Premam Poojyam: (ನ.18): ಲವ್ಲೀ ಸ್ಟಾರ್ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯಂ’ ಸಿನಿಮಾದ ಅವಧಿಯನ್ನು 11 ನಿಮಿಷ ಕಡಿತಗೊಳಿಸಲಾಗಿದೆ. ಚಿತ್ರದ ಅವಧಿ ಕಡಿತ ಮಾಡಿರುವ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.
ಸಿನಿಮಾದ ಅವಧಿ ಮಾತ್ರ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತಂತೆ ಭಾವಿಸಿದ್ದು, 173 ನಿಮಿಷಗಳಲ್ಲಿ ಒಟ್ಟು 12 ಹಾಡುಗಳಿವೆ., ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡರೂ ಹಲವು ಪ್ರೇಕ್ಷಕರು ಚಿತ್ರದ ಅವಧಿ ಮತ್ತು ಕೆಲ ದೃಶ್ಯಗಳನ್ನು ವಿನಾಕಾರಣ ಎಳೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆಗೆ ಸ್ಪಂದಿಸಿರುವ ಚಿತ್ರತಂಡ, ಚಿತ್ರದ ಸಮಯಕ್ಕೆ ಕತ್ತರಿ ಹಾಕಿದ್ದು, ಸಿನಿಮಾದ ಎರಡು- ಮೂರು ಹಾಡುಗಳನ್ನೂ ಕಟ್ ಮಾಡಿದೆ.

ಅವಧಿ ಕಟ್ ಮಾಡಿದ್ದ ಸಿನಿಮಾ ಪ್ರದರ್ಶನ:
ನ.12ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅವಧಿ ಕಡಿತ ಮಾಡಿದ ಚಿತ್ರವನ್ನು ಮತ್ತೆ ಸೆನ್ಸಾರ್‌ಗೆ ಕಳುಹಿಸಲಾಗಿದ್ದು, ಶುಕ್ರವಾರ ಅಥವಾ ಶನಿವಾರದಿಂದ ಚಿತ್ರಮಂದಿರಗಳಲ್ಲಿ ಅವಧಿ ಕಡಿತ ಆಗಿರುವ ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.
ಪ್ರೇಮ್ ಅವರ 25ನೆಯ ಸಿನಿಮಾ ಆಗಿರುವ ‘ಪ್ರೇಮಂ ಪೂಜ್ಯಂ’ ಸಿನಿಮಾವನ್ನು ರಾಘವೇಂದ್ರ ಬಿಎಸ್ ನಿರ್ದೇಶನ ಮಾಡಿದ್ದಾರೆ. ಸಂಗೀತವನ್ನೂ ಅವರೇ ನೀಡಿದ್ದಾರೆ. ಚಿತ್ರದಲ್ಲಿ ಬೃಂದಾ ಆಚಾರ್ಯ, ಐಂದ್ರಿತಾ ರೇ ನಾಯಕಿಯರಾಗಿ ನಟಿಸಿದ್ದಾರೆ. ಅವಿನಾಶ್, ಮಾಸ್ಟರ್ ಆನಂದ್, ಸಾಧು ಕೋಕಿಲ, ಮಾಳವಿಕ ಅವಿನಾಶ್, ಟಿ.ಎಸ್.ನಾಗಾಭರಣ ಸೇರಿದಂತೆ ಇನ್ನೂ ಹಲವರು ತಾರಾಬಳಗದಲ್ಲಿದ್ದಾರೆ.
‘ಪ್ರೇಮಂ ಪೂಜ್ಯಂ’ ಚಿತ್ರಕ್ಕೆ ಹರಿಹರನ್ , ಮೋಹಿತ್ ಚೌಹಾಣ್, ವಿಜಯ್ ಪ್ರಕಾಶ್, ಸೋನು ನಿಗಮ್, ಅರ್ಮಾನ್ ಮಲಿಕ್ ಸೇರಿದಂತೆ ಹಲವು ಗಾಯಕರು ಹಾಡಿದ್ದಾರೆ.
ಚಿತ್ರಕ್ಕೆ ರಕ್ಷಿತ್ ಕೆಡಂಬಾಡಿ, ಡಾ.ರಾಜ್ ಕುಮಾರ್ ಜಾನಕಿ ರಾಮನ್, ಡಾ. ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ಅವರು ಬಂಡವಾಳ ಹಾಕಿದ್ದಾರೆ. ನವೀನ್ ಕುಮಾರ್ ಅವರ ಛಾಯಾಗ್ರಹಣ, ಹರೀಶ್ ಕೊಮ್ಮೆ ಅವರ ಸಂಕಲನ ಇದೆ.