ಬೆಂಗಳೂರು: ಅಡುಗೆ ಅನಿಲ(LPG) ಬೆಲೆ ಏರಿಕೆ ಬೆನ್ನಲ್ಲೇ ಹೋಟೆಲ್ ತಿಂಡಿ ಬೆಲೆ ಏರಿಕೆಯಾಗಿದ್ದು ಇಂದಿನಿಂದಲ್ಲೇ ಜಾರಿಯಾಗುತ್ತಿದೆ. ತೈಲ(Fuel) ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದ್ದರಿಂದ ನಿಟ್ಟುಸಿರು ಬಿಟ್ಟಿದ್ದ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ ಮುಟ್ಟಿದೆ. ಇಂದಿನಿಂದಲೇ ರಾಜ್ಯಾದ್ಯಂತ ಹೋಟೆಲ್ ತಿಂಡಿ ಬೆಲೆಗಳಲ್ಲಿ ಹೆಚ್ಚಳ ಮಾಡಲು ಹೋಟೆಲ್ ಮಾಲಿಕರ ಸಂಘ ನಿರ್ಧರಿಸಿದೆ.
ಎಷ್ಟು ಹೆಚ್ಚಳ?
ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ (Commercial LPG cylinder) ದರ ಏರಿಕೆಯಾದ ಹಿನ್ನೆಲೆ ಹೋಟೆಲ್ ತಿನಿಸುಗಳ ಬೆಲೆ ಶೆ.೧೦ರಷ್ಟು ಏರಿಸಲು ಹೋಟೆಲ್ ಮಾಲಿಕರ ಸಂಘ ನಿರ್ಧರಿಸಿದೆ. ಅದರಂತೆ ೧೨ ರೂಪಾಯಿ ಇದ್ದ ಕಾಫಿ ಅಥವಾ ಟೀ ಇನ್ನು ೧೫ ರೂಪಾಯಿ ಆಗಲಿದೆ. ೩೦ ರೂಪಾಯಿಯಿದ್ದ ಇಡ್ಲಿ ವಡೆಯಂತಹ ಬೆಳಗ್ಗಿನ ತಿಂಡಿ ೩೫ ರೂಪಾಯಿ, ೪೦ ರೂಪಾಯಿಯಿದ್ದ ಸೆಟ್ ದೋಸೆ ೪೫ ರೂಪಾಯಿ, ೫೦ ರೂಪಾಯಿ ಇದ್ದ ಮಸಾಲೆ ದೋಸೆ ೬೦ ರೂಪಾಯಿ, ೪೦ ರೂಪಾಯಿಯ ರೈಸ್ ಬಾತ್ ೪೫ ರೂಪಾಯಿ, ೪೦ ರೂಪಾಯಿಯ ಅನ್ನ ಸಾಂಬಾರ್ ೪೫ ರೂಪಾಯಿ, ೮೦ ರೂಪಾಯಿಯ ಮೀಲ್ಸ್ ೧೦೦ ರೂಪಾಯಿ ಹೀಗೆ ಪ್ರತಿ ತಿನಿಸಿನಬೆಲೆಯನ್ನೂ ಶೇ೧೦ ರಷ್ಟು ಏರಿಕೆ ಮಾಡಲು ರಾಜ್ಯ ಹೋಟೆಲ್ ಮಾಲಿಕರ ಸಂಘ ತೀರ್ಮಾನಿಸಿದೆ.

ಬೆಲೆ ಏರಿಕೆಗೆ ಕಾರಣಗಳೇನು?
ಕಳೆದ ಎರಡು ವರ್ಷಗಳಿಂದಲೂ ರಾಜ್ಯದಲ್ಲಿ ಹೋಟೆಲ್ ತಿನಿಸಿನ ಬೆಲೆ ಸ್ಥಿರವಾಗಿದ್ದು, ಕೋವಿಡ್ ಸಮಯದಲ್ಲಿಯೂ ಬೆಲೆಯನ್ನು ಏರಿಕೆ ಮಾಡಿರಲಿಲ್ಲ. ಕೋವಿಡ್ ಸಮಯದಲ್ಲಿ ಸಾಮಾನ್ಯ ಜನತೆ ಸಂಕಷ್ಟದಲ್ಲಿರುವ ಕಾರಣ ನಷ್ಟದಲ್ಲಿದ್ದರೂ ಸಹ ಹೋಟೆಲುಗಳು ಬೆಲೆ ಏರಿಕೆ ಮಾಡಿರಲಿಲ್ಲ. ಆದರೆ ಈಗ ತೈಲ(Fuel) ಬೆಲೆ ಏರಿಕೆಯ ನಂತರ ದಿನಸಿ, ತರಕಾರಿ ಸೇರಿದಂತೆ ಎಲ್ಲಾ ಅವಶ್ಯಕ(Essentials) ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ, ಜೊತೆಗೆ ಇತ್ತೀಚೆಗೆ ವಾಣಿಜ್ಯಕ್ಕೆ ಬಳಸುವ ಅಡುಗೆ ಅನಿಲ ಎಲ್ಪಿಜಿ(LPG)ಯ ಬೆಲೆಯೂ ಸಹ ಏರಿಕೆ ಕಂಡಿದೆ. ಒಟ್ಟಿನಲ್ಲಿ ಗ್ಯಾಸ್, ದಿನಸಿ, ಅಡುಗೆ ಎಣ್ಣೆ, ತೈಲ ಹೀಗೆ ಎಲ್ಲದರ ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ಹೊಡೆತವಾಗುತ್ತಿದ್ದು ಇದು ಹೋಟೆಲ್ ತಿನಿಸಿನ ಬೆಲೆ ಏರಿಕೆಗೆ ಬಹುದೊಡ್ಡ ಕಾರಣವಾಗಿದೆ.
ಇದನ್ನೂ ಓದಿ: Puneeth Rajkumar :ಪುನೀತ್ ರಾಜಕುಮಾರ್ ಅವರ ಕನಸಾಗಿತ್ತು ಆ ಯೋಜನೆ
ಕಳೆದ ಎರಡು ತಿಂಗಳಿನಿಂದಲೂ ರಾಜ್ಯ ಹೋಟೆಲ್ ಮಾಲಿಕರ ಸಂಘದಲ್ಲಿ ಈ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆದಿದ್ದು, ಕೋವಿಡ್ ೧೯ ಪ್ರಭಾವ ಕಡಿಮೆಯಾಗಲೆಂದು ಈ ನಿರ್ಧಾರವನ್ನು ಮುಂದೂಡಲಾಗುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಉದ್ಯಮಗಳು ನಷ್ಟಕ್ಕೆ ಸಿಲುಕಿದ್ದು ಹೋಟೆಲ್ ಉದ್ಯಮವೂ ಹೊರತಾಗಿಲ್ಲ. ಇದೀಗ ಮತ್ತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಸಹ ಹೋಟಲ್ ಉದ್ಯಮಕ್ಕೆ ಭಾರಿ ಹೊಡೆತ ನೀಡುತ್ತಿದ್ದು ಹೋಟೆಲ್ ಮಾಲಿಕರ ಸಂಘ ಈ ನಿರ್ಧಾರಕ್ಕೆ ಬಂದಿದೆ. ಬಹುತೇಕ ಹೋಟೆಲ್ ಗಳು ಇಂದಿನಿಂದಲೇ ಪರಿಷ್ಕೃತ ದರವನ್ನು ನಿಗದಿಪಡೆಸಿ ಚಾಲ್ತಿಗೆ ತರಲಿದ್ದು ಮತ್ತಷ್ಟು ಹೋಟೆಲ್ ಗಳು ನವೆಂಬರ್ ೧೫ರ ನಂತರ ಅಥವಾ ಡಿಸೆಂಬರ್ ವೇಳೆಗೆ ದರವನ್ನು ಪರಿಷ್ಕೃತಗೊಳಿಸಲು ನಿರ್ಧರಿಸಿವೆ.
ಒಟ್ಟಿನಲ್ಲಿ ತೈಲ ಬೆಲೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಕಂಡು ಇದೆಲ್ಲದರಿಂದ ಕಂಗೆಟ್ಟಿರುವ ಗ್ರಾಹಕರಿಗೆ ಈಗ ಹೋಟೆಲ್ ತಿನಿಸಿನ ಬೆಲೆಯೂ ಹೆಚ್ಚಳವಾಗಿ ಶಾಕ್ ನೀಡಿದೆ.