ಸೂರ್ಯ ನಟನೆಯ ‘ಜೈ ಭೀಮ್’ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಎಲ್ಲ ಕಡೆಗಳಿಂದ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಸಿನಿಮಾ ಮೇಲೆ ಇಟ್ಟ ಭರವಸೆ ಹುಸಿಯಾಗಿಲ್ಲ. ಸೂರ್ಯ ನಟನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಈ ಮಧ್ಯೆ ಸಿನಿಮಾದಲ್ಲಿ ಬರುವ ಒಂದು ದೃಶ್ಯದ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಪ್ರಕಾಶ್ ರಾಜ್ ವಿರುದ್ಧ ಸಾಕಷ್ಟು ಜನರು ದ್ವೇಷ ಕಾರುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಕನ್ನಡ ನಟನ ಪರವಾಗಿ ಧ್ವನಿ ಎತ್ತಿದ್ದಾರೆ.
‘ಜೈ ಭೀಮ್’ ಚಿತ್ರದಲ್ಲಿ ದೃಶ್ಯವೊಂದು ಬರುತ್ತದೆ. ಈ ದೃಶ್ಯದಲ್ಲಿ ಪ್ರಕಾಶ್ ರಾಜ್ ಬಳಿ ಬರುವ ಅಟೆಂಡರ್ ಓರ್ವ ಹಿಂದಿಯಲ್ಲಿ ಮಾತನಾಡುತ್ತಾನೆ. ಈ ವೇಳೆ ಪ್ರಕಾಶ್ ರೈ ಅವರು ಆತನ ಕೆನ್ನೆಗೆ ಬಾರಿಸಿ ತಮಿಳಿನಲ್ಲಿ ಮಾತನಾಡುವಂತೆ ಸೂಚಿಸುತ್ತಾರೆ. ಇದೇ ದೃಶ್ಯವನ್ನು ಇಟ್ಟುಕೊಂಡು ಕೆಲವರು ಕೊಂಕು ತೆಗೆದಿದ್ದಾರೆ.

‘ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಅವರವರ ಇಷ್ಟ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅಟೆಂಡರ್ ಹಿಂದಿ ಮಾತನಾಡಿದ ಎನ್ನುವ ಕಾರಣಕ್ಕೆ ಅವನಿಗೆ ಹೊಡೆಯುವ ಅಧಿಕಾರವನ್ನು ಪ್ರಕಾಶ್ ರೈಗೆ ಕೊಟ್ಟವರು ಯಾರು’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೆಲವರು ವಿರೊಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಫಿಟ್ಟಾಗಿದ್ದ ಸ್ಯಾಂಡಲ್ ವುಡ್ ನ ನಟ ಪುನೀತ್ ಗೆ ಆಗಿದ್ದಾದರೂ ಏನು?
ದಕ್ಷಿಣ ಭಾರತದವರ ಮೇಲೆ ಹಿಂದಿ ಹೇರಿಕೆ ನಡೆಯುತ್ತಿದೆ ಎನ್ನುವ ಕೂಗು ಈ ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಅನೇಕರು ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ. ಆ ದೃಷ್ಟಿಯಲ್ಲೇ ನಿರ್ದೇಶಕರು ಈ ದೃಶ್ಯ ಹೆಣೆದಿದ್ದಾರೆ. ಆದರೆ, ಪ್ರಕಾಶ್ ರಾಜ್ ವಿರುದ್ಧ ಎಲ್ಲರೂ ತಿರುಗಿ ಬಿದ್ದಿದ್ದಾರೆ.
ಪ್ರಕಾಶ್ ರಾಜ್ ನಟ. ನಿರ್ದೇಶಕರು ಹೇಳಿದಂತೆ ಅವರು ನಟಿಸಿದ್ದಾರೆ. ಇದಕ್ಕೆ ಅವರ ವಿರುದ್ಧ ಆರೋಪ ಹೊರಿಸುವುದು ಎಷ್ಟು ಸರಿ ಎಂದು ಎಲ್ಲರೂ ಕೇಳುತ್ತಿದ್ದಾರೆ. ಅಲ್ಲದೆ, ನಟನ ಬೆಂಬಲಕ್ಕೆ ನಿಂತಿದ್ದಾರೆ.