ಬೆಂಗಳೂರು (ನ.17): ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಟಿಸಿರುವ ಬನಾರಸ್ ಸಿನಿಮಾದ ಪೊಸ್ಟರ್ ಬಿಡುಗಡೆಯಾಗಿದೆ . ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಬನಾರಸ್ ಚಿತ್ರತಂಡ ಪೋಸ್ಟರ್ ಲಾಂಚ್ ಇಂದು ಮಾಡಿದೆ.
ಪುನೀತ್ ರಾಜ್‌ಕುಮಾರ್ ಸಮಾಧಿಗೆ ನಮನ ಸಲ್ಲಿಸಿ ಬನಾರಸ್ ಸಿನಿಮಾ ತಂಡ ಸುದ್ದಿಗೋಷ್ಠಿ ನೆಡೆಸಿ, ಕನ್ನಡದ ಬನಾರಸ್ ಚಿತ್ರಕ್ಕೂ ಅಪ್ಪು ಸಹಕಾರ ನೀಡಲು ಮುಂದಾಗಿದ್ದರು.
ಬನಾರಸ್ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಪುನೀತ್ ರಾಜಕುಮಾರ್ ಕೈಯಲ್ಲಿ ರಿಲೀಸ್ ಮಾಡಿಸಬೇಕು ಎನ್ನುವುದು ಚಿತ್ರ ತಂಡದ ಮಹತ್ತರ ಆಸೆಯಾಗಿತ್ತು. ಅದು ಕನಸಾಗಿಯೇ ಉಳಿಯಿತು. ಆದರೆ ಅಪ್ಪು ಆಗಲಿಕೆ ಕಾರಣದಿಂದ ಇದು ಸಾಧ್ಯವಾಗಿಲ್ಲ. ಇದೀಗ ಅಪ್ಪು ಅಗಲಿಕೆಯ ನಂತರ ಅಪ್ಪು ಸಮಾಧಿಗೆ ಹೂವಿನ ಹಾರ ಹಾಕಿ, ಪೋಟೋಗೆ ಪೂಜೆ ಸಲ್ಲಿಸಿ ಸಿನಿಮಾದ ಪೋಸ್ಟರ್ನ ಲಾಂಚ್ ಮಾಡಿದ್ದಾರೆ.
ಹೊಸ ನಟನ ಪಾದಾರ್ಪಣೆ:
ಜಮೀರ್ ಪುತ್ರ ಝೈದ್ ಖಾನ್ ಬನಾರಸ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದು, ಚಿತ್ರದ ನಾಯಕಿಯಾಗಿ ಸೋನಲ್ ಮಂಥಾರಿಯಾ ನಟಿಸಿದ್ದಾರೆ. ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದಾರೆ. ಪೊಸ್ಟರ್ ಲಾಂಚ್ನಲ್ಲಿ ನಿರ್ದೇಶಕ ಜಯತೀರ್ತ, ನಿರ್ದೇಶಕ ಎ ಹರ್ಷ, ಹಾಸ್ಯ ನಟ ಸುಜಯ್ ಶಾಸ್ತ್ರಿ ಭಾಗಿಯಾಗಿದ್ದರು.


ಚಿತ್ರೀಕರಣ ಬಹುಪಾಲು ಕಾಶಿಯಲ್ಲಿ ನಡೆದಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ಸಿನೆಮಾ ತೆರೆಗೆ ಬರಲಿದೆ. ಎಲ್ಲ ಭಾಷೆಯ ಆಡಿಯೋ ಹಕ್ಕುಗಳು ಸೇಲ್ ಆಗಿವೆ. ‘ಬನಾರಸ್’ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಬೆಲ್ ಬಾಟಂ’ ಸಿನಿಮಾ ಮೂಲಕ ದೊಡ್ಡ ಗೆಲುವು ಪಡೆದ ನಿರ್ದೇಶಕ ಜಯತೀರ್ಥ ಅವರು ‘ಬನಾರಸ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ರತಿಷ್ಠಿತ ಲಹರಿ ಮ್ಯೂಸಿಕ್, ಟಿ-ಸಿರೀಸ್ ಸಂಸ್ಥೆಗಳು ಜಂಟಿಯಾಗಿ ‘ಬನಾರಸ್’ ಚಿತ್ರದ ಆಡಿಯೋ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಖರೀದಿ ಮಾಡಿವೆ. ಇದು ಝೈದ್ ಖಾನ್ ಪಾಲಿಗೆ ಹೆಮ್ಮ ತರುವಂಥ ವಿಚಾರವಾಗಿದೆ.
ನಟ ಝೈದ್ ಖಾನ್ ಪೋಸ್ಟರ್ ಬಿಡುಗಡೆ ಕುರಿತು ಅಪ್ಪು ಅವರ ಜೊತೆ ಮಾತುಕತೆ ನೆಡೆಸಿದ್ದರು. ಸಿನಿಮಾದ ಪೋಸ್ಟರ್ ರಿಲೀಸ್ ಮಾಡುವ ಸಲುವಾಗಿ ಅಪ್ಪು ಜೊತೆಗೆ ಝೈದ್ ಖಾನ್ ಮಾತನಾಡಿ ಸಮಯವನ್ನು ತೆಗೆದು ಕೊಂಡಿದ್ದರು. ಚಿತ್ರ ತಂಡವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೋಸ್ಟರ್ ರಿಲೀಸ್ ಮಾಡಿ ಕೊಡುವುದಾಗಿ ಪುನೀತ್ ಅವರು ಒಪ್ಪಿಕೊಂಡಿದ್ದರು.
ಹಾಗಾಗಿ ಪುನೀತ್ ರಾಜ್‌ಕುಮಾರ್ ಅವರಿಂದ ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿ, ಅದನ್ನ ನವೆಂಬರ್ 1ರಂದು ಬಿಡುಗಡೆ ಮಾಡುವ ಯೋಜನೆ ಚಿತ್ರ ತಂಡ ಹಾಕಿಕೊಂಡಿತ್ತು.
ಚಿತ್ರವನ್ನು ಪುನೀತ್ ರಾಜ್ ಕುಮಾರ್ ಅವರು ನೋಡಲು ಬಯಸಿದ್ದರು, ನಿಮ್ಮ ಸಿನಿಮಾ ನಾನು ನೋಡಲೇಬೇಕು ಎಂದಿದ್ದರಂತೆ. ಅಪ್ಪು ಆಡಿದ ಮಾತುಗಳು ಚಿತ್ರ ತಂಡಕ್ಕೆ ಭರವಸೆ ನೀಡಿತ್ತು. ನಿಮ್ಮ ಜೊತೆಗೆ ಇರುತ್ತೇನೆ ಎಂದಿದ್ದರು ಈ ವಿಚಾರವನ್ನು ನೆನೆಯುತ್ತಾ ನಿರ್ದೇಶಕ ಜಯತೀರ್ಥ ಭಾವುಕರಾದರು