ಬೆಂಗಳೂರು( ನ.16): Puneeth Rajkumar: ಪುನೀತ್ ರಾಜಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಸಾವಿರಾರು ಅಭಿಮಾನಿಗಳು ನೇತ್ರದಾನದ ನೋಂದಣಿಗೆ ಮುಂದಾಗಿದ್ದಾರೆ. ನಟ ಪುನೀತ್ ರಾಜಕುಮಾರ್ ಅವರು ಹಾಕಿಕೊಟ್ಟ ದಾರಿಯಲ್ಲಿ ಅಭಿಮಾನಿಗಳು ನೇತ್ರದಾನಕ್ಕೆ ನೋಂದಾಯಿಸಿದ್ದಾರೆ.
ರಾಜ್ಯದಲ್ಲಿ ನೇತ್ರದಾನ ಪ್ರಮಾಣ ಹೆಚ್ಚಾಗಿದ್ದು. ಪುನೀತ್ ಅವರ ನೇತ್ರದಾನದ ಬಳಿಕ ಇದುವರೆಗೂ ಆರು ಸಾವಿರಕ್ಕೂ ಹೆಚ್ಚು ನೇತ್ರದಾನ ಮಾಡಿಸಲು ನೊಂದಾಯಿಸಿಕೊಂಡಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿಗೆ ಬಳಕೆ ಮಾಡಿ ದೃಷ್ಟಿ ನೀಡುವ ನಿಟ್ಟಿನಲ್ಲಿ ನಾರಾಯಣ ನೇತ್ರಾಲಯ ಹೆಜ್ಜೆ ಇಟ್ಟಿದೆ.

ಈಗಾಗಲೇ ಪುನೀತ್ ಅವರ ಎರಡು ಕಣ್ಣುಗಳನ್ನು ನಾಲ್ಕು ಮಂದಿಗೆ ಅಳವಡಿಸಲಾಗಿದೆ. ಉಳಿದ ಕಣ್ಣಿನ ಅಂಗಾಂಗಗಳನ್ನು ಹತ್ತಕ್ಕೂ ಹೆಚ್ಚು ಮಂದಿಗೆ ನೀಡಲು ಸಜ್ಜಾಗಿದೆ ಎಂದು ನಾರಾಯಣ ನೇತ್ರಾಲಯದ ತಜ್ಞ ವೈದ್ಯ ಡಾ.ಯತೀಶ್ ಅವರು ಹೇಳಿದ್ದಾರೆ.
ಅಪ್ಪು ಅವರ ಕಣ್ಣುಗಳನ್ನು, ಎಷ್ಟು ಮಂದಿಗೆ ಅಳವಡಿಸಬಹುದು ಎಂದು ನಿರ್ಧರಿಸಿಲ್ಲ. ಆದರೆ ಹತ್ತಕ್ಕೂ ಹೆಚ್ಚು ಮಂದಿಗೆ ದೃಷ್ಟಿ ನೀಡುವ ಯೋಜನೆಯಾಗಿದೆ. ಅಪ್ಪು ಕಣ್ಣಿನ ಕಪ್ಪು ಗುಡ್ಡೆಯನ್ನು ಈಗಾಗಲೇ ನಾಲ್ಕು ಮಂದಿಗೆ ಅಳವಡಿಸಲಾಗಿದೆ ಹಾಗೂ ಬಿಳಿಗುಡ್ಡೆಯ ಮಧ್ಯ ಇರುವ ಸೈಮಾ ಸೆಲ್ಸ್ ಅನ್ನು ಸಂರಕ್ಷಿಸಲಾಗಿದೆ. ಈ ಭಾಗವನ್ನು ದೃಷ್ಟಿ ಕಳೆದುಕೊಂಡವವರಿಗೆ ಅಳವಡಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ಒಬ್ಬರ ಕಣ್ಣಿನಿಂದ ಬಹಳಷ್ಟು ಮಂದಿಗೆ ಉಪಯೋಗವಾಗುತ್ತಿರುವುದು ದೇಶದಲ್ಲಿ ಮೊದಲು. ಕಣ್ಣಿನ ದೃಷ್ಟಿ ಅವಶ್ಯಕತೆ ಇರುವವರನ್ನು ಡಾ. ರಾಜಕುಮಾರ ಬ್ಯಾಂಕ್ ಮೂಲಕ ಪತ್ತೆ ಪತ್ತೆ ಹಚ್ಚಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.