ಮಲಪ್ಪುರಂ (ಕೇರಳ) : ಗಾಡ್ಸ್ ವೋನ್ ಕಂಟ್ರಿ (Gods Own Country) ಅಂತಲೇ ಪ್ರಸಿದ್ಧವಾದ ಕೇರಳ (Kerala) ದಲ್ಲಿ ಕೋಡಿನ್ಹಿ (Kodhini) ಅನ್ನುವ ಹಳ್ಳಿಯೊಂದಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಬರುವ ಈ ಹಳ್ಳಿಯ ವಿಶೇಷತೆ ಏನಪ್ಪ ಅಂದರೆ ಇಲ್ಲಿರುವ 2000 ಜನಸಂಖ್ಯೆಯಲ್ಲಿ ಕನಿಷ್ಠ 400 ಜೋಡಿ ಅವಳಿ (Twins) ಗಳಿದ್ದಾರೆ. ಈ ಹಳ್ಳಿಯು ಟ್ವೀನ್ ವಿಲ್ಲೇಜ್ (Twin Village) ಅಂತಲೇ ಪ್ರಸಿದ್ಧಿ.

ಅವಳಿ ಮತ್ತು ತ್ರಿವಳಿಗಳನ್ನು ಗರ್ಭಧರಿಸುವುದು ಪ್ರಪಂಚದಾದ್ಯಂತ ಅಪರೂಪದ ನೈಸರ್ಗಿಕ ಘಟನೆಯಾಗಿದೆ. ವಾಸ್ತವವಾಗಿ ಈ ಪ್ರಪಂಚದಲ್ಲಿ ಸರಾಸರಿ 1,000 ಯಶಸ್ವಿ ಗರ್ಭಧಾರಣೆಗಳಲ್ಲಿ ಕೇವಲ 16 ಮಾತ್ರ ಅವಳಿ ಅಥವಾ ತ್ರಿವಳಿ ಜನನವಾಗುತ್ತವೆ. ಆದರೆ ಈ ಹಳ್ಳಿಯಲ್ಲಿ ಸರಾಸರಿ 1,000 ಜನನಗಳ ಅನುಪಾತದಲ್ಲಿ 45 ಜನನಗಳು ಅವಳಿ ಅಥವಾ ತ್ರಿವಳಿಯಾಗುತ್ತವೆ.

ಪ್ರಸ್ತುತ ಈ ಹಳ್ಳಿಯಲ್ಲಿ 2000 ಜನರು ವಾಸವಾಗಿದ್ದಾರೆ ಅದರಲ್ಲಿ 400 ಅವಳಿ ಜೋಡಿಗಳಿವೆ. ಅಕ್ಟೋಬರ್ 2016 ರಲ್ಲಿ, CSIR-Centre for Cellular and Molecular Biology, ಹೈದರಾಬಾದ್, ಕೇರಳ ಯೂನಿವರ್ಸಿಟಿ ಆಫ್ ಫಿಶರೀಸ್ ಮತ್ತು ಓಷಿಯನ್ ಸ್ಟಡೀಸ್ (KUFOS) ಮತ್ತು ಲಂಡನ್ ವಿಶ್ವವಿದ್ಯಾಲಯ ಮತ್ತು ಜರ್ಮನಿ ಸೇರಿದಂತೆ ವಿವಿಧ ಸಂಸ್ಥೆಗಳ ಜಂಟಿ ಸಂಶೋಧಕರ ತಂಡವು ಈ ವಿದ್ಯಮಾನಕ್ಕೆ ಉತ್ತರಗಳನ್ನು ಹುಡುಕಲು ಗ್ರಾಮಕ್ಕೆ ಭೇಟಿ ನೀಡಿದ್ದವು.

ಸಂಶೋಧಕರು ಅವಳಿಗಳ ಡಿಎನ್ಎ ಅಧ್ಯಯನಕ್ಕಾಗಿ ಲಾಲಾರಸ ಮತ್ತು ಕೂದಲಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಕೇರಳದ ಕೊಡಿನ್ಹಿ, ದಕ್ಷಿಣ ವಿಯೆಟ್ನಾಂನಿಂದ ಹಂಗ್ ಹೈಪ್‌ನಲ್ಲಿರುವ , ಹಂಗ್ ಲಾಕ್ ಕಮ್ಯೂನ್, ನೈಜೀರಿಯಾದ ಇಗ್ಬೊ-ಓರಾ ಮತ್ತು ಬ್ರೆಜಿಲ್‌ನ ಕ್ಯಾಂಡಿಡೋ ಗೊಡೊಯ್‌ನಲ್ಲಿ ಏಕಕಾಲದಲ್ಲಿ ಅಧ್ಯಯನವನ್ನು ನಡೆಸಲಾಗುತ್ತಿದೆ, ಈ ಪ್ರದೇಶಗಳಲ್ಲೂ ಸಹ ಅವಳಿ ಜನನಗಳ ಸಂಖ್ಯೆ ಹೆಚ್ಚು.

ಈ ವಿಶೇಷ ಸಂಗತಿಯೂ ಬೆಳಕಿಗೆ ಬಂದ ಕಥೆಯೂ ಸಹ ಬಹಳ ರೋಚಕವಾಗಿದೆ. 2006 ರಲ್ಲಿ ಎಂಟನೇ ತರಗತಿ ಓದುತ್ತಿದ್ದ ಆ ಹಳ್ಳಿಯ ಸಮೀರಾ ಮತ್ತು ಫೇಮಿನಾ ಎಂಬ ಅವಳಿ ಸಹೋದರಿಯರಿಬ್ಬರು, ತಮ್ಮ ತರಗತಿಯಲ್ಲಿ ಒಟ್ಟು 8 ವಿದ್ಯಾರ್ಥಿಗಳು ಅವಳಿ ಇರುವುದನ್ನು ಗಮನಿಸಿದ್ದರು. ಈ ಕುರಿತು ಕುತೂಹಲ ಬೆಳೆಸಿಕೊಂಡ ಇವರು ತಮ್ಮ ಶಾಲೆಯಲ್ಲಿ ಒಂದು ಸರ್ವೇ ಮಾಡಿ 24 ಅವಳಿಗಳನ್ನು ಗುರುತಿಸಿದ್ದರು. ಇದೇ ಸರ್ವೇಯನ್ನು ಹಳ್ಳಿಯಲ್ಲಿ ಮಾಡಿದಾಗ ಒಟ್ಟಾರೆಯಾಗಿ 400 ಅವಳಿಗಳಿರುವುದನ್ನು ಮೊಟ್ಟಮೊದಲ ಬಾರಿ ಪತ್ತೆ ಹಚ್ಚಿದ್ದರು.

ಇಂದಿಗೂ ಕೂಡ ಈ ಹಳ್ಳಿಯೂ ಸಂಶೋಧಕರ ಪಾಲಿಗೆ ಪ್ರಶ್ನೆಯಾಗಿಯೇ ಉಳಿದಿದೆ.