ಚಾಮರಾಜನಗರ.ನ.16; IAS Officers Transfer: ಕರ್ನಾಟಕ ಸರ್ಕಾರ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿದೆ. ರಾಜ್ಯದ ಬೆಳಗಾವಿ, ಚಾಮರಾಜನಗರಕ್ಕೆ ಹೊಸ ಜಿಲ್ಲಾಧಿಕಾರಿಗಳ ನೇಮಕವಾಗಿದೆ. ವಿಧಾನ ಪರಿಷತ್ ಚುನಾವಣೆ ಹಿನ್ನಲೆ ರಾಜ್ಯದ ಈ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಚಾಮರಾಜನಗರಕ್ಕೆ ಚಾರುಲತಾ ಸೋಮಲ್:
ಕೊಡಗು ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆಗೊಂಡಿದ್ದ ಚಾರುಲತಾ ಸೋಮಲ್ ಚಾಮರಾಜನಗರದ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದ ಬಳಿಕ ಡಾ. ಎಂ. ಆರ್. ರವಿ ವರ್ಗಾವಣೆಗೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ವರ್ಗಾವಣೆಗೊಳಿಸಿತ್ತು. ಕೊಡಗು ನೂತನ ಜಿಲ್ಲಾಧಿಕಾರಿಯಾಗಿ ಡಾ. ಬಿ. ಸಿ. ಸತೀಶ ನೇಮಕ ಮಾಡಿತ್ತು. ಚಾರುಲತಾ ಸೋಮಲ್‌ಗೆ ಹುದ್ದೆಯನ್ನು ನೀಡಿರಲಿಲ್ಲ.
ಈಗ ಅವರನ್ನು ಚಾಮರಾಜನಗರ ಡಿಸಿಯಾಗಿ ನೇಮಕ ಮಾಡಲಾಗಿದೆ.
2020ರ ಜನವರಿ 30ರಂದು ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಡಾ. ಎಂ. ಆರ್. ರವಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ 2021ರ ಫೆಬ್ರವರಿಯಲ್ಲಿ ಸಕಾಲ ಯೋಜನೆ ಹೆಚ್ಚುವರಿ ನಿರ್ದೇಶಕರಾಗಿ ಅವರು ವರ್ಗಾವಣೆಗೊಂಡಿದ್ದರು. ಆದರೆ ಆದೇಶ ರದ್ದಾಗಿ ಜಿಲ್ಲಾಧಿಕಾರಿಯಾಗಿ ಮುಂದುವರೆದಿದ್ದರು.
ಚಾರುಲತಾ ಸೋಮಲ್ ಸೋಮವಾರ ರಾತ್ರಿ 7.15 ಸುಮಾರಿಗೆ ಚಾಮರಾಜನಗರಕ್ಕೆ ಆಗಮಿಸಿದ್ದು, ಡಾ. ಎಂ. ಆರ್. ರವಿ ಅಧಿಕಾರ ಹಸ್ತಾಂತರ ಮಾಡಿದರು.
2021ರ ಮೇ ತಿಂಗಳಿನಲ್ಲಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯ ಕಾರಣದಿಂದಾಗಿ 20ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಆಗಲೇ ಡಾ. ಎಂ. ಆರ್. ರವಿ ವರ್ಗಾವಣೆಗೊಂಡಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ ಅಧಿಕೃತ ಆದೇಶ ಪ್ರಕಟವಾಗಿರಲಿಲ್ಲ.
ಚಾರುಲತಾ ಸೋಮಲ್ ಪರಿಚಯ ಚಾರುಲತಾ ಸೋಮಲ್ ಮೂಲತಃ ಮಹಾರಾಷ್ಟ್ರ ಮೂಲದವರು. 2012ನೇ ಬ್ಯಾಚ್ ಐಎಎಸ್
ಅಧಿಕಾರಿ. ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ, ಕೊಡಗು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.
2017 ರಿಂದ 2018ರ ತನಕ ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯ
ನಿರ್ವಹಣೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿದ್ದಾಗ ಶಿವಮೊಗ್ಗ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆಗ ಕಾಳಜಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ಮುಂಜಾನೆ 3 ಗಂಟೆಯ ತನಕ ಚಾರುಲತಾ ಸೋಮಲ್ ಕಾರ್ಯ ನಿರ್ವಹಣೆ ಮಾಡಿ ಜನರ ಮೆಚ್ಚುಗೆ ಪಡೆದಿದ್ದರು
ಚಾರುಲತಾ ಸೋಮಲ್‌ರನ್ನು 2021ರ ಅಕ್ಟೋಬರ್‌ನಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು. ನಂತರ ಅದು ರದ್ದಾಗಿತ್ತು, ಬಳಿಕ ಅವರು ಸ್ಥಳ ನಿಯೋಜನೆಯ ನಿರೀಕ್ಷೆಯಲ್ಲಿದ್ದರು.
ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ:
ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಆರ್. ವೆಂಕಟೇಶ್ ಕುಮಾರ್ ನೇಮಕಗೊಂಡಿದ್ದಾರೆ. ವರ್ಗಾವಣೆಗೊಂಡಿರುವ ಎಂ. ಜಿ. ಹಿರೇಮಠ ಅವರಿಗೂ ಯಾವುದೇ ಹುದ್ದೆ ತೋರಿಸಿಲ್ಲ.
ವರ್ಗಾವಣೆಗೊಂಡ ಇಬ್ಬರು ಅಧಿಕಾರಿಗಳಿಗೆ ಯಾವುದೇ ಹುದ್ದೆಯನ್ನು ನೀಡಿಲ್ಲ.
ಡಿಸೆಂಬರ್ 10ರಂದುಚುನಾವಣೆ:
ಕೇಂದ್ರ ಚುನಾವಣಾ ಆಯೋಗ 25 ವಿಧಾನ ಪರಿಷತ್ ಸ್ಥಾನಗಳ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, 14 ರಂದು ಮತ ಎಣಿಕೆ ನಡೆಯಲಿದೆ.
ನವೆಂಬರ್ 16ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ.
ನವೆಂಬರ್ 23ರ ತನಕ ಬೆಳಗ್ಗೆ
11ರಿಂದ ಮಧ್ಯಾಹ್ನ 3ರ ತನಕ ನಾಮಪತ್ರಗಳನ್ನು
ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ, ನವೆಂಬರ್ 26ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ.