ಕಲಬುರ್ಗಿ: ಬಿಟ್ ಕಾಯಿನ್ ಹಗರಣವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಬಲಿ ಪಡೆಯಲಿದೆ. ಈ ಬಾರಿಯೂ ಬಿಜೆಪಿ ಸರ್ಕಾರದಲ್ಲಿ ಮೂರು ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರ್ಗಿಯ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೋಟ್ಯಾಂತ ರೂಪಾಯಿಗಳ ಹಗರಣವಾದ ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರು, ಅವರ ಮಕ್ಕಳು, ಆಪ್ತರು ಇನ್ನೂ ಅನೇಕರು ಭಾಗಿಯಾಗಿದ್ದಾರೆಂದು ಆರೋಪ ಮಾಡಿದರು.

ಡ್ರಗ್ಸ್ ಕಿಕ್‌ಬ್ಯಾಕ್, ವರ್ಗಾವಣೆ ಕಿಕ್‌ಬ್ಯಾಕ್ ಬಿಟ್ ಕಾಯಿನ್ ಮೂಲಕವೇ ನಡೆದಿದೆ ಎಂದು ಆರೋಪಿಸಿದ ಅವರು, ಈ ಹಗರಣ ಬೆಳಕಿಗೆ ಬಂದಿರುವುದೇ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಕೈಗೊಂಡಾಗ. ಅಮೆರಿಕಾದವರು ಇಂತಹದೊಂದು ಚಟುವಟಿಕೆ ನಡೆಯುತ್ತಿದೆ ಎಂದು ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಈ ಹಗರಣದ ತನಿಖೆ ಸರಿಯಾಗಿ ಆದಲ್ಲಿ ಎಲ್ಲರ ಹೆಸರೂ ಕೇವಲ ಹತ್ತೇ ದಿನಗಳಲ್ಲಿ ಹೊರಬರುತ್ತದೆ. ವಿರೋಧ ಪಕ್ಷಗಳು ಇಬ್ಬರು ಪ್ರಭಾವಿ ವ್ಯಕ್ತಿಗಳ ಹೆಸರು ಹೊರಬರಲಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಈ ಹಗರಣದ ತನಿಖೆಯನ್ನು ಸಿಬಿಐ ಮತ್ತು ಇಡಿಗೆ ವಹಿಸಲು ಪತ್ರ ಬರೆದಿದೆ.
ಇದನ್ನೂ ಓದಿ: ಯೋಧ ಪರಿವಾರದಲ್ಲಿ ಜನಿಸಿದ ಟಿಪ್ಪು ಆಧುನಿಕತೆಗೆ ಆದ್ಯತೆ ನೀಡಿದ ಪರಿಸರ ಪ್ರೇಮಿ ಚಾಣಾಕ್ಷ ಹೋರಾಟಗಾರ
ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಯಾನೆ ಶ್ರೀಕಿ ಬಂಧನದ ಬಳಿಕ ಬಿಟ್ ಕಾಯಿನ್ ಹಗರಣದ ಹಲವು ವಿಚಾರಗಳು ಬಹಿರಂಗಗೊಂಡಿದ್ದವು. ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದರೆ ಎಂಬ ವಿಚಾರ ಸಂಚಲನ ಮೂಡಿಸಿತ್ತು. ಈ ನಡುವೆ ಪ್ರಕರಣದ ತನಿಖೆಯ ಕುರಿತಾದ ಮಾಹಿತಿಗಳನ್ನು ಬಹಿರಂಗಗೊಳಿಸಬೇಕು ಎಂಬ ಆಗ್ರಹವನ್ನು ವಿರೋಧ ಪಕ್ಷಗಳ ಮುಖಂಡರು ಮಾಡುತ್ತಿದ್ದಾರೆ.