ಬೆಂಗಳೂರು: ಕನ್ನಡ ಚಲನಚಿತ್ರರಂಗದ ಪವರ್ ಎಂದೇ ಪ್ರಖ್ಯಾತಿ ಆಗಿದ್ದ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲಾ ಅಗಲಿ ಇಂದಿಗೆ 9 ದಿನಗಳು ಕಳೆದರೂ, ಕನ್ನಡ ನಾಡಿನಲ್ಲಿ ಅವರನ್ನ ನೆನಸಿಕೊಳ್ಳದೇ ಇರುವ ದಿನವಿಲ್ಲ.
ನಟ ರಾಘವೇಂದ್ರ ರಾಜಕುಮಾರ್ ಫೇಸ್ಬುಕ್ ಪೇಜಿನಲ್ಲಿ ಫ್ಯಾಮಿಲಿ ಫೋಟೋವನ್ನು ಹಂಚಿಕೊಂಡು ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಬಾಲ್ಯದ ಫೋಟೋ ಒಂದರಲ್ಲಿ ಪುಟಾಣಿ ಯಾಗಿದ್ದ ಪುನೀತ್ ರಾಜಕುಮಾರ್ ಅವರ ಫೋಟೋ ಒಂದು ಅಪ್ಲೋಡ್ ಮಾಡಲಾಗಿದೆ.
‘ಚಿಕ್ಕವನೇ ಹೋಗಿಬಿಟ್ಟ’:
ನಟ ರಾಘವೇಂದ್ರ ರಾಜಕುಮಾರ್ ಅವರು ತಮ್ಮ ಪ್ರೀತಿಯ ತಮ್ಮನಾದ ಪುನೀತ್ ಅಗಲಿಕೆಯ ನೋವಿನಲ್ಲಿ ಇದ್ದಾರೆ. ಎಲ್ಲರ ಮುಂದೆ ಧೈರ್ಯದಿಂದ ಮಾತನಾಡುವವರು ಮನದಲ್ಲಿಯೇ ಪುನೀತ್ ಅವರನ್ನು ನೆನೆದು ಸಂಕಟಪಡುತ್ತಾರೆ. ಪ್ರತಿನಿತ್ಯ ತಮ್ಮ ದಿನಚರಿಯಲ್ಲಿ ಫೇಸ್ಬುಕ್ ನಲ್ಲಿ ಪುನೀತ್ ರವರ ಭಾವಚಿತ್ರಗಳನ್ನು ಹಾಗೂ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿನ ಒಂದು ಪೋಸ್ಟ್ ನಲ್ಲಿ ‘ಚಿಕ್ಕವನೇ ಬೇಗ ಹೋಗಿಬಿಟ್ಟ’ ಈ ಫೋಟೋವನ್ನು ನೋಡಿದಾಗ ಕಣ್ಣಿಗೆ ಕತ್ತಲೆ ಕವಿಯುತ್ತಿದೆ. ಎಂದು ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ನಟ ರಾಘಣ್ಣ ಅವರಿಗೆ ಧೈರ್ಯ ತುಂಬಿದ ಅಭಿಮಾನಿಗಳು:
ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಸಾವಿರಾರು ಅಭಿಮಾನಿಗಳು ಸಂತಾಪ ಸೂಚಿಸಿದ್ದು ನಟ ರಾಘವೇಂದ್ರ ರಾಜಕುಮಾರ್ ಅವರಿಗೆ ಧೈರ್ಯ ಹೇಳುವ ಮಾತುಗಳನ್ನು ಆಡಿದ್ದಾರೆ. ಫೋಟೋದಲ್ಲಿ ಡಾ ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಪೂರ್ಣಿಮಾ, ಲಕ್ಷ್ಮಿ ಹಾಗೂ ಪುನೀತ್ ರಾಜಕುಮಾರ್ ಅವರು ಇದ್ದಾರೆ.
ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಇಂದಿಗೂ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡಿ ನಮಸ್ಕರಿಸುತ್ತಿದ್ದಾರೆ.
ಶ್ರೀ ರಾಜಕುಮಾರ್ ಅವರ ಮೇಲೆ ಅಭಿಮಾನಿಗಳು ಇಟ್ಟಿರುವ ಪ್ರೀತಿಗೆರಾಘವೇಂದ್ರ ರಾಜಕುಮಾರ್ ಅವರು ಧನ್ಯವಾದ ಅರ್ಪಿಸಿದ್ದಾರೆ.
ಪುನೀತ್ ಹುಟ್ಟುಹಬ್ಬ ದ ದಿನ ನೇತ್ರದಾನ ದಿನಾಚರಣೆ:
ವರನಟ ಡಾ ರಾಜಕುಮಾರ್ ಅವರಂತೆ ಮಗ ಪುನೀತ್ ರಾಜಕುಮಾರ್ ಅವರು ನೇತ್ರದಾನ ಮಾಡಿ 4 ಅಂದರ ಬಾಳಿಗೆ ಬೆಳಕಾಗಿದ್ದಾರೆ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು, ಅಪ್ಪುವಿನ ಹಾದಿಯನ್ನೇ ಹಿಂಬಾಲಿಸುತ್ತಾ ಸ್ವಯಂ ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ನೇತ್ರದಾನ ದಿನಾಚರಣೆಯನ್ನಾಗಿ ಆಚರಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನೇತ್ರದಾನ ಮಾಡಲು ಮುಂದಾದ ಯುವಕರು:
ನಟ ಪುನೀತ್ ರಾಜಕುಮಾರ್ ಹಾಗೂ ನಟ ಸಂಚಾರಿ ವಿಜಯ್ ಮರಣದ ನಂತರ ನೇತ್ರದಾನ ಮಾಡಿರುವುದರ ಕುರಿತಾಗಿ ಜಾಗೃತಿ ಹೆಚ್ಚಾಗಿದ್ದು,ನೇತ್ರದಾನ ಮಾಡುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಈ ಕುರಿತಂತೆ ನಗರದ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾಕ್ಟರ್ ಸುಜಾತಾ ಅವರು ಮಾತನಾಡಿ, ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ, ಸಾಕಷ್ಟು ಯುವಕರು ನೇತ್ರದಾನ ಮಾಡಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪುನೀತ್ ಸಮಾಧಿಗೆ ಸೂರ್ಯ ಭೇಟಿ: ಗೆಳೆಯನನ್ನು ಕಳೆದುಕೊಂಡು ಗದ್ಗದಿತರಾದ ತಮಿಳು ನಟ
ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ಹೆಸರು ಶಿಫಾರಸು:
ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಹಾಗೂ ಈ ಸಂಬಂಧ ರಾಜ ಕುಟುಂಬದವರೊಂದಿಗೆ ಸರ್ಕಾರ ಚರ್ಚಿಸಲಿದೆ. ಪದ್ಮಶ್ರೀ ಪ್ರಶಸ್ತಿಗೆ ಅಪ್ಪು ಹೆಸರು ಶಿಫಾರಸ್ಸು ಮಾಡಲಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ ರವರು ತಿಳಿಸಿದ್ದಾರೆ.
ಏನೇ ಇರಲಿ ಪುನೀತ್ ರಾಜಕುಮಾರ್ ಅವರ ನೆನಪು ದೇಶದಾದ್ಯಂತ ಅಜರಾಮರವಾಗಿದೆ. ಅವರ ಹಾದಿಯಲ್ಲಿ ಸಾಕಷ್ಟು ಅಭಿಮಾನಿಗಳು ನಡೆಯುತ್ತಿರುವುದು ಸಂತೋಷಕರ ವಿಷಯವಾಗಿದೆ.