ಬೆಂಗಳೂರು (ನ.8): ಮೇಕೆದಾಟು ಅಣೆಕಟ್ಟು ನಿರ್ಮಾಣದ ಕಾಮಗಾರಿಯನ್ನು ಪುನರಾರಂಭಿಸುವಂತೆ ರಾಜ್ಯ ಕಾಂಗ್ರೆಸ್ ಪಾದಯಾತ್ರೆ ನಡೆಸಲು ನಿರ್ಧರಿಸಿದೆ.
ಡಿಸೆಂಬರ್ ಮೊದಲ ವಾರದಲ್ಲಿ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ನಡೆಸಲು ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಘೋಷಿಸಿದರು.
ನಾನಾ ಜಿಲ್ಲೆಗಳಿಂದ ಕಾರ್ಯಕರ್ತರು ಬಾಗಿ:
ಪಾದಯಾತ್ರೆಯಲ್ಲಿ ಬೆಂಗಳೂರು ರಾಮನಗರ ಮಂಡ್ಯ ಮೈಸೂರು ಹಾಸನ ಚಿಕ್ಕಬಳ್ಳಾಪುರ ತುಮಕೂರು ಕೋಲಾರ ಸೇರಿದಂತೆ ಇತರ ಜಿಲ್ಲೆಗಳಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಾಥ್ ನೀಡಲಿದ್ದಾರೆ.

ರಾಜಕೀಯಕ್ಕಾಗಿ ಪಾದಯಾತ್ರೆಯಲ್ಲ: ಜನರ ಹಿತಕ್ಕಾಗಿ
ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಜ್ಯದ ಹಿತಾಸಕ್ತಿಗಾಗಿ ಈ ಪಾದಯಾತ್ರೆಯನ್ನು ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಮ್ಮ ಜಾಗದಲ್ಲಿ ಯೋಜನೆ ಜಾರಿ ಮಾಡಲು ಕಾನೂನಾತ್ಮಕವಾಗಿ ಯೋಜನೆ ಮಾಡಲು ನಮಗೆ ಅವಕಾಶವಿದೆ. ಯೋಜನೆಯನ್ನು ಜಾರಿಗೆ ತರಲು ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದೇವೆ. ಕೂಡಲೇ ಕೇಂದ್ರ ಪರಿಸರ ಇಲಾಖೆ ಇದಕ್ಕೆ ಸ್ಪಷ್ಟತೆ ನೀಡಬೇಕು. ಕರ್ನಾಟಕ ಸರ್ಕಾರ ಕೂಡಲೇ ಯೋಜನೆಯನ್ನು ಆರಂಭಿಸಿ ಎಂದು ಹೇಳಿದರು.
ಕರ್ನಾಟಕದ ಪರ ಕಾಂಗ್ರೆಸ್ ಇರುತ್ತದೆ:
ಡಿಸೆಂಬರ್ ಮೊದಲ ವಾರದಲ್ಲಿ ಪಾದಯಾತ್ರೆ ಶುರು ಮಾಡುತ್ತೇವೆ. ಮೇಕೆದಾಟು ನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಬೇಕು ಎಷ್ಟು ದಿನ ಪಾದಯಾತ್ರೆ ಎಂಬುದಾಗಿ ಶೀಘ್ರದಲ್ಲೇ ತಿಳಿಸುತ್ತೇವೆ. ಮೇಕೆದಾಟು ಯೋಜನೆ ಕೇಂದ್ರ ಅನುಮತಿ ನೀಡಿಲ್ಲ. ರಾಜ್ಯ ಸರ್ಕಾರ ಅನುಮತಿ ನೀಡಿಲ್ಲವೆಂದು ಸುಮ್ಮನೆ ಕುಳಿತಿದೆ. ಹೀಗಾಗಿ ಮೇಟಿ ಮೇಕೆದಾಟು ಯೋಜನೆ ಜಾರಿಗಾಗಿ ಪಾದಯಾತ್ರೆ ಕೈಗೊಂಡಿದ್ದೇವೆ. ರಾಜಕೀಯ ಕಾರಣಕ್ಕಾಗಿ ತಮಿಳುನಾಡು ಯೋಜನೆಗೆ ವಿರೋಧ ಮಾಡುತ್ತಿದೆ. ರಾಜಕೀಯ ಕಾರಣಕ್ಕಾಗಿ ತಮಿಳುನಾಡು ಈ ಬಗ್ಗೆ ಜಗಳ ಮಾಡುತ್ತಿದೆ. ಕರ್ನಾಟಕ ಕನ್ನಡಿಗರ ಪರ ಕಾಂಗ್ರೆಸ್ ಪಕ್ಷ ಯಾವಾಗಲೂ ಇದ್ದೇ ಇರುತ್ತದೆ ಎಂದು ತಿಳಿಸಿದ್ದಾರೆ.