ಇಂದು ಭಾರತದ ಮಹಾ್ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಾಂ ಆಝಾದರ ಜನ್ಮದಿನ. ರಾಷ್ಟ್ರೀಯ ಶಿಕ್ಷಣ ದಿನ! ಆದರೆ ಈ ವಿಚಾರ ನಮ್ಮಲ್ಲಿ ಎಷ್ಟು ಮಂದಿಗೆ ತಿಳಿದಿದೆ? ಹೌದು, ದೇಶ ಕಂಡ ಮಹಾನ್ ಹೋರಾಟಗಾರರಲ್ಲಿ ಮೌಲಾನಾ ಆಝಾದ್ ಕೂಡ ಒಬ್ಬರು. ಆದರೆ ಇಂದಿನ ಪೀಳಿಗೆಗೆ ತಮ್ಮ ಶಿಕ್ಷಣಕ್ಕೆ ಅಡಿಪಾಯ ಹಾಕಿದ ದೇಶದ ಮೊದಲ ಶಿಕ್ಷಣ ಸಚಿವ ಯಾರೆಂದೇ ತಿಳಿದಿಲ್ಲ. ದೇಶ ವಿಭಜನೆಯ ಸಂದರ್ಭ ಗುಂಪು ಗುಂಪಾಗಿ ಮುಸ್ಲಿಂ ಬಾಂಧವರು ಪಾಕಿಸ್ತಾನಕ್ಕೆ ತೆರಳುವಾಗ ತಮ್ಮ ಭಾಷಣದ ಮೂಲಕ ಜನರಿಗೆ ಜಾಗೃತಿ ಮೂಡಿಸಲು ಶತಪ್ರಯತ್ನ ಪಟ್ಟರು.
ಇದನ್ನೂ ಓದಿ: ಹೈನುಗಾರರಿಗೆ ಮತ್ತೆ ಶಾಕ್! ಹಾಲಿನ ಬೆಲೆ ಕಡಿತ!
ಇಸ್ಲಾಂ ವಿದ್ವಾಂಸರಾಗಿದ್ದ ಮೌಲಾನಾ ಅಬುಲ್ ಕಲಾಂ ಮುಸ್ಲಿಮರ ಪ್ರತ್ಯೇಕ ರಾಷ್ಟ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಆಧುನಿಕ ಶಿಕ್ಷಣ ಪಡೆದಿದ್ದ ಮೊಹಮ್ಮದ್ ಅಲಿ ಜಿನ್ನಾ ಧರ್ಮಾಧಾರಿತ ದೇಶ ಬೇಕೆಂದು ಪಟ್ಟು ಹಿಡಿದರು. ಮೊದಲು ದೇಶವಿಭಜನೆಯನ್ನು ಖಡಾಖಂಡಿತವಾಗಿ ವಿರೋಧಿಸಿದ್ದ ಗಾಂಧೀಜಿ ನಂತರ ತಾವೇ ಖುದ್ದು ದೇಶವಿಭಜನಾ ಪತ್ರಕ್ಕೆ ಸಹಿ ಹಾಕಿದ್ದರು. ಅದಾದ ನಂತರ ಮೌಲಾನಾ ಆಝಾದ್ ರವರು ಗಾಂಧೀಜಿ ಅವರೊಂದಿಗೆ ಅದೆಷ್ಟೋ ದಿನ ಮಾತನ್ನೇ ಬಿಟ್ಟಿದ್ದರು. ದೇಶವಿಭಜನೆಯಾದ್ರೆ ಅದು ಬ್ರಿಟಿಷರ ಪಾಲಿನ ನಿಜವಾದ ಗೆಲುವು ಎಂದು ಆಝಾದ್ ಹೇಳುತ್ತಿದ್ದರು.
ಅವರು ಎಂದಿಗೂ ಹಿಂದೂ-ಮುಸ್ಲಿಮ್ ಐಕ್ಯತೆಯನ್ನು ಬಯಸಿದ್ದರು. ದೇಶವಿಭಜನೆಯ ಸಂದರ್ಭ ದೇಶ ತೊರೆಯದಂತೆ ಸಾಕಷ್ಟು ಮುಸ್ಲಿಮರಿಗೆ ತಿಳಿಹೇಳಿದರು. ಅವರ ಕೆಲ ಭಾಷಣಗಳ ತುಣುಕು ನಮಗೆ ಅವರ ದೇಶಪ್ರೇಮ ಎಂತದ್ದು ಎಂಬುದನ್ನು ತಿಳಿಸುತ್ತದೆ.

“ಬ್ರಿಟಿಷರ ಆಡಳಿತದಲ್ಲಿ ನೀವು ಮಾಡಿದಂತೆ ಭಿಕ್ಷಾಪಾತ್ರೆ ಹಿಡಿದು ಜೀವನ ನಡೆಸಿರೆಂದು ನಾನು ಹೇಳುತ್ತಿಲ್ಲ. ನಿಮ್ಮ ಸಂಸ್ಕೃತಿಯ ಬೇರುಗಳನ್ನು ನೀವು ಭದ್ರವಾಗಿ ಹಿಡಿದಿಟ್ಟುಕೊಳ್ಳಿ. ಅದೇ ನಮ್ಮ ಆಸ್ತಿ. ನೀವು ಓಡಿಹೋಗಲು ಇಚ್ಚಿಸದಿದ್ದರೆ ನಮ್ಮನ್ನು ಯಾರೂ ಓಡಿಸಲಾರರು ಎಂಬುವುದನ್ನು ನೆನಪಿಟ್ಟುಕೊಳ್ಳಿ. ಈ ದೇಶ ನಮ್ಮದೇ ಎಂದು ಪ್ರತಿಜ್ಞೆ ಕೈಗೊಳ್ಳಿ. ಈ ದೇಶ ನಮ್ಮದು, ನಮ್ಮ ಸ್ವರವಿಲ್ಲದೆ ದೇಶದ ಪ್ರಗತಿಗೀತೆ ಅರ್ಥಕಳೆದುಕೊಳ್ಳುತ್ತದೆ ಎಂಬ ಪ್ರತಿಜ್ಞೆ ನಮ್ಮದಾಗಲಿ”.
ಹೌದು, ಇಂದು ರಕ್ತಪಾತವಾಗುತ್ತಿದೆ. ಆ ನೋವು ಸಹಿಸಲಸಾಧ್ಯ. ನಾವದನ್ನು ಮೆಟ್ಟಿ ನಿಂತು ರಾಷ್ಟ್ರ ಕಟ್ಟಬೇಕು. ಇಂದು ನೀವು ಚಂಡಮಾರುತಗಳನ್ನು ಕಂಡು ಹೆದರುತ್ತಿದ್ದೀರಿ. ನೀವೇ ಒಂದು ಕಾಲದಲ್ಲಿ ಬ್ರಿಟಿಷರ ಪಾಲಿಗೆ ಚಂಡಮಾರುತವಾಗಿರಲಿಲ್ಲವೇ..? ಇಂದು ನೀವು ಕತ್ತಲಿಗೆ ಹೆದರುತ್ತಿದ್ದೀರಿ. ಒಂದೊಮ್ಮೆ ಈ ನೆಲದಲ್ಲಿ ನಮ್ಮ ಧೀರೋದಾತ್ತ ಹೋರಾಟವೇ ಬೆಳಕಾಗಿರಲಿಲ್ಲವೇ…? ನೀವು ಜಡಿಮಳೆಗೆ ಹೆದರುತ್ತಿದ್ದೀರಿ. ನಿಮ್ಮ ಪೂರ್ವಜರು ಸಮುದ್ರಕ್ಕೇ ಇಳಿದಿದ್ದರು. ಬೆಟ್ಟ, ಕುಟ್ಟಿ ಪುಡಿ ಮಾಡಿದವರು, ಗುಡುಗು ಮಿಂಚುಗಳಿಗೆ ಮುಗುಳ್ನಗೆಯ ಉತ್ತರ ಕೊಟ್ಟವರು. ಬಿರುಗಾಳಿಯೆದ್ದಾಗ ಅದು ದಾರಿ ತಪ್ಪಿ ಬಂದಿದೆ ಎಂದು ಅದರ ದಿಕ್ಕನ್ನೇ ಬದಲಾಯಿಸಿದವರು ನೀವು. ಇದು ವಿಶ್ವಾಸ ಕಳೆದುಕೊಳ್ಳುತ್ತಿರುವ ಸೂಚನೆ. ಅಲ್ಲಾಹನಲ್ಲಿ ಹಿಂದೆಂದೂ ನಂಬಿಕೆ ಇರಲಿಲ್ಲವೆಂಬ ಮಟ್ಟಿಗೆ ನೀವು ವಿಶ್ವಾಸ ಕಳೆದುಕೊಂಡಿದ್ದೀರಿ”

ಇವು ಅವರು ಮುಸಲ್ಮಾನರನ್ನು ಕುರಿತು ಆಡಿದ್ದ ಕೆಲವು ಮಾತುಗಳು. ಮುಸಲ್ಮಾನ್ ವಿದ್ವಾಂಸರಾಗಿದ್ದ ಆಝಾದ್ ಅವರು ಅಧಿಕಾರದ ಹಿಂದೆ ಹೋದವರಲ್ಲ, ರಾಜಕೀಯಕ್ಕೆ ಆಸೆಪಟ್ಟವರಲ್ಲ. ಗಾಂಧೀಜಿಯವರ ನಿರಂತರ ಬಲವಂತದಿಂದ ಅವರು ಕಾಂಗ್ರೆಸ್ ಸೇರಬೇಕಾಯಿತು. ಸ್ವಾತಂತ್ರ್ಯ ಸಿಕ್ಕಾಗ ಸ್ಥಾಪನೆಯಾದ ಹೊಸ ಸರಕಾರದಲ್ಲಿ ರಾಜಗೋಪಾಲಾಚಾರಿಯವರಿಂದ ತೆರವಾದ ಶಿಕ್ಷಣ ಸಚಿವ ಹುದ್ದೆಗೆ ಮೌಲಾನಾ ಸರ್ವಾನುಮತದ ಆಯ್ಕೆಯಾಗಿದ್ದರು. ಅವರಲ್ಲಿದ್ದ ವಿದ್ವತ್ತು, ವೈಚಾರಿಕತೆ, ದೂರದೃಷ್ಟಿಯ ಕಾರಣಕ್ಕಾಗಿ ನೆಹರೂ ಅವರನ್ನು ಶಿಕ್ಷಣ ಸಚಿವರನ್ನಾಗಿ ಆಯ್ಕೆ ಮಾಡಿದರು. 1947ರಿಂದ 1958ರವರೆಗೆ ಅಂದರೆ ಮರಣದವರೆಗೂ ಅವರು ಶಿಕ್ಷಣ ಸಚಿವರಾಗಿದ್ದರು. ಭಾರತದ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದವರು ಮೌಲಾನಾ. ವಿಶ್ವವಿದ್ಯಾನಿಲಯ ಅನುದಾನ ಆಯೋಗವನ್ನು ರಚಿಸಿದವರು ಮೌಲಾನಾ. ಆದರೆ ಇಂದು ಹೆಚ್ಚಿನ ಯಾವ ವಿಶ್ವವಿದ್ಯಾನಿಲಯಗಳೂ ಅವರನ್ನು ಸ್ಮರಿಸುವ ಕೆಲಸ ಮಾಡದಿರುವುದು ದುರದೃಷ್ಟಕರ.