ಬೆಂಗಳೂರು (ನ.16): Puneeth Rajkumar:ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಡಾ. ರಾಜಕುಮಾರ್ ಕುಟುಂಬ ಸದಸ್ಯರು ಹಾಗೂ ಅನೇಕ ಚಿತ್ರರಂಗ ಕಲಾವಿದರು ಹಾಗೂ ರಾಜಕಾರಣಿಗಳು ಭಾಗವಹಿಸಿದ್ದರು.
ಖ್ಯಾತ ಗಾಯಕ ವಿಜಯಪ್ರಕಾಶ್ ಅವರು “ಮುತ್ತುರಾಜ ಹೆತ್ತ ಮುತ್ತೇ ಎತ್ತ ಹೋದೆಯಾ..” ಎನ್ನುವ ಗೀತೆಯಿಂದ ಪುನೀತ್ ಅವರಿಗೆ ನಮನ ಸಲ್ಲಿಸಿದರು. ಹಾಡಲು ಕೇಳಿದವರೆಲ್ಲಾ ಕಣ್ಣನ್ನು ಒದ್ದೆ ಮಾಡಿಕೊಂಡರು.
ಪುನೀತ್ ರಾಜಕುಮಾರ್ ಅವರ ಜೀವನದ ಕುರಿತು ಸುದೀಪ್ ಅವರ ಹಿನ್ನೆಲೆ ಧ್ವನಿಯಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದರು. ಸಾಕ್ಷ್ಯಚಿತ್ರದಲ್ಲಿ ಹಲವು ಗಾಯಕರು ತಮ್ಮ ಗಾಯನದ ಮೂಲಕ ಭಾವನಾತ್ಮಕ ನಮನ ಸಲ್ಲಿಸಿದರು. ಈ ವೇಳೆ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಪುನೀತ್ ರಾಜಕುಮಾರ್ ಅವರ ಅಕಾಲಿಕ ಅಗಲಿಕೆಯ ನಮಗಷ್ಟೇ ಅಲ್ಲದೆ ಇಡೀ ರಾಜ್ಯಕ್ಕೆ ಅಘಾತಕಾರಿ ವಿಷಯವಾಗಿದೆ. ನಿಷ್ಕಲ್ಮಶ ಪ್ರೀತಿಯಿಂದ ಆರೈಕೆ ಅಭಿಮಾನದಿಂದ ಅವರನ್ನು ಪವರ್ ಸ್ಟಾರ್ ಆಗಿ ರೂಪಿಸಿದ ನಿಮ್ಮೆಲ್ಲರಿಗೆ ಅವರ ವಿದಾಯ ತಂದಿಟ್ಟ ದುಃಖ ಎಷ್ಟಿರಬಹುದೆಂದು ಊಹಿಸಲು ಸಾಧ್ಯವಿಲ್ಲ.
ಗೌರವಪೂರ್ವಕವಾಗಿ ಬೀಳ್ಕೊಡುಗೆ ಕೊಟ್ಟಿದ್ದೀರಿ. ಸಿನಿಮಾ ಪ್ರೀಯರಲ್ಲದೆ, ದೇಶ ವಿದೇಶಗಳಿಂದ ಕೋಟ್ಯಾಂತರ ಜನರು ಸಂತಾಪ ಸೂಚಿಸಿದ್ದಾರೆ. ಪುನೀತ್ ಅವರು ನೇತ್ರದಾನ ಮಾಡಿದ ಹಿನ್ನಲೆ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಾಣಿ ಮಾಡಿಸಿರುವುದು ನೋಡಿ ಕಣ್ತುಂಬಿ ಬಂದಿದೆ.
ವಿಶ್ವಾದ್ಯಂತ ನಮ್ಮ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಅಭಿಮಾನಿಗಳಿಗೆ ಅಶ್ವಿನಿಯವರ ಪತ್ರದ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.
