ವಿರಾಜಪೇಟೆ (ನ.7): ಮಸೀದಿಯ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ ಆರೋಪದಡಿ ಚೋರನೊಬ್ಬನನ್ನು ಬಂಧಿಸಿರುವ ಘಟನೆ ವಿರಾಜಪೇಟೆಯಲ್ಲಿ ನೆನ್ನೆ ನಡೆದಿದೆ.
ವಿರಾಜಪೇಟೆ ನಗರ ಪೊಲೀಸರು ಬಂಧಿಸುವಲ್ಲಿ ಆರೋಪಿಯನ್ನು ಯಶಸ್ವಿಯಾಗಿದ್ದಾರೆ. ವಿರಾಜಪೇಟೆಯ ಸುಣ್ಣದ ಬೀದಿ ನಿವಾಸಿ ಮೊಹಮ್ಮದ್ ಶೊಯೆಬ್(28) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಮಸೀದಿಯ ಬೀಗ ಮುರಿದು ಕನ್ನಕ್ಕೆ ಯತ್ನ:
ಅ.22ರಂದು ವಿರಾಜಪೇಟೆ ನಗರದ ನೆಹರು ನಗರದಲ್ಲಿರುವ ನೂರುಲ್ ಇಸ್ಲಾಂ ದರ್ಗಾ ಮತ್ತು ಮಸೀದಿಯ ಹುಂಡಿಯಲ್ಲಿದ್ದ ಸುಮಾರು 10 ಸಾವಿರ ರೂ. ನಗದು ಕಳ್ಳತನವಾಗಿತ್ತು. ಆನಂತರ ಅ.23ರಂದು ಮಸೀದಿಯ ಕಾರ್ಯದರ್ಶಿ ಶಿಯಾಬ್ ಸಿ.ಎಂ ಎಂಬವರು ಬೆಳಗ್ಗೆ ಎಂದಿನಂತೆ ಮಸೀದಿಗೆ ಬಂದಾಗ ಹುಂಡಿಯ ಬೀಗ ಮುರಿದು ನಗದು ದೋಚಿರುವುದು ಕಂಡು ಬಂತು. ಈ ಕುರಿತು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಶಿಯಾಬ್ ಅವರು ದೂರು ದಾಖಲಿಸಿದ್ದರು.

ಹಲವು ಮಸೀದಿಗಳಲ್ಲಿ MP3 Player ಕಳವು:
ಕಳೆದ ನ.5ರಂದು ಮುಂಜಾನೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಶೊಯೆಬ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬಯಲಾಗಿದೆ. ತನಿಖೆಯ ಸಂದರ್ಭ ಆರೋಪಿ ಶೊಯೆಬ್ ವಿರಾಜಪೇಟೆಯಲ್ಲಿ ಸೇರಿದಂತೆ ಮೈಸೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಸೀದಿಯಲ್ಲಿರುವ (MP3 Player) ಪ್ಲೇಯರ್‌ಗಳ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಶೊಯೆಬ್ ಬಳಿಯಿಂದ ಮೊಬೈಲ್ ಫೋನ್ ಮತ್ತು ನಗದನ್ನು ವಶಕ್ಕೆ ಪಡಿಸಿಕೊಂಡು ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.
ವಿರಾಜಪೇಟೆ ಡಿವೈಎಸ್‌ಪಿ ಸಿ.ಟಿ. ಜಯಕುಮಾರ್, ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ನೇತೃತ್ವದಲ್ಲಿ ವಿರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗದ ಉಪ ನಿರೀಕ್ಷಕರಾದ ಹೆಚ್.ಎಸ್. ಬೋಜಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪಿ.ಯು. ಮುನೀರ್, ಮುಸ್ತಾಫ, ಗೀರಿಶ್, ಮಧು, ರಜನ್ ಕುಮಾರ್, ಜಿಲ್ಲಾ ಸಿ.ಡಿ.ಆರ್. ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.