಾಗಿತ್ತು.
ದೆಹಲಿ ಗಲಭೆಯ ಪ್ರಚೋದನಾಕಾರಿ ಭಾಷಣಕಾರರದ ಕಪಿಲ್ ಮಿಶ್ರಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮಾಜ್ ಮಾಡುವ ಜಾಗದಲ್ಲಿ ಸಗಣಿಗಳನ್ನು ತಂದು ಹಾಕಿ ನಮಾಜ್ ಮಾಡಲು ಅಡ್ಡಿಪಡಿಸಲಾಗಿತ್ತು. ಹಾಗಾಗಿ ಜಿಲ್ಲಾಡಳಿತ ಅಲ್ಲಿ ನಮಾಜ್ ಮಾಡಲು ಅನುಮತಿ ನಿರಾಕರಿಸಲಾಗಿತ್ತು.
ಗುರುಗ್ರಾಮ್ ಸಬ್ಜಿ ಮಂಡಿಯಲ್ಲಿರುವ ಶ್ರೀ ಗುರು ಸಿಂಗ್ ಸಭಾದ ಅಧ್ಯಕ್ಷರಾದ ಶೆರ್ದಿಲ್ ಸಿಂಗ್ ಸಿಧು ಮಾತನಾಡಿ, “ಗುರುದ್ವಾರವೆಂದರೆ ಗುರುವಿನ ಮನೆ ಎಂದರ್ಥ.ಇಲ್ಲಿ ಎಲ್ಲಾ ಸಮುದಾಯದ ಜನರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಲು ಆಹ್ವಾನವಿದೆ.
ಮುಸ್ಲಿಮರಿಗೆ ನಿಗಧಿಪಡಿಸಿದ ಪ್ರದೇಶಗಳಲ್ಲಿ ಪ್ರಾರ್ಥನೆ ಮಾಡಲು ಅಡ್ಡಿಯಾಗುತ್ತಿದ್ದಲ್ಲಿ ಅವರು ಗುರುದ್ವಾರಕ್ಕೆ ಬಂದು ಪ್ರಾರ್ಥನೆ ಸಲ್ಲಿಸಬಹುದು. ಎಲ್ಲರಿಗೂ ಗುರುದ್ವಾರದ ಬಾಗಿಲು ಸದಾ ತೆರೆದಿರುತ್ತವೆ” ಎಂದು ತಿಳಿಸಿದ್ದಾರೆ.

ನಮಾಜ್ ಮಾಡಲು ಗುರುದ್ವಾರ:
ಹರಿಯಾಣ-ದೆಹಲಿ ಗಡಿಯಲ್ಲಿರುವ 5 ಸಿಖ್ ಗುರುದ್ವಾರಗಳ ಮೇಲ್ವಿಚಾರಣ ಸಮಿತಿಯು ತಮ್ಮ ಗುರುದ್ವಾರಗಳನ್ನು ಮುಸ್ಲಿಮರು ನಮಾಜ್ ಮಾಡಲು ಬಳಸಬಹುದು ಎಂದು ಆಹ್ವಾನ ನೀಡಿದೆ.
ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸುವ ಆಹ್ವಾನವನ್ನು ಜಮಾತ್ ಉಲಾಮದ ಅಧ್ಯಕ್ಷ ಮುಫ್ತಿ ಮೊಹಮ್ಮದ್ ಸಲೀಂ ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ.
ಸೆಕ್ಟರ್ 39ರ ಸರ್ದಾರ್ ಬಜಾರ್‌ನಿಂದ ಆರಂಭವಾಗಿ ಸೆಕ್ಟರ್ 46ರ ಮಾಡೆಲ್ ಟೌನ್‌ವರೆಗೂ 5 ಗುರುದ್ವಾರಗಳಿವೆ. ಸುಮಾರು 2 ಸಾವಿರ ಜನರ ಸಾಮರ್ಥ್ಯ ಹೊಂದಿದೆ.
ಕೋವಿಡ್ ಹಿನ್ನಲೆಯಲ್ಲಿ ಸಣ್ಣ ಸಣ್ಣ ಗುಂಪುಗಳಲ್ಲಿ ಜನರು ಬಂದು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರೆ ಒಳ್ಳೆಯದು. ಅದಕ್ಕೆ ಅಧಿಕಾರಗಳ ಅನುಮತಿ ಬೇಕಾದರೆ ಅದನ್ನು ಕೂಡ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಗುರುದ್ವಾರದ ಅಧಿಕಾರಗಳನ್ನು ಭೇಟಿಯಾದ ಅವರು ಪ್ರಾರ್ಥನೆ ಮಾಡುವುದಾಗಿ ತಿಳಿಸಿ ಅವಕಾಶಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ ಹೆಜ್ಜೆಯಾಗಿದ್ದು, ದೀರ್ಘಕಾಲೀನವಾಗಿ ಸಮುದಾಯಗಳ ನಡುವೆ ಸೇತುವೆಯಾಗುತ್ತದೆ ಎಂದು ತಿಳಿಸಿದ್ದಾರೆ.
ನಮಾಜ್ ಗಾಗಿ ಅಂಗಡಿ ಬಿಟ್ಟುಕೊಟ್ಟ ಅಕ್ಷಯ್:
ಕಿರಾಣಿ ಅಂಗಡಿ ನಡೆಸುವ ಅಕ್ಷಯ್ ಯಾದವ್ ಎಂಬುವವರು, ನಮಾಜ್‌ಗಾಗಿ ತಮ್ಮ ಅಂಗಡಿ ಸ್ಥಳವನ್ನು ಬಿಟ್ಟುಕೊಡುವುದಾಗಿ ಘೋಷಿಸಿದ್ದಾರೆ. ಮುಸ್ಲಿಮರು ಬಂದು ಪ್ರಾರ್ಥನೆ ಸಲ್ಲಿಸಬಹುದು ಎಂದು ಆಹ್ವಾನ ನೀಡಿದ್ದಾರೆ. ಒಂದು ಬಾರಿಗೆ 15 ಜನ ನಮಾಜ್ ಮಾಡಬಹುದು ಎಂದಿದ್ದಾರೆ.
ಈ ಆಹ್ವಾನಗಳನ್ನು ಗುರುಗ್ರಾಮ್ ಮುಸ್ಲಿಂ ಕೌನ್ಸಿಲ್‌ನ ಸ್ಥಾಪಕರಾದ ಅಲ್ತಾಫ್ ಅಹ್ಮದ್ ಪ್ರಶಂಸಿದ್ದಾರೆ. “ಕಳೆದ ಎರಡು ತಿಂಗಳಿನಿಂದ ಗುರ್ಗಾಂವ್‌ನಲ್ಲಿ ದ್ವೇಷ ಮತ್ತು ಕೋಮು ಸೌಹಾರ್ದತೆಯನ್ನು ಕದಡುತ್ತಿರುವ ವಿಭಜಕ ಶಕ್ತಿಗಳನ್ನು ಸೋಲಿಸಲು ಬಹು ಧರ್ಮಗಳ ಜನರು ಮುಂದೆ ಬಂದಿರುವುದು ಸಹೋದರತ್ವದ ನಿಜವಾದ ಉದಾಹರಣೆಯಾಗಿದೆ” ಎಂದಿದ್ದಾರೆ.