Snehitha Movie Release: (ನ.17): ಸಂಗೀತ್ ಸಾಗರ್ ನಿರ್ದೇಶನದ ಸ್ನೇಹಿತ ಚಿತ್ರ ನವೆಂಬರ್ 19ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ವಿಡಿಯೋ ಸಾಂಗ್ ಯೂಟ್ಯೂಬ್ ನಲ್ಲಿ ಈಗಾಗಲೇ ಬಿಡುಗಡೆ ಆಗಿದ್ದು ಸಿನಿಪ್ರಿಯರನ್ನು ತನ್ನ ಕಡೆಗೆ ಸೆಳೆಯುತ್ತಿದೆ.
ಯೂ ಟ್ಯೂಬ್ ನಲ್ಲಿ ಬಿಡುಗಡೆ ಆಗಿರುವ “ಪ್ರೀತಿ ಒಂಥರ” ಹಾಡು ಸದ್ದು ಮಾಡುತ್ತಿದೆ. ಒಂದು ದಿನದ ಒಳಗೆ ಈ ಹಾಡನ್ನು 2 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿ ಮೆಚ್ಚುಗೆಯ ಮಾತನಾಡಿದ್ದಾರೆ. ಆಕಾಶ್ ಆಡಿಯೋ ಕಂಪನಿ ಈ ಸಿನಿಮಾದ ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದೆ.
ಈ ಚಿತ್ರದ ಇನ್ನೊಂದು ವಿಡಿಯೋ ಸಾಂಗ್ ” ಮಿಂಚಾದೆ ನೀನು ” 5 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈಶ್ವರ್ ಪ್ರಕಾಶ್, ಅನುಪಮ ಈ ಹಾಡನ್ನು ಹಾಡಿದ್ದಾರೆ.
ಸಂಗೀತ್ ಸಾಗರ್ ನಿರ್ದೇಶನದ ಸ್ನೇಹಿತ ಚಿತ್ರದಲ್ಲಿ ಧನುಷ್ ನಾಯಕ ಆಗಿ ನಟನೆ ಮಾಡಿದ್ದಾರೆ. ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಗೀತವನ್ನು ಸಂಗೀತ್ ಸಾಗರ್ ಅವರೇ ನೀಡಿದ್ದಾರೆ. ನಾಯಕ ಧನುಷ್, ‘ಸ್ನೇಹಿತ ಚಿತ್ರದಲ್ಲಿ ನಾನು ಹೀರೋ ಆಗಿದ್ದೇನೆ ಎನ್ನುವುದಕ್ಕಿಂತ ಎಂ ಎಸ್ ಉಮೇಶ್ ಅವರತಂಹ ಹಿರಿಯ ನಟರ ಜತೆ ಅಭಿನಯಿಸಿದ್ದೇನೆ ಎಂದು ಹೇಳುವುದಕ್ಕೆ ಖುಷಿ ಆಗುತ್ತದೆ’ ಎಂದರು. ಸುಲಕ್ಷ ಕೈರಾ ಅವರಿಗೆ ಇದು ಮೊದಲ ಸಿನಿಮಾ.

ಸುಲಕ್ಷಾಅವರ ಮೊದಲ ಚಿತ್ರ:
ಚಿತ್ರದಲ್ಲಿ ಸುಲಕ್ಷಾ ಅವರು ನಾಯಕಿ ಆಗಿ ನಟಿಸಿದ್ದಾರೆ. ಹಿರಿಯ ನಟ ಉಮೇಶ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ನೇಹದ ಮಹತ್ವವನ್ನು ಸಾರುವ ಈ ಚಿತ್ರವನ್ನು ಆರ್ ಅಶೋಕ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದ ಬಿಡುಗಡೆಗೆ ಚಿತ್ರತಂಡ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
‘ಪ್ರೀತಿ ಹಾಗೂ ಸ್ನೇಹದ ಮಹತ್ವವನ್ನು ಹೇಳುವ ಸಿನಿಮಾ ಇದು. ನಿರ್ದೇಶನದ ಜತೆಗೆ ಸಂಗೀತವನ್ನೂ ನೀಡಿದ್ದೇನೆ. ಸಿನಿಮಾ ಮಾಡುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ಚಿತ್ರ ಸದ್ಯದಲ್ಲೇ ಚಿತ್ರಮಂದಿರಗಳಿಗೆ ಬರುತ್ತಿದೆ. ನೋಡಿ ಬೆಂಬಲಿಸಿ’ ಎಂದು ನಿರ್ದೇಶಕರು ಹೇಳಿದ್ದಾರೆ.
ನೆಹರು ಬ್ಯಾಂಡ್ ಸೆಟ್ ನಡೆಸುತ್ತಿದ್ದ ಅಶೋಕ್ ಆರ್ ಭರವಸೆ ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಶಿವರಾಮಣ್ಣ, ಮನದೀಪ್ ರಾಯ, ಆರ್ ಟಿ ರಮ, ಕಿಲ್ಲರ್ ವೆಂಕಟೇಶ್, ಪ್ರಣಯ ಮೂರ್ತಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಾ ಮಾ ಹರೀಶ್, ಬಾ ಮಾ ಗಿರೀಶ್, ಹಿರಿಯ ನಟ ಉಮೇಶ್, ವಿತರಕ ನರ್ಗಿಸ್ ಬಾಬು, ನಿರ್ದೇಶಕ ಬಿ ಆರ್ ಕೇಶವ, ನಿತ್ಯಾನಂದ ಪ್ರಭು ಅತಿಥಿಗಳಾಗಿ ಆಗಮಿಸಿದ್ದರು.