ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆಯಿಂದ ನಿರಂತರವಾಗಿ ಜಿಟಿಜಿಟಿ ಮಳೆ ಬೀಳುತ್ತಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ನಾಳೆ ಸಂಜೆಯವರೆಗೂ ಇದೇ ರೀತಿಯ ವಾತಾವರಣ ಇದು ತುಂತುರು ಮಳೆ ಬೀಳುವ ಸಾಧ್ಯತೆ ಇದೆ ಎಂದಿದ್ದಾರೆ. ಇದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗಿದೆ. ಜೊತೆಗೆ ತಂಗಾಳಿ ಬೀಸುತ್ತಿರುವುದರಿಂದ ಚಳಿಯ ವಾತಾವರಣ ಸೃಷ್ಟಿಯಾಗಿದೆ. ಚಾಮರಾಜನಗರ ಹಾಗೂ ಕೋಲಾರದಲ್ಲಿ ಇದರ ಪರಿಣಾಮ ಹೆಚ್ಚಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಚನ್ನಪಟ್ಟಣದಲ್ಲಿ 130 ಮಿ.ಮೀ, ಯಳಂದೂರು ತಾಲ್ಲೂಕಿನ ಅಗರ ಹೋಬಳಿಯಲ್ಲಿ 65 ಮಿ.ಮೀ, ಯಳಂದೂರು ಹೋಬಳಿಯಲ್ಲಿ 64.5 ಮಿ.ಮೀ ದುಗ್ಗಹಟ್ಟಿಯಲ್ಲಿ 65 ಮಿ.ಮೀ, ಚಾಮರಾಜನಗರ ತಾಲ್ಲೂಕಿನ ಕೂಡಲೂರು ಗ್ರಾಮಪಂಚಾಯ್ತಿಯಲ್ಲಿ 67.5 ಮಿ.ಮೀ, ಕೆಂಪನಪುರ ಗ್ರಾಪಂನಲ್ಲಿ 66 ಮಿ.ಮೀ, ಹೆಬ್ಬಸೂರು ಗ್ರಾಪಂನಲ್ಲಿ 65.5 ಮಿ.ಮೀ, ಚಂದಕವಾಡಿಯಲ್ಲಿ 65.5 ಮಿ.ಮೀ ಕೊಳ್ಳೆಗಾಲ ತಾಲ್ಲೂಕಿನ ಮಂಗಳ ಗ್ರಾಮಪಂಚಾಯ್ತಿಯಲ್ಲಿ 65.5 ಮಿ.ಮೀ, ಶ್ರೀನಿವಾಸಪುರ ತಾಲ್ಲೂಕಿನ ನೆಲವಂಕಿ ಹೋಬಳಿಯಲ್ಲಿ 64.5 ಮಿ.ಮೀ, ಮುದಿಮಡಗು ಗ್ರಾಮಪಂಚಾಯ್ತಿಯಲ್ಲಿ 71.5 ಮಿ.ಮೀ , ಕೋಡಿಪಲ್ಲಿಯಲ್ಲಿ 65.5 ಮಿ.ಮೀನಷ್ಟು ಮಳೆಯಾಗಿದೆ.
ಇದನ್ನೂ ಓದಿ: ವಿಶ್ವ ನ್ಯುಮೋನಿಯಾ ದಿನದ ವಿಶೇಷತೆ ಏನು?
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಭಾಗಶಹ ಮಳೆಯಾಗಿದ್ದು ಚಿತ್ರದುರ್ಗ, ತುಮಕೂರು, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದೆ. ಮುಂಗಾರು ಹಂಗಾಮಿನ ಬೆಳೆಗಳಾದ ಕಾಫಿ, ರಾಗಿ, ಶ್ರೀರಂಗ ಮುಂತಾದ ಬೆಳೆಗಳ ಕೊಯಿಲಿಗೆ ತೊಂದರೆ ಉಂಟಾಗಿದೆ. ತುಂತುರು ಮಳೆಯೂ ಕೊಯಿಲಿಗೆ ತೊಂದರೆ ಉಂಟು ಮಾಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ನಿವೃತ್ತ ಸಚಿವರಾದ ವಿ ಎಸ್ ಪ್ರಕಾಶ್ ರವರ ಪ್ರಕಾರ ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು ಆಗಾಗ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಈಗಾಗಲೇ ಜಿಟಿಜಿಟಿ ಮಳೆ ಆರಂಭವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಗ್ರಾಮಾಂತರ ಮುಂತಾದ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಈ ಚಳಿಯ ವಾತಾವರಣ ಸೃಷ್ಟಿಯಾಗಿತ್ತು. ನವೆಂಬರ್ 16ರ ನಂತರ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ