ನವೆಂಬರ್ 10ರಂದು ರಾಜ್ಯದ ಹಲವೆಡೆ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ರಾಜ್ಯವನ್ನು ಕೇವಲ 18 ವರ್ಷ ಆಳಿದ ಟಿಪ್ಪು ಸುಲ್ತಾನ್, ಆ ಅಲ್ಪ ಅವಧಿಯಲ್ಲಿ ನಾಡಿಗೆ ನೀಡಿದ ಕೊಡುಗೆಗಳು ಹಾಗೂ ಮಾಡಿದ ಸಾಧನೆಗಳು ಅಗಾಧ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ ವೀರಯೋಧ ಟಿಪ್ಪು ಜೀವನದ ಮಹತ್ವದ ಸಂಗತಿಗಳು ಇಲ್ಲಿವೆ.

ಯೋಧ ಪರಿವಾರದಲ್ಲಿ ಜನನ
ಬೆಂಗಳೂರು(Bengaluru) ಸಮೀಪದ ದೇವನಹಳ್ಳಿಯಲ್ಲಿ ನವೆಂಬರ್ 10, 1750ರಂದು ಟಿಪ್ಪು ಸುಲ್ತಾನ್ ಜನಿಸಿದರು. ತಂದೆ ಹೈದರ್ ಅಲಿ(Haidar Ali) ಮೈಸೂರು ಸಾಮ್ರಾಜ್ಯದ ರಾಜರಾಗಿದ್ದರು. ತಾಯಿ ಫಾತಿಮಾ(Fatima) ಕಡಪಾ(Kadapa) ಕೋಟೆಯ ಕಾವಲು ಪಡೆ ಮುಖ್ಯಸ್ಥನ ಮಗಳು. ಇಂತಹ ಕುಟುಂಬದಲ್ಲಿ ಜನಿಸಿದ ಟಿಪ್ಪುಗೆ ಆಡಳಿತ, ಯುದ್ಧ, ರಾಜತಾಂತ್ರಿಕ ಕೌಶಲ್ಯವು ಬಾಲ್ಯದಲ್ಲೇ ತಿಳಿದಿತ್ತು. ಅನಕ್ಷರಸ್ಥನಾಗಿದ್ದ ಹೈದರ್ ಅಲಿ (Haidar Ali) ಯು ತನ್ನ ಮಗನಾದರೂ ವಿದ್ಯೆ ಕಲಿಯಬೇಕೆಂಬ ಹಂಬಲದಿಂದ ಟಿಪ್ಪುವಿಗೆ ಸಕಲ ವಿದ್ಯೆಗಳನ್ನು ಕಲಿಸುವ ವ್ಯವಸ್ಥೆ ಮಾಡಿದ್ದನು. ಉರ್ದು, ಪರ್ಷಿಯನ್, ಕನ್ನಡ, ಅರೇಬಿಕ್, ಕುರಾನ್, ಇಸ್ಲಾಮೀ ನ್ಯಾಯಶಾಸ್ತ್ರ, ಕುದುರೆ ಸವಾರಿ, ತೋಪು ಚಲಾಯಿಸುವುದು ಮುಂತಾದ ವಿದ್ಯೆಗಳಲ್ಲಿ ಟಿಪ್ಪು ಚಿಕ್ಕ ವಯಸ್ಸಿನಲ್ಲಿಯೇ ಪರಿಣಿತನಾಗಿದ್ದನು.
ಚಾಣಾಕ್ಷ ಯೋಧ
ತನ್ನ ತಂದೆ ಹೈದರ್ ಅಲಿ (Haidar Ali) ಯಂತೆ ಟಿಪ್ಪು ಕೂಡ ಯುದ್ಧ ಕಲೆಗಳಲ್ಲಿ ನಿಸ್ಸೀಮನಾಗಿದ್ದರು. ಗೆರಿಲ್ಲಾ(Gerilla) ಯುದ್ಧ, ಚಲನ ಯುದ್ಧ, ಸ್ಥಾನಿಕ ಯುದ್ಧ ಎಂಬ ಮೂರು ಬಗೆ ಯುದ್ಧ ತಂತ್ರಗಳನ್ನು ಟಿಪ್ಪು ಬಳಸುತ್ತಿದ್ದರು. ಪಾಳೆಗಾರರು, ಮರಾಠರು ಹಾಗೂ ಬ್ರಿಟಿಷರು ಅನುಸರಿಸುತ್ತಿದ್ದ ಈ ಮೂರು ಬಗೆಯ ಯುದ್ಧ ತಂತ್ರಗಳೂ ಟಿಪ್ಪುಗೆ ಸಿದ್ಧಿಸಿದ್ದರಿಂದ ಎಲ್ಲರನ್ನೂ ಯಶಸ್ವಿಯಾಗಿ ಎದುರಿಸಲು ಅವರಿಗೆ ಸಾಧ್ಯವಾಯಿತು.

ಆಧುನಿಕತೆಗೆ ಆದ್ಯತೆ
ಇತರೆ ಭಾರತೀಯ ರಾಜರಿಗೆ ರಾಕೆಟ್(Rocket)ಗಳ ಪರಿಚಯವೇ ಇಲ್ಲದ ಕಾಲದಲ್ಲಿ ಟಿಪ್ಪು ತನ್ನ ಸೈನ್ಯದಲ್ಲಿ ರಾಕೆಟ್ (Rocket) ಬಳಕೆಯನ್ನು ಅಳವಡಿಸಿಕೊಂಡಿದ್ದರು. ಜೊತೆಗೆ, ನೂರು ನೌಕೆಗಳ ಬಲಿಷ್ಠ ನೌಕಾಪಾಡೆಯನ್ನು ಕೂಡ ಟಿಪ್ಪು ಕಟ್ಟಿದ್ದರು. ಭಾರತದ ವಸ್ತುಗಳನ್ನೇ ಬಳಸಿಕೊಂಡು ಟಿಪ್ಪು ನಿರ್ಮಿಸಿದ್ದ ಸ್ವದೇಶಿ ನೌಕೆಗಳು ಬ್ರಿಟಿಷರ ನೌಕೆಗಳಿಗೆ ಸರಿಸಮವಾಗಿದ್ದವು. ರಾಜ್ಯ ರಕ್ಷಣೆಗೆ ಬೇಕಾದ ಫಿರಂಗಿ(Firangi) ಮೊದಲಾದ ಶಸ್ತ್ರಗಳನ್ನು ಸ್ವಂತವಾಗಿ ತಯಾರಿಸಲು ಶ್ರೀರಂಗಪಟ್ಟಣದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿದ್ದರು. ನೀರಿನ ಹರಿವಿನಿಂದಲೇ ಶಕ್ತಿಯನ್ನು ಪಡೆದುಕೊಂಡು ಫಿರಂಗಿ(Firangi) ತಯಾರಿಕೆಗೆ ಎರಕ ಹೊಯ್ಯುವ ಅತ್ಯಾಧುನಿಕ ಯಂತ್ರ ಕೂಡ ಟಿಪ್ಪು ಬಳಿಯಿತ್ತು.
ಬದುಕಿದ್ದ 48 ವರ್ಷದಲ್ಲೇ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ
ನರಿಯ ಹಾಗೆ ನೂರುವರ್ಷ ಬದುಕುವುದಕ್ಕಿಂತ ಸಿಂಹದ ಹಾಗೆ ಒಂದು ದಿನ ಬದುಕುವುದೇ ಮೇಲು ಎಂಬುದು ಟಿಪ್ಪು ಧ್ಯೇಯವಾಗಿತ್ತು. ಬ್ರಿಟಿಷರ ವಿರುದ್ಧ ಹೋರಾಡಲು ತನ್ನೆಲ್ಲ ಬುದ್ಧಿ, ಶಸ್ತ್ರ, ಸಾಮರ್ಥ್ಯಗಳನ್ನು ಟಿಪ್ಪು ಬಳಸಿದರು. ಕೊನೆಗೆ, ಪ್ರಾಣವನ್ನೇ ಅರ್ಪಿಸಬೇಕಾಗಿ ಬಂದರೂ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ನಾಲ್ಕು ಪ್ರಮುಖ ಯುದ್ಧಗಳಲ್ಲಿ ಭಾಗಿಯಾದ ಟಿಪ್ಪು ಸುಲ್ತಾನ್‌ನಷ್ಟು ಯುದ್ಧವನ್ನು ಯಾವುದೇ ರಾಜರು ಮಾಡಿದ್ದಿಲ್ಲ. ಮೊದಲ ಮೈಸೂರು ಯುದ್ಧದ ಮೂಲಕ ಬ್ರಿಟಿಷರಿಗೆ ಮೊದಲ ಬಾರಿ ದೊಡ್ಡ ಪ್ರಮಾಣದಲ್ಲಿ ಆಘಾತ ನೀಡಿದ ಕೀರ್ತಿ ಟಿಪ್ಪು ಸುಲ್ತಾನ್‌ರದ್ದು.
ಇದನ್ನೂ ಓದಿ: Kodagu:ಇಂದು ಕೊಡಗಿನಲ್ಲಿ ನಿಷಧಾಜ್ಞೆ ಜಾರಿ
ಪರಿಸರ ಪ್ರೇಮ
ಬಾಲ್ಯದಿಂದಲೂ ಪರಿಸರವನ್ನು ಇಷ್ಟಪಡುತ್ತಿದ್ದ ಟಿಪ್ಪು ಸುಲ್ತಾನ್, ತನ್ನ ಆಡಳಿತಾವಧಿಯಲ್ಲಿ ಬೆಂಗಳೂರಿನ ಲಾಲ್‌ಬಾಗ್ (Lalbagh) ಹಾಗೂ ಶ್ರೀರಂಗಪಟ್ಟಣದ ಸಸ್ಯೋದ್ಯಾನವನ್ನು ಅಭಿವೃದ್ಧಿ ಪಡಿಸಿದರು. ಭಾರತೀಯ ತಳಿಗಳ ಜೊತೆಗೆ ಬೇರೆ ಬೇರೆ ದೇಶಗಳಿಂದಲೂ ಬೀಜಗಳನ್ನು ತರಿಸಿ ವಿಶಿಷ್ಟ ಗಿಡಗಳನ್ನು ಪರಿಚಯಿಸಿದ್ದು ಟಿಪ್ಪು ವಿಶೇಷ. ಆ ಕಾಲದಲ್ಲಿಯೇ ಪೈಸ್(Pais) ಮತ್ತು ಓಕ್(Oak) ಸಸಿಗಳನ್ನು ಗುಡ್‌ಹೋಪ್ (Goodhope) ಭೂಶಿರದಿಂದ ತರಿಸಿ ಬೆಳೆಸಲಾಗಿತ್ತು. ಹಿಪ್ಪುನೇರಳೆ ಕೃಷಿಯನ್ನು ಪ್ರೋತ್ಸಾಹಿಸುವ ಮೂಲಕ ರಾಜ್ಯದ ರೇಷ್ಮೆ ಉದ್ಯಮಕ್ಕೆ ಭದ್ರ ಬುನಾದಿಯನ್ನು ಟಿಪ್ಪು ಹಾಕಿದರು. ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಹಲವು ಕೆರೆಗಳು ಟಿಪ್ಪು ಕಾಲದಲ್ಲಿ ಅಭಿವೃದ್ಧಿಯಾದವು.
ವೀರ ಮರಣ
ಕೊನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆಯು ಕೋಟೆ ಒಡೆದು ಒಳ ಪ್ರವೇಶಿಸಿದಾಗ ಟಿಪ್ಪುವಿನ ಮಿಲಿಟರಿ (Military) ಸಲಹಾಕಾರನಾಗಿದ್ದ ಫ್ರೆಂಚ್(French) ಅಧಿಕಾರಿಯು ಸುರಕ್ಷಿತ ಜಾಗಕ್ಕೆ ಓಡಿಹೋಗುವಂತೆ ಅಥವಾ ಶರಣಾಗುವಂತೆ ಟಿಪ್ಪುವಿಗೆ ಸಲಹೆ ನೀಡಿದ. ಆದರೆ ಅವೆರಡಕ್ಕೂ ಒಪ್ಪದ ಟಿಪ್ಪು, “ಒಂದು ದಿನ ಹುಲಿಯಂತೆ ಬದುಕುವುದು, ಸಾವಿರವರ್ಷ ಕುರಿಯಂತೆ ಬದುಕಿರುವುದಕ್ಕಿಂತ ಉತ್ತಮ” ಎಂದು ಹೇಳಿ ಹೋರಾಡಿ, ಪ್ರಾಣ ಕಳೆದುಕೊಂಡರು. ಆ ಸ್ಥಳದಲ್ಲಿ ಬ್ರಿಟಿಷ್ ಅಧಿಕಾರಿ ಕಲೋನೆಲ್ ವೆಲ್ಲೆಸ್ಲಿ(colonel wellesley) ಯು ಶಿಲಾ ಫಲಕವೊಂದನ್ನು ನೆಡಿಸಿ ಟಿಪ್ಪುಗೆ ಗೌರವ ಸಲ್ಲಿಸಿದ್ದರು. ಶ್ರೀರಂಗಪಟ್ಟಣದಲ್ಲಿ ನಾವಿದನ್ನು ನೋಡಬಹುದಾಗಿದೆ.