ಚೆನ್ನೈ: ಬಿಟ್ಟು ಬಿಡದೆ ಸುರಿಯುತ್ತಿರುವ ಮಹಾಮಳೆಗೆ ಚೆನ್ನೈ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳಿಗೆ ನೀರು ನುಗ್ಗಿ ಜನಜೀವನ ಬೀದಿಪಾಲಾಗಿದೆ. ರಸ್ತೆಗಳಲ್ಲಿಯೂ ನೀರು ನಿಂತು ಸಂಚಾರ ವ್ಯವಸ್ಥೆಗೆ ಅಡ್ಡಿಯಾಗಿದೆ. ತೀವ್ರ ಮಳೆಗಾಲದ ಪ್ರದೇಶಗಳಲ್ಲಿ ಜನರನ್ನು ಸಂಪರ್ಕಿಸುವುದು ಕಷ್ಟವಾಗಿದೆ. ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುವಂತಾಗಿದೆ. ಮಳೆಯ ಆರ್ಭಟಕ್ಕೆ ಜನಜೀವನ ತತ್ತರಿಸಿ ಹೋಗಿದೆ. ಮಳೆಯ ಅಬ್ಬರಕ್ಕೆ ಈಗಾಗಲೇ 14 ಜನ ಬಲಿಯಾಗಿದ್ದಾರೆ.
ಮಳೆಯ ಪ್ರಮಾಣ ಹೆಚ್ಚಾಗಿದ್ದು ಅಣೆಕಟ್ಟುಗಳಿಂದ ತುಂಬಿದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿತ್ತು. ತಮಿಳುನಾಡಿನಲ್ಲಿ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ. ಗುರುವಾರ ತಡರಾತ್ರಿಯವರೆಗೂ ಚೆನ್ನೈನ ಹಲವು ಭಾಗಗಳು ನೀರಿನಿಂದ ತುಂಬಿದ್ದು, ಸುಮಾರು 75,000ಕ್ಕೂ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಮಳೆಯ ಜೊತೆಗೆ ಅಣೆಕಟ್ಟೆಗಳಿಂದ ಹೆಚ್ಚುವರಿ ನೀರನ್ನು ಬಿಡುತ್ತಿರುವುದರಿಂದ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ.

ಪ್ರಸ್ತುತ ಸ್ಥಿತಿ ಹೇಗಿದೆ?
ಗುರುವಾರ ಚೆನ್ನೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಧಿಕಾರಿಗಳು ಭಾರೀ ಗಾತ್ರದ ಮೋಟಾರ್‌ಗಳನ್ನು, ರೋಬೋಟಿಕ್ ಅಗೆಯುವ ಯಂತ್ರಗಳನ್ನು ಬಳಸಿ ನೀರನ್ನು ಪಂಪ್ ಮಾಡಲು, ಚರಂಡಿಗಳನ್ನು ಮುಚ್ಚಲು, ಕಸವನ್ನು ತೆಗೆದುಹಾಕಲು ಮತ್ತು ಬಿದ್ದ ಮರಗಳನ್ನು ಬೇರುಸಹಿತ ತೆಗೆಯಲು ಮಾನವಶಕ್ತಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತುಂತುರು.
ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ಮೈಲಾಪುರ ಡೌನ್‌ಟೌನ್ ಸೇರಿದಂತೆ ಬಹುತೇಕ ಇಡೀ ನಗರವು ನೀರಿನಿಂದ ಆವೃತವಾಗಿದೆ ಮತ್ತು ವೆಲಚೇರಿ ಸೇರಿದಂತೆ ನೆರೆಹೊರೆಗಳ ಹಲವಾರು ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಜಲಾವೃತವಾಗಿದ್ದು ಕೆಕೆ ನಗರ ಮತ್ತು ಕ್ರೋಮ್‌ಪೇಟ್‌ನಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಮಳೆ ನೀರು ನುಗ್ಗಿ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮಾಡಿದೆ.
ಅಷ್ಟೇ ಅಲ್ಲದೆ ವಿಮಾನ ಹಾರಾಟಗಳನ್ನು ರದ್ದು ಮಾಡಲಾಗಿತ್ತು. ಫ್ಲೈಟ್ ಗಳಲ್ಲಿ ಲ್ಯಾಂಡಿಂಗ್ ನಿರ್ಬಂಧಿಸಲಾಗಿದೆ. ತೀವ್ರ ಮಳೆ ಮತ್ತು ಗಾಳಿಯ ವಾತಾವರಣದಿಂದ ನವೆಂಬರ್ 11ರ 6:00 ಗಂಟೆಯವರೆಗೆ ಚೆನ್ನೈಗೆ ಆಗಮಿಸುವ ಎಲ್ಲ ವಿಮಾನಗಳನ್ನು ನಿರ್ಬಂಧಿಸಲಾಗಿದೆ ಎಂದು ಚೆನ್ನೈ ವಿಮಾನ ನಿಲ್ದಾಣ ಅಧಿಕಾರಿ ತಿಳಿಸಿದ್ದಾರೆ ಪ್ರಯಾಣಿಕರ ಸುರಕ್ಷತೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಮಳೆಯ ಅಬ್ಬರ ಹೆಚ್ಚಾಗಿದ್ದು ರಸ್ತೆಗಳಲ್ಲಿ ಮನುಷ್ಯರೇ ಮುಳುಗುವಷ್ಟು ನೀರು ತುಂಬಿಹೋಗಿದೆ. ಹಸ್ತಿನಾಪುರದ ಸುತ್ತಮುತ್ತ ಪ್ರದೇಶಗಳಲ್ಲಿ ರಸ್ತೆಗಳು ಕೆರೆಗಳಂತೆ ಕಂಡುಬರುತ್ತದೆ. ದಿನೇ ದಿನೇ ನೀರಿನ ಮಟ್ಟ ಹೆಚ್ಚಾಗುತ್ತಿದೆ ಎಂದು ಸಿಎಂ ಸ್ಟ್ಯಾಲಿನ್ ಅವರು ತಿಳಿಸಿದ್ದಾರೆ.

ಸಿಎಂ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ಸಭೆ
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಳೆಯ ಸಚಿವರೊಂದಿಗೆ ಚರ್ಚೆ ನಡೆಸಿದರು. ಮಳೆ ಪರಿಸ್ಥಿತಿಯನ್ನು ಪರಿಶೀಲಿಸಲು ಮುಖ್ಯ ಕಾರ್ಯದರ್ಶಿ ವಿ ಇರೈ ಅನ್ಬು ನೇತೃತ್ವದಲ್ಲಿ ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಸಮಸ್ಯೆಗಳ ನಿರ್ವಹಣೆಗೆ ವಿಶೇಷವಾಗಿ ನಿಯೋಜಿತವಾಗಿರುವ ಅಧಿಕಾರಿಗಳಿಗೆ ಪರಿಹಾರ ಚಟುವಟಿಕೆಗಳನ್ನು ಚುರುಕುಗೊಳಿಸಲು ಮತ್ತು ಪರಿಹಾರ ಶಿಬಿರಗಳಲ್ಲಿ ಗುಣಮಟ್ಟದ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಸಿಎಂ ಸೂಚಿಸಿದ್ದಾರೆ.
ಮುಂದೆ ಮಳೆ ಕಡಿಮೆಯಾಗುವ ನಿರೀಕ್ಷೆ ಇದ್ದು ಇನ್ನಾದರೂ ಅಧಿಕಾರಿಗಳು ಬೆಳೆ ನಷ್ಟವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿಶೇಷವಾಗಿ ಕಾವೇರಿ ಡೆಲ್ಟಾ ಪ್ರದೇಶದಲ್ಲಿ ಬೆಳೆ ಹಾನಿಯನ್ನು ಅಂದಾಜಿಸಲು ಮತ್ತು ಪರಿಹಾರ ಕಾರ್ಯವನ್ನು ತ್ವರಿತಗೊಳಿಸಲು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಸಹಕಾರಿ ಸಚಿವ ಐ ಪೆರಿಯಸಾಮಿ ನೇತೃತ್ವದ ಆರು ಸದಸ್ಯರ ಸಚಿವ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿ ಆದೇಶಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಇಷ್ಟೇ ಅಲ್ಲದೆ ರೈಲು ಹಳಿಗಳ ಮೇಲೆ ಭಾರಿ ಪ್ರಮಾಣದ ನೀರು ನಿಂತಿದ್ದು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ ಆದ್ದರಿಂದ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ