ಮಂಗಳೂರು (ನ.8): Harekala Hajabba: ಕಿತ್ತಳೆ ಹಣ್ಣುಗಳನ್ನು ಮಾರಿ ಬಂದ ಹಣದಿಂದ ಶಿಕ್ಷಣ ವಂಚಿತರಾಗಿದ್ದ ಮಕ್ಕಳಿಗೆ ಶಾಲೆಯನ್ನು ಕಟ್ಟಿಸಿದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ದೇಶದ ಅತ್ಯುನ್ನತ 4ನೇ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು.
ಸರಳ ವ್ಯಕ್ತಿ ಹಾಜಬ್ಬ:
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಹರೇಕಳ ಹಾಜಬ್ಬನವರು ಬರಿಗಾಲಿನಲ್ಲಿ ಬಂದು ಪ್ರಶಸ್ತಿಯನ್ನು ಸ್ವೀಕರಿಸಿ ಸರಳತೆಯನ್ನು ಮೆರೆದರು.ಮಂಗಳೂರಿನ ಪ್ರತಿ ರಸ್ತೆಗಳಲ್ಲಿ ಕಿತ್ತಳೆ ಹಣ್ಣುಗಳನ್ನು ಮಾರುತ್ತಾ ಅದರಿಂದ ಬಂದ ಹಣವನ್ನು ಕೂಡಿಟ್ಟು ಶಾಲೆಯನ್ನು ಕಟ್ಟಿಸಿದ ಸಮಾಜ ಸೇವಕ.ನೀವೇನಾದರೂ ಮಂಗಳೂರಿನಲ್ಲಿ ಆಗಾಗ ಓಡಾಡುತ್ತಾ ಇದ್ದರೆ, ಹಾಜಬ್ಬರನ್ನು ಕಾಣಬಹುದು.

ಶಾಲೆ ಕಟ್ಟಿಸಿದರೂ ಬಿಟ್ಟಿಲ್ಲ ಹಣ್ಣಿನ ವ್ಯಾಪಾರ:
ಬಿಳಿ ಪಂಚೆ, ಮಾಸಿದ ಬಟ್ಟೆ ಹಾಕಿಕೊಂಡು ಕಿತ್ತಳೆ ಹಣ್ಣುಗಳನ್ನು ಮಾರುತ್ತಿರುತ್ತಾರೆ.
ಶಾಲೆ ಕಟ್ಟಿಸಿ ಸಾಧನೆ ಮಾಡಿದ್ದರೂ ಇಂದಿಗೂ ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡುವುದು ನಿಲ್ಲಿಸಿಲ್ಲ.

ಶಾಲೆ ಕಟ್ಟಿಸಲು ಹೋರಾಡಿದ ಕಥೆ:
64 ವರ್ಷದ ಹಾಜಬ್ಬ, ಶಾಲೆ ಮೆಟ್ಟಿಲು ಹತ್ತಿದವರಲ್ಲ. ಬಾಲ್ಯದಿಂದಲೂ ಒಂದು ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಬದುಕು ಇವರದು. ಕಿತ್ತಲೆ, ಮೋಸಂಬಿ ಹಣ್ಣುಗಳನ್ನು ಮಂಗಳೂರಿನಲ್ಲಿ ಮಾರಲು ಶುರುಮಾಡಿದರು. ಮಂಗಳೂರಿನಲ್ಲಿ ಸಾವಿರಾರು ಭಾಷೆ ಮಾತನಾಡುವ ಜನರ ಮಧ್ಯೆ ಭಾಷೆ ಬಾರದೆ, ಮುಜುಗರಕ್ಕೊಳಗಾಗುವ ಸಂದರ್ಭ ಇವರಗೆ ಎದುರಾಯಿತು. ಅಂದೆ ಹಾಜಬ್ಬ ನವರು ತನ್ನೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ನಿರ್ಧರಿಸಿದರು.
ಶಾಲೆ ಕಟ್ಟಿಸಬೇಕೆಂದು ಜಿಲ್ಲಾ ಪಂಚಾಯತಿ ಜಿಲ್ಲಾಧಿಕಾರಿ ಕಚೇರಿಗಳಿಗೆ ಅಲೆದಾಡಿದರು. ವ್ಯಾಪಾರವನ್ನು ಬದಿಗಿಟ್ಟು ಶಾಲೆ ಕಟ್ಟಲು ಅನುಮತಿ ಪಡೆಯಲು ಹರಸಾಹಸ ಪಡೆದ ಹಾಜಬ್ಬನವರಿಗೆ, ಶಾಲೆಯ ಆರಂಭಕ್ಕೆ ಅನುಮತಿ ದೊರೆಯಲಿಲ್ಲ. ಆದರೂ ಹಾಜಬ್ಬನವರು ಹಠ ಬಿಡಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಶಾಲೆ ಕಟ್ಟಿಸಲು ಜಿಲ್ಲಾ ಪಂಚಾಯತ್ ಅನುಮತಿ ನೀಡಿತು.1999 ರಲ್ಲಿ ಜೂನ್ 6 ರಂದು ನ್ಯೂಪಡ್ಪು ಗ್ರಾಮದ ಮದರಸ ಕಟ್ಟಡದಲ್ಲಿ ತಾತ್ಕಾಲಿಕವಾಗಿ 28 ಮಕ್ಕಳೊಂದಿಗೆ ಪ್ರಾರ್ಥಮಿಕ ಶಾಲೆ ಆರಂಭಿಸಿದರು.

ಹಾಜಬ್ಬರ ಹೋರಾಟಕ್ಕೆ ಜಯ:
ಮಕ್ಕಳಿಗಾಗಿ ಶಾಲೆ ಕಟ್ಟಿಸಲು ಅಂದು ಸಂಗ್ರಹಿಸಿದ ಹಣ 25000. ಗ್ರಾಮದಲ್ಲಿ ಬೇರೆಯವರು ಅತಿಕ್ರಮಣ ಮಾಡಿದ್ದ ಸರ್ಕಾರಿ ಜಾಗವನ್ನು ಶಾಲೆಗಾಗಿ ನೀಡುವಂತೆ ಅಧಿಕಾರಿಗಳ ಮುಂದೆ ಹಠ ಹಿಡಿದರು. 2004ರಲ್ಲಿ ಪತ್ರಿಕೆಯೆಂದು ನೀಡಿದ ವರ್ಷದ ವ್ಯಕ್ತಿಯ 1ಲಕ್ಷ ರೂ ಬಹುಮಾನದ ಮೊತ್ತವನ್ನು, ಶಾಲೆಯ ಕಟ್ಟಡ ಕಟ್ಟಲು ಹಾಕಿದರು. ಅಂದು ಶಾಸಕರಾಗಿದ್ದ ಯುಟಿ ಖಾದರ್ ಅವರು ಊರಿಗೆ ಪ್ರೌಢಶಾಲೆ ಮಂಜೂರು ಮಾಡಿದರು. ಹಾಜಬ್ಬ ಅವರ ಸತತ ಪ್ರಯತ್ನದಿಂದ ಹರೇಕಳಕ್ಕೆ ಪ್ರೌಢಶಾಲೆ ಮಂಜೂರಾಯಿತು.
ಸ್ವಸಹಾಯ ಸಂಘಗಳಿಂದ ಸಹಾಯ:
ಹಾಜಬ್ಬ ನವರ ಹಠದಿಂದ ಶಾಲೆಯ ಅಭಿವೃದ್ಧಿ ಮಾಡಲು ಮುಂದಾದರು, ಇದರ ಬಗ್ಗೆ ಎಲ್ಲೆಡೆ ಚರ್ಚೆಯಾಗಿ ಅನೇಕರು ಮುಂದೆ ಬಂದು ಕೈಜೋಡಿಸಿದರು. ಶಾಲಾ ಕಟ್ಟಡಕ್ಕಾಗಿ ಸ್ವಸಹಾಯ ಸಂಘಗಳು ಸಹಾಯ ಮಾಡಿದರು. ಹಣ್ಣು ಮಾರುತ್ತಲೇ ಶಾಲೆಯೊಂದನ್ನು ಕಟ್ಟಿಸಿದ ಹಾಜಬ್ಬ ಹೆಸರುವಾಸಿಯಾದರು.

ಹಾಜಬ್ಬನವರಿಗೆ ಸಂದ ಪ್ರಶಸ್ತಿಗಳು:
ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರು ಇಂದಿಗೂ ಕಿತ್ತಳೆ ಹಣ್ಣುಗಳನ್ನು ಮಾರುತ್ತಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ಅನೇಕ ವಿವಿಗಳ ಪಠ್ಯಪುಸ್ತಕದಲ್ಲಿ ಹಾಜಬ್ಬರ ಕಥೆಯು ಪಾಠವಾಗಿ ಸೇರ್ಪಡೆಯಾಗಿರುವುದು ಮತ್ತೊಂದು ಗೌರವ.
ಹಾಜಬ್ಬ ಅವರ ಹಠದಿಂದ ತಮ್ಮೂರಿಗೆ ಶಾಲೆ ಕಟ್ಟಿಸಿ ಸಾವಿರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಿರುವ ಕಾರಣ ಹಾಜಬ್ಬ ರವರನ್ನು ಅಕ್ಷರ ಸಂತ ಎಂದು ಕರೆಯುತ್ತಾರೆ.