ಬೆಂಗಳೂರು: ಈ ಐತಿಹಾಸಿಕ ಕಟ್ಟಡ ನಿರ್ಮಾಣವಾಗಿ ಬರೋಬ್ಬರಿ ೧೨೧ ವರ್ಷಗಳಾಗಿವೆ. ಸರ್ಕಾರಿ ಸ್ವಾಮ್ಯದಲ್ಲಿರುವ ಈ ಕಟ್ಟಡದಲ್ಲಿ ಮೊದಲ ಬಾರಿಗೆ ದೀಪಾಲಂಕಲಾರ ಮಾಡಲಾಗಿದೆ! ಹೌದು ಇದು ವಿಕ್ಟೋರಿಯಾ ಆಸ್ಪತ್ರೆಯ ಕಥೆ. ೧೨೧ ವರ್ಷ ಹಳೆಯ ಈ ಆಸ್ಪತ್ರೆಯ ಆಡಳಿತ ಕಛೇರಿಯು ಮೊದಲ ಭಾರಿಗೆ ದೀಪಾವಳಿಯ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಹೌದು.. ಬೆಂಗಳೂರಿನ ಅತ್ಯಂತ ಹಳೆಯ ಕಟ್ಟಡಗಳಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕೂಡ ಒಂದಾಗಿದ್ದು, 1900ರಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಿತ್ತು.
1901ರಲ್ಲಿ ಈ ಆಸ್ಪತ್ರೆ ಕಾರ್ಯಾರಂಭ ಮಾಡಿತ್ತು. ಮೈಸೂರು ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ 1901 ರಲ್ಲಿ ಈ ಪ್ರತಿಷ್ಠಿತ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದ್ದರು.

ಶತಮಾನ ಕಾಲದ ಆಸ್ಪತ್ರೆ ಬೆಂಗಳೂರಿನಲ್ಲಿ ಕಳಾಸಿಪಾಳ್ಯದಲ್ಲಿರುವ ಈ ಆಸ್ಪತ್ರೆಯು ಸುಮಾರು ಒಂದು ಶತಮಾನ ಕಾಲದ್ದು. ರಾಣಿ ಕೆಂಪನಂಜಮ್ಮಣ್ಣಿಯವರು ರಾಣಿ ವಿಕ್ಟೋರಿಯಾರ ಆಳ್ವಿಕೆಯ 60 ವರ್ಷಗಳು ಪೂರ್ಣಗೊಂಡ ನೆನಪಿಗಾಗಿ ಮೈಸೂರು ರಾಜ್ಯಕ್ಕೆ ಮಹಾರಾಣಿಯ ರಾಜಪ್ರತಿನಿಧಿಯಾಗಿ 22 ಜೂನ್ 1897 ರಂದು ಆಸ್ಪತ್ರೆಯ ಅಡಿಗಲ್ಲನ್ನು ಹಾಕಿದ್ದರು. ನಂತರ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯನ್ನು ಭಾರತದ ಆಗಿನ ವೈಸ್ರಾಯ್ ಲಾರ್ಡ್ ಕರ್ಜನ್ ಅವರು ಔಪಚಾರಿಕವಾಗಿ 8 ನೇ ಡಿಸೆಂಬರ್ 1900 ರಂದು ಉದ್ಘಾಟಿಸಿದರು.
ಅಂದು ಆಸ್ಪತ್ರೆ, ಕೇವಲ 140 ಹಾಸಿಗೆಗಳ ಒಂದು ಸಣ್ಣ ಆರೋಗ್ಯ ಕೇಂದ್ರವಾಗಿ ಪ್ರಾರಂಭವಾಯಿತು. ಆದರೆ ಇಂದು ಅದು ಭಾರತದ ಎರಡನೇ ಅತೀ ದೊಡ್ಡ ಆಸ್ಪತ್ರೆಯಾಗಿದೆ. ಇದೀಗ ಇಲ್ಲಿ ಒಂದು ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ: ಪುನೀತ್ ಸಮಾಧಿಗೆ ಸೂರ್ಯ ಭೇಟಿ: ಗೆಳೆಯನನ್ನು ಕಳೆದುಕೊಂಡು ಗದ್ಗದಿತರಾದ ತಮಿಳು ನಟ
ಅಂತೆಯೇ ಈ ಆಸ್ಪತ್ರೆಯು ಒಂದು ಬೋಧನಾ ಆಸ್ಪತ್ರೆಯಾಗಿದ್ದು, ಬೆಂಗಳೂರು ಮೆಡಿಕಲ್ ಕಾಲೇಜ್ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದೆ. ಇದು ಪ್ರಧಾನ ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ಒಂದು ಎನಿಸಿಕೊಂಡಿದ್ದಲ್ಲದೇ ಸಂಶೋಧನಾ ಸಂಸ್ಥೆಯೂ ಆಗಿದೆ. ಈಗ ಅದಕ್ಕೆ ಮರುನಾಮಕರಣ ಮಾಡಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಎಂದು ಹೆಸರಿಡಲಾಗಿದೆ.