ಬೆಂಗಳೂರು:Bit Coin ಬಿಟ್ ಕಾಯಿನ್ ಹಗರಣದ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿರುವ ಬೆನ್ನಲ್ಲೇ ಹಗರಣದ ಪ್ರಮುಖ ರೂವಾರಿ ಎನ್ನಲಾಗಿದ್ದು ಜಾಮೀನಿನ ಮೇಲೆ ಹೊರ ಬಂದಿದ್ದ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದಿರುವುದು ಬಿಟ್ ಕಾಯಿನ್ ಪ್ರಕರಣದ ಹಿಂದೆ ಅವಿತಿರುವ ಪ್ರಭಾವಿ ವ್ಯಕ್ತಿಗಳಿಗೆ ನಡುಕ ಹುಟ್ಟಿಸಿದೆ.
ರಾಯಲ್ ಆರ್ಕಿಡ್ ನಲ್ಲಿ ತಂಗಿದ್ದ ಶ್ರೀಕಿ:
ಇಂದಿರಾನಗರದ ರಾಯಲ್ ಆರ್ಕಿಡ್ ಸ್ಟಾರ್ ಹೋಟೆಲ್ ನಲ್ಲಿ ಶ್ರೀಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೋಟೆಲ್ ನ ಬಳಿ ಶ್ರೀಕಿ ಗೆಳೆಯ ಆಗಮಿಸಿ ಗಲಾಟೆ ಮಾಡಿದ್ದಾನೆ. ಇದರಿಂದ ಪೊಲೀಸರಿಗೆ ಹೋಟೆಲ್ ನಿಂದ ಮಾಹಿತಿ ಹೋಗಿದ್ದು ಶ್ರೀಕಿಯನ್ನು ಬಂಧಿಸಲು ಸಹಾಯವಾಗಿದೆ.
ಹೋಟೆಲ್ ನಲ್ಲಿ ತಂಗಿದ್ದ ಶ್ರೀಕಿಯನ್ನು ಗೆಳೆಯ ವಿಷ್ಣು ಭಟ್ ಭೇಟಿಯಾಗಲು ಬಂದಿದ್ದ. ಕುಡಿದ ಮತ್ತಿನಲ್ಲಿದ್ದ ವಿಷ್ಣು ಭಟ್ ಹೋಟೆಲ್ ನ ಸೆಕ್ಯೂರಿಟಿ ಜೊತೆ ಜಗಳವಾಡಿ, ಸೆಕ್ಯೂರಿಟಿ ಗಾರ್ಡ್ ಕೆನ್ನೆಗೆ ಹೊಡೆದಿದ್ದು ಈ ವೇಳೆ ಹೋಟೆಲ್ ಸಿಬ್ಬಂದಿ ಆತ ಯಾರ ಭೇಟಿಗೆ ಬಂದಿದ್ದಾನೆ ಎಂದು ವಿಚಾರಿಸಿದಾಗ ಶ್ರೀಕಿ ಹೆಸರು ಹೊರ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ವಿಷ್ಣು ಭಟ್, ಶ್ರೀಕಿಯ ರೂಮ್ ನಂಬರ್ ಹೇಳಿದ್ದಾನೆ. ಕೂಡಲೇ ಹೋಟೆಲ್ ಸಿಬ್ಬಂದಿ ಶ್ರೀಕಿ ಮತ್ತು ವಿಷ್ಣು ಭಟ್ ಈ ಇಬ್ಬರ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದು ಶ್ರೀಕಿಯ ಬಂಧನಕ್ಕೆ ಕಾರಣವಾಗಿದೆ.

ಹೋಟೆಲ್ ಬಳಿ ಆಗಮಿಸಿದ ಪೊಲೀಸರು ಶ್ರೀಕಿಯನ್ನು ವಶಕ್ಕೆ ವಿಚಾರಣೆ ನಡೆಸಿದ್ದಾರೆ. ಶ್ರೀಕಿ ಜಾಮೀನು ಪಡೆದ ಬಳಿಕ ಎಲ್ಲೂ ಕಾಣಿಸಿಕೊಂಡಿರಲಿಲ್ಲ.
ಶ್ರೀಕಿ ಕಳೆದ ಒಂದೂವರೆ ತಿಂಗಳಿಂದ ಫೈವ್ ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವುದು ತಿಳಿದು ಬಂದಿದೆ.
ಎರಡು ತಿಂಗಳ ಹಿಂದೆ ಜಾಮೀನು ಮೇಲೆ ಹೊರಬಂದಿದ್ದ.ಆದರೆ ಈತಎಲ್ಲಿದ್ದಾನೆ ಎಂದು ತಿಳಿದು ಬಂದಿರಲಿಲ್ಲ. ಶ್ರೀಕಿ ಬಳಸಿದ್ದ ಲ್ಯಾಪ್ ಟಾಪನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆಯಿಂದ ಹಲವು ವಿಷಯಗಳು ಬಹಿರಂಗವಾಗುವ ಸಾಧ್ಯತೆ ಇದ್ದು, ಹಗರಣದಲ್ಲಿ ಭಾಗಿಯಾಗಿರುವ ಪ್ರಭಾವಿಗಳಿಗೆ ಆತಂಕ ಶುರುವಾಗಿದೆ.