ವಿಜಯವಾಡ: ಸಮುದ್ರ ಎಂದರೆ ಅದು ಬಹಳಷ್ಟು ನಿಗೂಡತೆಯನ್ನು ಹೊತ್ತ ತಾಣ. ಹಲವಾರು ರಹಸ್ಯಗಳನ್ನು ತನ್ನ ಒಡಲಲ್ಲಿ ಸಾಗರ ಹೊತ್ತಿರುತ್ತದೆ. ನಾವು ಎಷ್ಟೋ ಸಾಗರತೀರಗಳಲ್ಲಿ ವಿಚಿತ್ರ ವಸ್ತುಗಳು ಸಿಕ್ಕಿರುವುದನ್ನು ಕಂಡಿದ್ದೇವೆ. ಅಪರೂಪದ ಜೀವಿಗಳೂ ಸಹ ಹಲವು ಬಾರಿ ದಡದಲ್ಲಿ ಕಾಣಸಿಗುತ್ತವೆ. ಆದರೆ ಈ ಸಮುದ್ರ ತೀರರದಲ್ಲಿ ಸಿಗುತ್ತಿರುವುದು ಬೆಲೆ ಬಾಳುವ ಚಿನ್ನಾಭರಣಗಳು.
ಹೌದು, ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಾಡ ಕರಾವಳಿಯಲ್ಲಿ ಸ್ಥಳೀಯ ಜನರ ಚಿನ್ನದ ಬೇಟೆ ಭಾರೀ ಜೋರಾಗಿ ಸಾಗಿದೆ. ಮೀನುಗಾರರು ಕೂಡ ತಮ್ಮ ದಿನನಿತ್ಯದ ಕಾಯಕವನ್ನು ಬದಿಗಿಟ್ಟು ಚಿನ್ನದ ಬೇಟೆಯಲ್ಲಿ ಮುಳುಗಿದ್ದಾರೆ.
ಇದನ್ನೂ ಓದಿ: ಅವಳಿ ಮಕ್ಕಳ ಪೋಷಕರಾದ ಪ್ರೀತಿ ಜಿಂಟಾ ಮತ್ತು ಜೀನ್ ಗುಡ್ ನಫ್
ಬಾಲಕಿಯರು ಕೂಡ ಶಾಲೆಗೆ ಚಕ್ಕರ್ ಹೊಡೆದು ಚಿನ್ನದ ಹುಡುಕಾಟದಲ್ಲಿ ತೊಡಗಿದ್ದಾರೆ.
ಕೆಲವರು ಚಿನ್ನದ ಕಣಗಳನ್ನು ಪತ್ತೆಹಚ್ಚಿದ್ದರೆ, ಇನ್ನು ಕೆಲವರಿಗೆ ರಿಂಗ್ಸ್ ಮತ್ತು ಚಿನ್ನದ ಹೊಳ್ಳೆಗಳು ಸಿಗುತ್ತಿವೆ, ಇದೇ ಕರಾವಳಿಯಲ್ಲಿ ಈ ಹಿಂದೆ ಬೆಳ್ಳಿಯ ನಾಣ್ಯಗಳು ಪತ್ತೆಯಾಗಿದ್ದವು.

ಈ ಬಾರಿ ಚಿನ್ನ ಕಾಣಿಸಿಕೊಂಡಿರುವುದರಿಂದ ಜನರ ದಂಡೇ ಕರಾವಳಿ ಪ್ರದೇಶದತ್ತ ಹರಿದು ಬರುತ್ತಿದೆ. ಇತಿಹಾಸದಲ್ಲಿ ರಾಜರ ಕೋಟೆಗಳು ಮತ್ತು ಅನೇಕ ದೇವಾಲಯಗಳು ಸಮುದ್ರದ ಗರ್ಭದಲ್ಲಿ ವಿಲೀನಗೊಂಡಿದ್ದು, ಇದಕ್ಕೆ ಸಂಬಂಧಿಸಿದ ವಸ್ತುಗಳು ಚಂಡಮಾರುತಗಳಿಗೆ ಸಿಲುಕಿ ಹೊರ ಜಗತ್ತಿಗೆ ತೇಲಿ ಬರುತ್ತಿವೆ ಎಂದು ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷವೂ ಕೂಡ ಮಳೆಗಾಲದ ನಂತರ ಸಮುದ್ರದಲ್ಲಿ ಒತ್ತಡ ಹೆಚ್ಚಾದಾಗ ಬೆಳ್ಳಿ ಮತ್ತಿತರ ಬೆಲಬಾಳುವ ವಸ್ತುಗಳು ದಡಕ್ಕಪ್ಪಳಿಸಿದ್ದವು.