ಹಾವೇರಿ: ರಾಜ್ಯ ಕೃಷಿ ಇಲಾಖೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಭಾನುವಾರ ದಿನ ಪೂರ್ತಿ ಹಾವೇರಿಯ ಹಿರೇಕೆರೂರು ರೈತರೊಂದಿಗೆ ಕಾಲ ಕಳೆಯಲಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ‘ರೈತರಿಗಾಗಿ ಒಂದು ದಿನ’ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಲಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್ ನಡೆಸುತ್ತಿರುವ ‘ರೈತರಿಗಾಗಿ ಒಂದು ದಿನ’ ಕಾರ್ಯಕ್ರಮವು ನವೆಂಬರ್ ಮೊದಲ ವಾರದಲ್ಲಿ ನಡೆಯಬೇಕಿತ್ತು. ಆದರೆ ನಟ ಪುನೀತ್ ರಾಜ್ಕುಮಾರ್ ನಿಧನದಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಈ ಭಾನುವಾರ ದರ್ಶನ್ ಮತ್ತು ಬಿ.ಸಿ.ಪಾಟೀಲ್ ರೈತರೊಂದಿಗೆ ಒಂದಿಡೀ ದಿನ ಕಾಲ ಕಳೆಯಲಿದ್ದಾರೆ.
ಭಾನುವಾರದಂದು ದರ್ಶನ್, ರೈತರಿಗೆ ಕೃಷಿ ಕ್ಷೇತ್ರದಲ್ಲಿ ಲಾಭ ಗಳಿಸಲು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವ ಬಗೆಯ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.
ಹಸುಗಳು, ಕುದುರೆ, ನವಿಲು ಸೇರಿದಂತೆ ಸಾಕಷ್ಟು ಪ್ರಾಣಿ – ಪಕ್ಷಿಗಳನ್ನು ಪೋಷಿಸುತ್ತಿರುವ ನಟ ದರ್ಶನ್ರನ್ನು ರಾಜ್ಯ ಸರ್ಕಾರ ಕೃಷಿ ಇಲಾಖೆಯ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಇದರ ಜೊತೆಯಲ್ಲಿ ದರ್ಶನ್ ಕರ್ನಾಟಕ ಅರಣ್ಯ ಇಲಾಖೆಯ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಮೂಲಗಳ ಪ್ರಕಾರ ನಟ ದರ್ಶನ್ ಈ ರಾಯಭಾರತ್ವಕ್ಕೆ ಸರ್ಕಾರದಿಂದ ಯಾವುದೇ ಸಂಭಾವನೆಯನ್ನು ಪಡೆಯುತ್ತಿಲ್ಲ ಎನ್ನಲಾಗಿದೆ.